ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲ್‌ ಆಫ್‌ ಫೇಮ್‌ಗೆ ಸಚಿನ್‌

ಆ್ಯಲನ್‌ ಡೊನಾಲ್ಡ್‌, ಆಸ್ಟ್ರೇಲಿಯಾದ ಕ್ಯಾಥರಿನ್‌ಗೂ ದಕ್ಕಿದ ಗೌರವ
Last Updated 19 ಜುಲೈ 2019, 19:07 IST
ಅಕ್ಷರ ಗಾತ್ರ

ಲಂಡನ್‌: ಭಾರತದ ಬ್ಯಾಟಿಂಗ್‌ ಕಣ್ಮಣಿ ಸಚಿನ್‌ ತೆಂಡೂಲ್ಕರ್‌ ಮತ್ತು ದಕ್ಷಿಣ ಆಫ್ರಿಕದ ಮಾಜಿ ವೇಗದ ಬೌಲರ್ ಆ್ಯಲನ್‌ ಡೊನಾಲ್ಡ್‌ ಅವರನ್ನು ಐಸಿಸಿಯ ‘ಹಾಲ್‌ ಆಫ್‌ ಫೇಮ್‌’ ಗೌರವಕ್ಕೆ ಸೇರ್ಪಡೆ ಮಾಡಲಾಗಿದೆ.

ತೆಂಡೂಲ್ಕರ್‌ ಈ ಗೌರವಕ್ಕೆ ಪಾತ್ರರಾದ ದೇಶದ ಆರನೇ ಆಟಗಾರ. ಈ ಹಿಂದೆ ಸುನೀಲ್‌ ಗಾವಸ್ಕರ್‌, ಬಿಷನ್‌ ಸಿಂಗ್ ಬೇಡಿ, ಕಪಿಲ್‌ ದೇವ್, ಅನಿಲ್‌ ಕುಂಬ್ಳೆ ಮತ್ತು ರಾಹುಲ್‌ ದ್ರಾವಿಡ್‌ ಅವರು ಈ ಗೌರವ ಪಡೆದಿದ್ದರು.

ಸಚಿನ್‌, ಡೊನಾಲ್ಡ್‌ ಅವರ ಜೊತೆ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯಾ ಮಹಿಳಾ ತಂಡದ ಆಟಗಾರ್ತಿ ಕ್ಯಾಥರಿನ್‌ ಫಿಟ್ಜ್‌ ಪ್ಯಾಟ್ರಿಕ್‌ ಕೂಡ ‘ಹಾಲ್‌ ಆಫ್‌ ಫೇಮ್‌’ ಗೌರವಕ್ಕೆ ಸೇರ್ಪಡೆಗೊಂಡಿದ್ದಾರೆ.

‘ಕ್ರಿಕೆಟ್‌ ಆಟಗಾರರ ಕೊಡುಗೆಯನ್ನು ಪರಿಗಣಿಸಿ ಕೊಡಮಾಡುವ ಹಾಫ್‌ ಆಫ್‌ ಫೇಮ್‌ಗೆ ಸೇರ್ಪಡೆ ಮಾಡಿರುವುದು ನನಗೆ ಸಂದ ಗೌರವ. ಈ ಆಟಗಾರರು ಆಟದ ಬೆಳವಣಿಗೆ ಮತ್ತು ಜನಪ್ರಿಯತೆಗೆ ಕಾಣಿಕೆ ನೀಡಿದ್ದಾರೆ. ನನ್ನ ಕೈಲಾದಷ್ಟು ಕೊಡುಗೆ ನೀಡಿದ್ದು ಸಂತಸ ತಂದಿದೆ’ ಎಂದು ಐಸಿಸಿಯ ಸಮಾರಂಭದಲ್ಲಿ ತೆಂಡೂಲ್ಕರ್‌ ಹೇಳಿದರು. ತಮ್ಮ ಎರಡೂವರೆ ದಶಕಗಳ ಕ್ರಿಕೆಟ್‌ ಪಯಣದಲ್ಲಿ ಬೆಂಬಲ ನೀಡಿದ ಕುಟುಂಬ ಮತ್ತು ಕೋಚ್‌ಗೆ ಅವರು ಕೃತಜ್ಞತೆ ಸಲ್ಲಿಸಿದರು.

‘ಈ ಸಂದರ್ಭದಲ್ಲಿ ನನ್ನ ದೀರ್ಘ ಕ್ರಿಕೆಟ್‌ ಜೀವನದುದ್ದಕ್ಕೂ ಜೊತೆಯಿದ್ದವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಪೋಷಕರು, ಸೋದರ ಅಜಿತ್‌, ಪತ್ನಿ ಅಂಜಲಿ ನನಗೆ ಶಕ್ತಿ ತುಂಬಿದವರು. ರಮಾಕಾಂತ ಅಚ್ರೇಕರ್‌ ಅಂಥ ಮಾರ್ಗದರ್ಶಕ ಮತ್ತು ಕೋಚ್‌ ಅವರನ್ನು ಪಡೆದ ನಾನು ಅದೃಷ್ಟಶಾಲಿ’ ಎಂದು 46 ವರ್ಷದ ಮುಂಬೈನ ಆಟಗಾರ ಹೇಳಿದರು.

ಕ್ರಿಕೆಟ್‌ ಜಗತ್ತಿನ ಅತಿ ಯಶಸ್ವಿ ಆಟಗಾರ ಎನಿಸಿರುವ ಸಚಿನ್‌ ಅವರನ್ನು, ಅಗತ್ಯ ಅರ್ಹತೆ ಪೂರೈಸಿದ ತಕ್ಷಣ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ನಿಯಮದ ಪ್ರಕಾರ ‘ಹಾಲ್‌ ಆಫ್‌ ಫೇಮ್‌’ಗೆ ಸೇರ್ಪಡೆಯಾಗುವ ಆಟಗಾರ ತನ್ನ ಕಡೆಯ ಅಂತರರಾಷ್ಟ್ರೀಯ ಪಂದ್ಯವನ್ನು ಕಡೇಪಕ್ಷ ಐದು ವರ್ಷಗಳ ಹಿಂದೆ ಆಡಿರಬೇಕು.

ಡೊನಾಲ್ಡ್‌ ಬ್ರಾಡ್ಮನ್‌ ಅವರಂತೆ ತೆಂಡೂಲ್ಕರ್‌ ಅವರನ್ನೂ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಎಂದು ಪರಿಗಣಿಸಲಾಗುತ್ತಿದೆ. 2013ರ ನವೆಂಬರ್‌ನಲ್ಲಿ ನಿವೃತ್ತರಾದ ಸಚಿನ್‌ಟೆಸ್ಟ್‌ ಮತ್ತು ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚಿನ ರನ್‌ ಸಂಗ್ರಹಿಸಿದ ದಾಖಲೆ ಹೊಂದಿದ್ದಾರೆ.

52 ವರ್ಷದ ಡೊನಾಲ್ಡ್ರ್ ಅವರು ಕ್ರಿಕೆಟ್‌ ಕಂಡ ಆಕರ್ಷಕ ವೇಗದ ಬೌಲರ್‌ಗಳಲ್ಲಿ ಒಬ್ಬರು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾ 1991ರಲ್ಲಿ ಮರಳಿದ ನಂತರ ತಂಡದ ಯಶಸ್ಸಿನಲ್ಲಿ ಅವರ ಪಾತ್ರ ಗಣನೀಯ. 2003ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

‘ಈ ದೊಡ್ಡ ಗೌರವಕ್ಕಾಗಿ ಐಸಿಸಿಗೆ ಧನ್ಯವಾದಗಳು’ ಎಂದಿದ್ದಾರೆ ವೈಟ್‌ ಲೈಟ್ನಿಂಗ್‌ ಖ್ಯಾತಿಯ ಡೊನಾಲ್ಡ್‌ ಪ್ರತಿಕ್ರಿಯಿಸಿದ್ದಾರೆ. ಡೊನಾಲ್ಡ್‌ ತಮ್ಮ ಆರಂಭದ ಕೋಚ್‌ಗಳನ್ನೂ ಮರೆತಿಲ್ಲ. ಅವರಿಗೆ ದಿವಂಗತ ಹ್ಯಾನ್ಸಿ ಕ್ರೊನಿಯೆ ತಂದೆ ಎವೀ ಕ್ರೊನಿಯೆ ಕೋಚ್‌ ಆಗಿದ್ದರು. ತಂಡದಲ್ಲಿ ಜೊತೆಗೇ ಆಡಿದ್ದ ಹ್ಯಾನ್ಸಿ ಮತ್ತು ಡೊನಾಲ್ಡ್‌ ನಿಕಟ ಸ್ನೇಹಿತರಾಗಿದ್ದರು.

‘ಫ್ರೀ ಸ್ಟೇಟ್‌ನಲ್ಲಿ ಬಾಲ್ಯದ ವೇಳೆ ಕ್ರಿಕೆಟ್‌ನ ದಂತಕತೆ ಹ್ಯಾನ್ಸಿ ಕ್ರೊನಿಯೆ ಅವರ ತಂದೆ ಎವೀ ಕ್ರೊನಿಯೆ ಅವರು ಶಾಲಾ ಮತ್ತು ಕಾಲೇಜು ದಿನಗಳಲ್ಲಿ ನನಗೆ ನೆರವಾಗಿದ್ದರು. ನನ್ನ ದೊಡ್ಡಪ್ಪ ಡೆಸ್‌ ಡೊನಾಲ್ಡ್‌ ಸ್ವಲ್ಪ ಕಠಿಣವಾಗಿಯೇ ಕಲಿಸಿದರು. ದಿ.ಬಾಬ್‌ ವೂಲ್ಮರ್‌ ಆಪ್ತ ಮಾರ್ಗದರ್ಶಕರಾಗಿದ್ದರು. ನಾವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನ ಸೆಳೆದೆವು. ಯಶಸ್ಸಿನ ಹಾದಿಯಲ್ಲಿ ಸಾಗುವುದು ಹೇಗೆಂದು ಅವರು ತಿಳಿಸಿದರು’ ಎಂದು ಡೊನಾಲ್ಡ್‌ ಸ್ಮರಿಸಿಕೊಂಡರು.

‌ಸುಮಾರು 16 ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಿರುವ ಫಿಟ್ಜ್‌ಪ್ಯಾಟ್ರಿಕ್‌ ಈ ಗೌರವ ಪಡೆದ ಎಂಟನೇ ಮಹಿಳಾ ಆಟಗಾರ್ತಿ. ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಈ ವೇಗದ ಬೌಲರ್‌ ಎರಡನೇ ಸ್ಥಾನದಲ್ಲಿದ್ದಾರೆ. ಏಕದಿನ ಪಂದ್ಯಗಳಲ್ಲಿ 180 ವಿಕೆಟ್‌ ಗಳಿಸಿರುವ ಅವರು ಟೆಸ್ಟ್‌ನಲ್ಲಿ 60 ಬಲಿಗಳನ್ನು ಪಡೆದಿದ್ದಾರೆ. ಕೋಚ್‌ ಆಗಿಯೂ ಯಶಸ್ಸು ಗಳಿಸಿರುವ ಅವರು ಆಸ್ಟ್ರೇಲಿಯಾ ತಂಡ ಮೂರು ಬಾರಿ ವಿಶ್ವಕಪ್‌ ಗೆಲ್ಲುವಲ್ಲಿ ಮಾರ್ಗದರ್ಶನ ಮಾಡಿದ್ದಾರೆ.

‘2019ರ ಹಾಫ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಂಡವರ ಹೆಸರು ಪ್ರಕಟಿಸುತ್ತಿರುವುದು ನಮಗೆ ಗೌರವದ ವಿಷಯ. ಸಚಿನ್‌, ಆ್ಯಲನ್‌ ಡೊನಾಲ್ಡ್‌ ಮತ್ತು ಕ್ಯಾಥರಿನ್‌ ಈ ಆಟ ಕಂಡ ಆಕರ್ಷಕ ಆಟಗಾರರು. ಅವರು ಈ ಗೌರವದ ಸೇರ್ಪಡಗೆ ಅರ್ಹರು’ ಎಂದು ಐಸಿಸಿ ಚೀಫ್‌ ಎಕ್ಸಿಕ್ಯುಟಿವ್‌ ಮನು ಸಾಹ್ನಿ ಹೇಳಿದರು.

ಸಾಧಕರು...

ಸಚಿನ್‌ ತೆಂಡೂಲ್ಕರ್‌

ಟೆಸ್ಟ್‌: 200 ರನ್‌:15,921

ಏಕದಿನ: 463 ರನ್:18,246

––

ಆ್ಯಲನ್‌ ಡೊನಾಲ್ಡ್‌

ಏಕದಿನ:164 ವಿಕೆಟ್‌:272

ಟೆಸ್ಟ್:72 ವಿಕೆಟ್‌:330

–––

ಕ್ಯಾಥರಿನ್‌ ಫಿಟ್ಜ್‌ಪ್ಯಾಟ್ರಿಕ್‌

ಏಕದಿನ:109 ವಿಕೆಟ್‌:180

ಟೆಸ್ಟ್‌:13 ವಿಕೆಟ್‌: 60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT