ಶುಕ್ರವಾರ, ಡಿಸೆಂಬರ್ 6, 2019
21 °C

ವಿಶ್ವಕಪ್ 2011 | ನಾನು ಶತಕದಂಚಿನಲ್ಲಿ ಔಟಾಗಲು ದೋನಿಯ ಆ ಮಾತು ಕಾರಣ: ಗಂಭೀರ್

Published:
Updated:

2011ರ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಪಂದ್ಯ (ಏಪ್ರಿಲ್‌ 2ರಂದು) ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿತ್ತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ 275 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ್ದ ಭಾರತಕ್ಕೆ ಆರಂಭಿಕ ಆಘಾತ ಕಾದಿತ್ತು. ಖಾತೆ ತೆರೆಯುವ ಮೊದಲೇ ಆರಂಭಿಕ ವೀರೇಂದ್ರ ಸೆಹ್ವಾಗ್‌ ಪೆವಿಲಿಯನ್‌ ಸೇರಿಕೊಂಡಿದ್ದರು. ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌(18) ಅವರೂ ಹೆಚ್ಚು ಹೊತ್ತು ನಿಂತಿರಲಿಲ್ಲ.

ತಂಡದ ಮೊತ್ತ 31 ಆಗುವಷ್ಟರಲ್ಲೇ ಪ್ರಮುಖ ಎರಡು ವಿಕೆಟ್‌ ಕಳೆದುಕೊಂಡಿದ್ದ ಭಾರತಕ್ಕೆ ಆಗ ಆಸರೆಯಾಗಿದ್ದು ಗೌತಮ್‌ ಗಂಭೀರ್‌. ತಾಳ್ಮೆಯಿಂದ ಇನಿಂಗ್ಸ್‌ ಕಟ್ಟಿದ್ದ ಅವರು ಎರಡು ಪ್ರಮುಖ ಜೊತೆಯಾಟದಲ್ಲಿ ಭಾಗಿಯಾದರು. ಈಗಿನ ನಾಯಕ ವಿರಾಟ್‌ ಕೊಹ್ಲಿ(35) ಜೊತೆ ಸೇರಿ ಮೂರನೇ ವಿಕೆಟ್‌ಗೆ 83 ರನ್‌ ಹಾಗೂ ಆಗಿನ ನಾಯಕ ಮಹೇಂದ್ರ ಸಿಂಗ್‌ ದೋನಿ ಜೊತೆ 4ನೇ ವಿಕೆಟ್‌ಗೆ 109ರನ್‌ ಕೂಡಿಸಿದ್ದರು.

122 ಎಸೆತಗಳಲ್ಲಿ 9 ಬೌಂಡರಿ ಸಹಿತ 97 ರನ್‌ ಗಳಿಸಿ ತಿಸಾರ ಪೆರೆರಾ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರಾದರೂ, ಅಷ್ಟರಲ್ಲಿ ತಂಡ ಗೆಲುವಿನ ಸನಿಹಕ್ಕೆ ಬಂದು ನಿಂತಿತ್ತು. ಬಳಿಕ ಬಿರುಸಿನ ಬ್ಯಾಟಿಂಗ್‌ ನಡೆಸಿದ್ದ ದೋನಿ(92), ಯುವರಾಜ್‌ ಸಿಂಗ್‌(21) ಜೊತೆ ಸೇರಿ 48.2 ಎರಡನೇ ಓವರ್‌ನಲ್ಲಿ ಜಯದ ಲೆಕ್ಕ ಚುಕ್ತಾ ಮಾಡಿದ್ದರು.

ಭಾರತವು ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಸಲ ವಿಶ್ವಕಪ್‌ ಎತ್ತಿ ಹಿಡಿದು ವಿಶ್ವ ವಿಜೇತ ಎನಿಸಿಕೊಂಡಿತು.

ಈಗ ಅದೆಲ್ಲ ಇತಿಹಾಸ.

ಇದಾಗಿ ಎಂಟು ವರ್ಷಗಳ ಬಳಿಕ ಗಂಬೀರ್‌, ಶತಕದ ಹೊಸ್ತಿಲಿನಲ್ಲಿದ್ದಾಗ ತಾವು ಔಟಾದದ್ದು ಏಕೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ.

‘97 ರನ್‌ ಗಳಿಸುವ ವರೆಗೂ ತಾಳ್ಮೆಯಿಂದ ಆಡಿದ್ದ ನಿಮಗೆ ಏನಾಯಿತು? ಶತಕಕ್ಕೆ ಇನ್ನು ಮೂರೇಮೂರು ರನ್‌ ಬೇಕಿದ್ದಾಗ ಔಟಾಗಿದ್ದು ಏಕೆ ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದಾರೆ. ನಾನು 97 ರನ್‌ ಗಳಿಸುವ ವರೆಗೂ ನನ್ನ ಗಮನವಿದ್ದದ್ದು ಶ್ರೀಲಂಕಾ ನೀಡಿದ್ದ ಗುರಿ ಮೇಲೆ ಮಾತ್ರ. ಅದಾದ ನಂತರ, ಶತಕ ಗಳಿಸಲು ನನಗೆ ಕೇವಲ ಮೂರು ರನ್‌ ಬೇಕಿದೆ ಎಂಬುದನ್ನು ದೋನಿ ನೆನಪಿಸಿದ್ದರು. ಯಾವಾಗ ದೋನಿ ಹೀಗೆ ಹೇಳಿದರೋ ಅಲ್ಲಿಂದಾಚೆಗೆ ನನ್ನ ಮನಸ್ಸು ವೈಯಕ್ತಿಕ ಪ್ರದರ್ಶನದ ಕಡೆಗೆ ವಾಲಿತು’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮುಂದುವರಿದು, ‘97ರನ್‌ ಗಳಿಸುವವರೆಗೂ ನಾನು ವರ್ತಮಾನದಲ್ಲಿದ್ದು ಆಡಿದ್ದೆ. ಒಂದು ವೇಳೆ ಅದೇ ಪ್ರದರ್ಶನ ಮುಂದುವರಿಸಿದ್ದಿದ್ದರೆ, ಸುಲಭವಾಗಿ ಶತಕ ಬಾರಿಸುತ್ತಿದ್ದೆ. ಆದರೆ ದೋನಿ ಮಾತಿನ ಬಳಿಕ ಒತ್ತಡ ಹೆಚ್ಚಿದಂತಾಯಿತು’ 

‘ಅದಕ್ಕಾಗಿಯೇ ವರ್ತಮಾನದಲ್ಲಿ ಉಳಿಯುವುದು ಬಹಳ ಮುಖ್ಯ. ಔಟಾದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು, ‘ಈ ಮೂರು ರನ್‌ಗಳು ನನ್ನನ್ನು ಜೀವನದುದ್ದಕ್ಕೂ ಕಾಡಲಿವೆ’ ಎಂದು ನನಗೆ ನಾನೇ ಹೇಳಿಕೊಂಡಿದ್ದೆ. ಆ ಮೂರು ರನ್‌ ಗಳಿಸಲು ಏಕೆ ಸಾಧ್ಯವಾಗಲಿಲ್ಲ ಎಂದು ಜನರು ಇವತ್ತಿಗೂ ಕೇಳುತ್ತಾರೆ’ ಎಂದು ಹೇಳಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು