ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷಸ್ ಟ್ರೋಫಿ ಮೇಲೆ ಆಸ್ಟ್ರೇಲಿಯಾ ಹಿಡಿತ, ಸ್ಕಾಟ್ ದಾಳಿಗೆ ಇಂಗ್ಲೆಂಡ್ ದೂಳೀಪಟ

Last Updated 29 ಡಿಸೆಂಬರ್ 2021, 10:32 IST
ಅಕ್ಷರ ಗಾತ್ರ

ಮೆಲ್ಬರ್ನ್: ಪದಾರ್ಪಣೆ ಪಂದ್ಯದಲ್ಲಿಯೇ ಸ್ಕಾಟ್ ಬೊಲ್ಯಾಂಡ್ ತಮ್ಮ ವೇಗದ ಶಕ್ತಿಯ ಪರಿಚಯವನ್ನು ಕ್ರಿಕೆಟ್ ಜಗತ್ತಿಗೆ ಮಾಡಿಕೊಟ್ಟರು.

ಅವರ ಬಿರುಗಾಳಿ ವೇಗಕ್ಕೆ ಇಂಗ್ಲೆಂಡ್ ತಂಡದ ಆಟಗಾರರು ತತ್ತರಿಸಿಹೋದರು. ಅದರ ಪರಿಣಾಮವಾಗಿ ಆ್ಯಷಸ್ ಸರಣಿಯು 3–0ಯಿಂದ ಅಸ್ಟ್ರೇಲಿಯಾದ ಕೈವಶವಾಯಿತು. ಸತತ ಮೂರನೇ ಪಂದ್ಯದಲ್ಲಿ ಜೋ ರೂಟ್ ಬಳಗವು ಇನಿಂಗ್ಸ್ ಮತ್ತು 14 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು.

ಮೆಲ್ಬರ್ನ್ ಕ್ರಿಕೆಟ್ ಅಂಗಳದಲ್ಲಿ ಸ್ಕಾಟ್ (4–1–7–6) ದಾಳಿಯ ಮುಂದೆ ಇಂಗ್ಲೆಂಡ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 68 ರನ್‌ಗಳಿಗೆ ದೂಳೀಪಟವಾಯಿತು. ಮೊದಲ ಇನಿಂಗ್ಸ್‌ನಲ್ಲಿ 185 ರನ್‌ಗಳಿಸಿದ್ದ ಇಂಗ್ಲೆಂಡ್ ತಂಡದ ಎದುರು ಆಸ್ಟ್ರೇಲಿಯಾ 82 ರನ್‌ಗಳ ಅಲ್ಪ ಮುನ್ನಡೆ ಗಳಿಸಿತ್ತು. ಆದರೆ, ಎರಡನೇ ಇನಿಂಗ್ಸ್‌ನಲ್ಲಿ ಪುಟಿದೇಳುವ ಅವಕಾಶವನ್ನು ಬಳಸಿಕೊಳ್ಳದ ಇಂಗ್ಲೆಂಡ್ ಈಗ ವ್ಯಾಪಕ ಟೀಕೆಗೊಳಗಾಗಿದೆ.

ಕೇವಲ ಎರಡೂವರೆ ದಿನಗಳಲ್ಲಿಯೇ ಪಂದ್ಯ ಮುಕ್ತಾಯವಾಗಿದೆ. ಸೋಮವಾರ ಎರಡನೇ ಇನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ 12 ಓವರ್‌ಗಳಲ್ಲಿ 31 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಮೂರನೇ ದಿನದಾಟದ ಊಟದ ವಿರಾಮಕ್ಕೂ ಮುನ್ನವೇ 37 ರನ್‌ಗಳಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ದಿನದಾಟದಲ್ಲಿ ಆಡಿದ್ದು 15.4 ಓವರ್‌ಗಳನ್ನು ಮಾತ್ರ.

ತಮ್ಮ ತವರಿನ ಅಂಗಳದಲ್ಲಿಯೇ 32 ವರ್ಷದ ಸ್ಕಾಟ್ ಪದಾರ್ಪಣೆ ಪಂದ್ಯವನ್ನು ಅವಿಸ್ಮರಣೀಯಗೊಳಿಸಿಕೊಂಡರು. ಎರಡನೇ ದಿನ ಎರಡು ವಿಕೆಟ್ ಗಳಿಸಿದ್ದ ಅವರು ಮೂರನೇ ದಿನದಾಟದಲ್ಲಿ ಮತ್ತೆ ನಾಲ್ಕು ವಿಕೆಟ್ ಕಿತ್ತರು.

ಅದರಲ್ಲಿ ಪ್ರಮುಖವಾಗಿ ಇಂಗ್ಲೆಂಡ್ ನಾಯಕ ರೂಟ್ (28; 59ಎ), ಜಾನಿ ಬೆಸ್ಟೊ (5 ರನ್) ಅವರ ವಿಕೆಟ್ ಉರುಳಿಸಿದ್ದು ಆತಿಥೇಯರಿಗೆ ಶೀಘ್ರ ಗೆಲುವು ಒಲಿಯಲು ಕಾರಣವಾದವು. ಅಲ್ಲದೇ ಕಡಿಮೆ ಎಸೆತಗಳಲ್ಲಿ (19) ಐದು ವಿಕೆಟ್‌ಗಳ ಗೊಂಚಲು ಗಳಿಸಿದ ದಾಖಲೆ ಮಾಡಿದರು.

2015ರ ಆ್ಯಷಸ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಮತ್ತು 1947ರ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಎರ್ನಿ ತೊಷ್ಯಾಕ್ ಅವರು ಮಾಡಿದ್ದ ದಾಖಲೆಯನ್ನು ಸ್ಕಾಟ್ ಸರಿಗಟ್ಟಿದರು.

‘ನನ್ನ ಹಿಂದೆ ಯಾವಾಗಲೂ ಇಷ್ಟೊಂದು ಜನಸಮೂಹ ಇರಲಿಲ್ಲ. ವಿಕೆಟ್‌ ಪಡೆಯಲು ಆರಂಭಿಸಿದಾಗ ಗ್ಯಾಲರಿಯಲ್ಲಿದ್ದ ಜನರ ಚಪ್ಪಾಳೆ, ಹುರಿದುಂಬಿಸುವ ನುಡಿಗಳಿಂದ ಪುಳಕಿತನಾದೆ. ಫೈನ್‌ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುವಾಗಲೂ ಜನರ ಹುರಿದುಂಬಿಸುವಿಕೆ ಮುದ ನೀಡಿತು. ಅದೇ ಶಕ್ತಿಯಾಯಿತು’ ಎಂದು ಪಂದ್ಯದ ನಂತರ ಸ್ಕಾಟ್ ಹೇಳಿದರು.

ಆಸ್ಟ್ರೇಲಿಯಾ ತಂಡದಲ್ಲಿ ಆಡಿದ ಎರಡನೇ ಮೂಲನಿವಾಸಿ ಸ್ಕಾಟ್ ಆಗಿದ್ದಾರೆ. 2006ರಲ್ಲಿ ಜೇಸನ್ ಗಿಲೆಸ್ಪಿ ದೇಶದ ತಂಡಕ್ಕೆ ಆಡಿದ್ದ ಸ್ಥಳೀಯ ನಿವಾಸಿಯಾಗಿದ್ದರು. ಸ್ಕಾಟ್ ಗುಲಿಡ್ಜನ್ ಬುಡಕಟ್ಟು ಮೂಲದವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT