ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ –ಇಂಗ್ಲೆಂಡ್‌ ಟೆಸ್ಟ್ ಸರಣಿ: ವರ್ಷದ ಬಳಿಕ ಕ್ರಿಕೆಟ್‌ ಪುಳಕ

ಭಾರತ –ಇಂಗ್ಲೆಂಡ್‌ ಟೆಸ್ಟ್ ಸರಣಿ ಇಂದಿನಿಂದ
Last Updated 4 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಭಾರತ ಮತ್ತು ಇಂಗ್ಲೆಂಡ್ ತಂಡಗಳು 87 ವರ್ಷಗಳ ಹಿಂದೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಮೊದಲ ಸಲ ಮುಖಾಮುಖಿಯಾಗಿದ್ದವು. ಆಗ ಸ್ವಾತಂತ್ರ್ಯ ಚಳವಳಿಯ ಬಿಸಿ ದೇಶವನ್ನು ಆವರಿಸಿತ್ತು.

ಆದರೆ ಆಗಿನ್ನೂ ರಾಷ್ಟ್ರದಲ್ಲಿ ಕ್ರಿಕೆಟ್ ಮತ್ತು ಕ್ರಿಕೆಟಿಗರ ಕುರಿತ ಕ್ರೇಜ್ ಇರಲಿಲ್ಲ. ಆ ಪಂದ್ಯದಲ್ಲಿ ಕರ್ನಲ್ ಸಿ.ಕೆ. ನಾಯ್ಡು ನಾಯಕತ್ವದ ತಂಡವು ಸೋತರೂ ದೊಡ್ಡಮಟ್ಟದ ಸುದ್ದಿಯೇನಾಗಿರಲಿಲ್ಲ. ಆದರೆ ಇಂದಿನ ಪರಿಸ್ಥಿತಿ ಆ ರೀತಿ ಇಲ್ಲ. ಭಾರತದಲ್ಲಿ ಕ್ರಿಕೆಟ್‌ನ ಹುಚ್ಚು ತಾರಕಕ್ಕೇರಿದೆ. ಕ್ರಿಕೆಟ್‌ ಆಟಗಾರರು ತಾರಾಪಟ್ಟಕ್ಕೇರಿದ್ದಾರೆ. ಅವರ ಪ್ರತಿಯೊಂದು ಚಲನವಲನ, ಆಡಿದ ಮಾತು ಸುದ್ದಿಯಾಗುವ ಕಾಲ ಇದು.

ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಕ್ರಿಕೆಟಿಗರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಡಿರುವ ಟ್ವೀಟ್‌ಗಳು ಚರ್ಚೆಗೆ ಗ್ರಾಸವಾಗಿರುವುದು ಇದಕ್ಕೊಂದು ಉದಾಹರಣೆ. ಅಷ್ಟೇ ಅಲ್ಲ; ಭಾರತ ತಂಡದ ಸಮಾಲೋಚನಾ ಸಭೆಯಲ್ಲಿಯೂ ರೈತರ ಪ್ರತಿಭಟನೆಯ ಬಗ್ಗೆ ಆಟಗಾರರು ಚರ್ಚಿಸಿದ್ದಾರಂತೆ. ಈ ವಿಷಯವನ್ನು ಸ್ವತಃ ಕೊಹ್ಲಿಯೇ ಬಹಿರಂಗಪಡಿಸಿದ್ದಾರೆ. ಇಂತಹ ಬೆಳವಣಿಗೆ ಇದೇ ಮೊದಲು ಎನ್ನಬಹುದೇನೋ?

ಇದಷ್ಟೇ ಅಲ್ಲ. ಶುಕ್ರವಾರ ಚೆಪಾಕ್‌ನಲ್ಲಿ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಕೊರೊನಾ ಕಾಲಘಟ್ಟದಲ್ಲಿ ಮೊದಲ ಬಾರಿಗೆ ಭಾರತದ ನೆಲದಲ್ಲಿ ನಡೆಯುತ್ತಿರುವ ದ್ವಿಪಕ್ಷೀಯ ಹಣಾಹಣಿಯೂ ಆಗಿದೆ. ಭಾರತ ಕ್ರಿಕೆಟ್ ತಂಡಕ್ಕಿರುವ ಸವಾಲುಗಳು ಒಂದೆಡೆಯಾದರೆ; ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಂದೆ ಇರುವ ಒತ್ತಡ ಇನ್ನೊಂದು ಬಗೆಯದು.

ಆಟಗಾರರ ಮುಂದಿರುವ ಸವಾಲು: ಈ ಹಿಂದೆ ವಿದೇಶಿ ತಂಡಗಳು ಭಾರತಕ್ಕೆ ಬರುವಾಗ ಸ್ಪಿನ್‌ ಬೌಲಿಂಗ್ ಎದುರಿಸುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದವು. ‌ಆ ಭಯದಲ್ಲಿಯೇ ಹೆಚ್ಚುಕಮ್ಮಿ ಸೋಲಿನತ್ತ ಹೆಜ್ಜೆ ಹಾಕುತ್ತಿದ್ದವು. ಈ ಸಲ ಇಂಗ್ಲೆಂಡ್‌ ತಂಡಕ್ಕೂ ಅಂತಹದೇ ಆತಂಕ ಇದೆ. ಏಕೆಂದರೆ ಭಾರತ ತಂಡವು ಮೂರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲಿರುವುದು ಮತ್ತು 100ನೇ ಟೆಸ್ಟ್ ಆಡಲಿರುವ ಜೋ ರೂಟ್ ಬಿಟ್ಟರೆ ಇಂಗ್ಲೆಂಡ್ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ಲಯದಲ್ಲಿ ಇಲ್ಲದಿರುವುದು ಭಾರತಕ್ಕೆ ಅನುಕೂಲವಾಗುವ ಸಾಧ್ಯತೆ ಇದೆ.

ಈ ಸಲದ ವಿಶೇಷವೆಂದರೆ; ಭಾರತ ತಂಡದ ಆಟಗಾರರಿಗೆ ಇಂಗ್ಲೆಂಡ್‌ ತಂಡದ ಆಟಗಾರರಿಗಿಂತ ತಮ್ಮ ತಂಡದೊಳಗಿನ ಆಟಗಾರರಿಂದಲೇ ಪೈಪೋಟಿ ಇದೆ. ಪ್ರತಿಯೊಬ್ಬರೂ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಆಡಿ ಸ್ಥಾನ ಗಟ್ಟಿಗೊಳಿಸಿಕೊಳ್ಳುವ ತವಕದಲ್ಲಿದ್ದಾರೆ. ಇದಕ್ಕೆ ಕಾರಣ; ಹೋದ ತಿಂಗಳು ಆಸ್ಟ್ರೇಲಿಯಾದಲ್ಲಿ ಭಾರತ ತಂಡವು ಸಾಧಿಸಿದ ಐತಿಹಾಸಿಕ ಸರಣಿ ಜಯ.

ಅಲ್ಲಿ ಭಾರತವು ಬಾರ್ಡರ್‌–ಗಾವಸ್ಕರ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದಾಗ ತಂಡದಲ್ಲಿದ್ದದ್ದು ಅರ್ಧ ಡಜನ್ ಯುವ ಆಟಗಾರರು. ಅದರಲ್ಲಿ ಐವರು ಮೊದಲ ಬಾರಿಗೆ ಟೆಸ್ಟ್ ಸರಣಿಯಲ್ಲಿ ಆಡಿದವರು. ಜೊತೆಗೆ ಅಜಿಂಕ್ಯ ರಹಾನೆಯೆಂಬ ‘ಕೂಲ್‌ ಬಾಯ್’ ನಾಯಕತ್ವದ ಪರಾಕಾಷ್ಠೆ. ಪ್ರವಾಹದ ವಿರುದ್ಧ ಈಜಿ ಗೆದ್ದು ದಂತಕಥೆಯಾದ ಅಧ್ಯಾಯವದು. ಆದ್ದರಿಂದ ಸ್ವದೇಶದಲ್ಲಿ ಆಡಿ ಜಯಿಸಲೇಬೇಕಾದ ಒತ್ತಡ ಭಾರತ ತಂಡದ ಮೇಲೆ ಇದೆ. ತಂಡದಲ್ಲಿರುವ ಅನುಭವಿಗಳು ಗಾಯದಿಂದ ಚೇತರಿಸಿಕೊಂಡು ಮರಳಿದ್ದಾರೆ. ಅವರು ತಮ್ಮ ದೈಹಿಕ ಮತ್ತು ಮಾನಸಿಕ ಬಲವನ್ನು ಹೇಗೆ ಪಣಕ್ಕೊಡ್ಡುತ್ತಾರೆಂಬ ಕುತೂಹಲ ಈಗ ಗರಿಗೆದರಿದೆ. ಆಸ್ಟ್ರೇಲಿಯಾದ ಬೌನ್ಸಿ ಪಿಚ್‌ಗಳಲ್ಲಿ ಶರವೇಗಿಗಳನ್ನು ಎದುರಿಸಿ ನಿಂತ ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶುಭಮನ್ ಗಿಲ್, ರಿಷಭ್ ಪಂತ್ ಅವರು ಅಭಿಮಾನಿಗಳ ಕಣ್ಮಣಿಗಳಾದರು. ಅಲ್ಲಿ ನಿರೀಕ್ಷೆಗೆ ತಕ್ಕಂತೆ ಆಡದ ರೋಹಿತ್ ಶರ್ಮಾ, ವೃದ್ಧಿಮಾನ್ ಸಹಾ ಮತ್ತು ಮಯಂಕ್ ಅಗರವಾಲ್ ತಮ್ಮ ಲಯಕ್ಕೆ ಮರಳುವರೇ?

ಇನ್ನು ಬೌಲಿಂಗ್ ವಿಭಾಗದತ್ತ ನೋಡಿದರೆ, ಅನುಭವಿ ಬೌಲರ್ ಇಶಾಂತ್ ಶರ್ಮಾ ತಂಡಕ್ಕೆ ಮರಳಿದ್ದಾರೆ. ಆದರೆ, ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪದಾರ್ಪಣೆ ಮಾಡಿ ಮೂರು ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಗಳಿಸಿ ಮಿಂಚಿದ್ದ ಮೊಹಮ್ಮದ್ ಸಿರಾಜ್ ಅವರ ಪೈಪೋಟಿಯನ್ನು ಶರ್ಮಾ ಎದುರಿಸಬೇಕಿದೆ. ಗಾಯಗೊಂಡ ಕಾರಣ ಇಶಾಂತ್ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರಲಿಲ್ಲ. ಇಶಾಂತ್ 97 ಟೆಸ್ಟ್‌ಗಳಲ್ಲಿ ಆಡಿದ್ದಾರೆ. ಮೂರು ಸ್ಪಿನ್ನರ್ ಮತ್ತು ಇಬ್ಬರು ವೇಗಿಗಳೊಂದಿಗೆ ಭಾರತವು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಜಸ್‌ಪ್ರೀತ್ ಬೂಮ್ರಾ ಅವರ ಸ್ಥಾನವಂತೂ ಖಚಿತ. ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್ ಮತ್ತು ಬೂಮ್ರಾ ಅವರ ನಡುವಿನ ಕದನವೆಂದೇ ಈ ಸರಣಿಯನ್ನು ಬಿಂಬಿಸಲಾಗಿದೆ.

ರವೀಂದ್ರ ಜಡೇಜ ಗಾಯದಿಂದ ಚೇತರಿಸಿಕೊಳ್ಳದ ಕಾರಣ, ಹಾರ್ದಿಕ್ ಪಾಂಡ್ಯ ಅಥವಾ ಸ್ಥಳೀಯ ಹೀರೊ ವಾಷಿಂಗ್ಟನ್ ಸುಂದರ್ ಅವರಲ್ಲಿ ಒಬ್ಬರಿಗೆ ಸ್ಥಾನ ನೀಡುವ ಮಾತುಗಳೂ ಕೇಳಿಬಂದಿದ್ದವು. ಆದರೆ ಅಶ್ವಿನ್ ಇರುವುದರಿಂದ ಪಾಂಡ್ಯ ಕಣಕ್ಕಿಳಿಯುವ ಸಾಧ್ಯತೆಯೇ ಹೆಚ್ಚು. ಅವರು ಮಧ್ಯಮವೇಗದ ಬೌಲಿಂಗ್ ಕೂಡ ಮಾಡಲು ಸಿದ್ಧರಾಗಿದ್ಧಾರೆ. ಹನುಮವಿಹಾರಿಯ ಅನುಪಸ್ಥಿತಿಯಲ್ಲಿ ಮಧ್ಯಮ ಕ್ರಮಾಂಕವನ್ನು ಬಲಪಡಿಸುವ ಹೊಣೆ ಮಯಂಕ್ ಮೇಲೆ ಬೀಳುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ; ಗಿಲ್ ಮತ್ತು ರೋಹಿತ್ ಇನಿಂಗ್ಸ್ ಆರಂಭಿಸುವುದೂ ಬಹುತೇಕ ಖಚಿತ.

ಬಿಸಿಸಿಐ ಮುಂದಿರುವ ಸವಾಲು

ಕೊರೊನಾ ಕಾಲದಲ್ಲಿ ಇದೇ ಮೊದಲ ಸಲ ಬಯೋಬಬಲ್‌ನಲ್ಲಿ ಅಂತರರಾಷ್ಟ್ರೀಯ ಸರಣಿಯನ್ನು ಬಿಸಿಸಿಐ ಆಯೋಜಿಸುತ್ತಿದೆ. ಇದರ ಯಶಸ್ಸಿನ ಮೇಲೆ ಭಾರತದ ನೆಲದಲ್ಲಿ ಮುಂದಿನ ಕ್ರಿಕೆಟ್ ಚಟುವಟಿಕೆಗಳ ಮಾರ್ಗಸೂಚಿ ಸಿದ್ಧವಾಗಲಿದೆ. ಪ್ರಮುಖವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ಆಯೋಜನೆ. ದುಡ್ಡಿನ ಹೊಳೆ ಹರಿಯುವ ಈ ಟೂರ್ನಿಯನ್ನು ಭಾರತದಲ್ಲಿಯೇ ನಡೆಸುವ ಛಲ ಮಂಡಳಿಗೆ ಇದೆ.

ಹೋದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಐಪಿಎಲ್ ಆಯೋಜಿಸಲಾಗಿತ್ತು. ಇದೀಗ ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇಳಿಮುಖವಾಗಿವೆ ಮತ್ತು ಲಸಿಕೆ ಕೂಡ ಬಂದಿರುವುದರಿಂದ ಬಿಸಿಸಿಐ ಭಾರತದಲ್ಲಿಯೇ ಐಪಿಎಲ್ ಆಯೋಜಿಸಲಿದೆ. ಅದಕ್ಕೂ ಮುನ್ನ ಇಂಗ್ಲೆಂಡ್ ಎದುರಿನ ಸರಣಿಯು ಪ್ರಯೋಗಶಾಲೆಯಾಗಲಿದೆ. ಚೆನ್ನೈನಲ್ಲಿಯೇ ನಡೆಯುವ ಎರಡನೇ ಟೆಸ್ಟ್‌ನಲ್ಲಿ ಮೈದಾನಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡುವುದಾಗಿಯೂ ಬಿಸಿಸಿಐ ತಿಳಿಸಿದೆ. ಆದ್ದರಿಂದ ಸರಣಿಯನ್ನು ಸಮಸ್ಯೆಮುಕ್ತವಾಗಿ ನಡೆಸುವ ಸವಾಲು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT