ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚುಟುಕು’ ಸರಣಿ ಕೈವಶಕ್ಕೆ ‘ದೊಡ್ಡ’ ಅವಕಾಶ

ಭಾರತ– ಇಂಗ್ಲೆಂಡ್ ಟ್ವೆಂಟಿ–20 ಕ್ರಿಕೆಟ್ ಪಂದ್ಯ ನಾಳೆ: ತಿರುಗೇಟು ನೀಸುವತ್ತ ಮಾರ್ಗನ್ ಬಳಗದ ಚಿತ್ತ
Last Updated 5 ಜುಲೈ 2018, 18:30 IST
ಅಕ್ಷರ ಗಾತ್ರ

ಕಾರ್ಡಿಫ್: ಸರಣಿಯ ಮೊದಲ ಪಂದ್ಯದಲ್ಲಿಯೇ ಅಧಿಕಾರಯುತ ಜಯ ಸಾಧಿಸಿರುವ ವಿರಾಟ್ ಕೊಹ್ಲಿ ಬಳಗವು ಆತಿಥೇಯ ಇಂಗ್ಲೆಂಡ್ ತಂಡವನ್ನು ಒತ್ತಡಕ್ಕೆ ತಳ್ಳಿದೆ.

ಮೂರು ಟ್ವೆಂಟಿ–20 ಪಂದ್ಯಗಳ ಸರಣಿಯ ಎರಡನೇ ಪಂದ್ಯವು ಶುಕ್ರವಾರ ನಡೆಯಲಿದ್ದು ಇಯಾನ್ ಮಾರ್ಗನ್ ಬಳಗವು ಜಯಿಸಲೇಬೇಕಾದ ಅನಿವಾರ್ಯತೆಯಲ್ಲಿದೆ. ಒಂದೊಮ್ಮೆ ಸೋತರೆ ಸರಣಿಯು ಭಾರತದ ಪಾಲಾಗುತ್ತದೆ.

ಕಳೆದ ಎರಡು ವರ್ಷಗಳಲ್ಲಿ ಭಾರತವು ಸತತ ಐದು ಸರಣಿಗಳಲ್ಲಿ ಗೆದ್ದಿದೆ. ಇದೀಗ ಯಶಸ್ಸಿನ ಓಟವನ್ನು ಮುಂದುವರಿಸುವ ಅವಕಾಶ ವಿರಾಟ್ ಬಳಗಕ್ಕೆ ಇದೆ.

ಹತ್ತು ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾ ತಂಡದ ವಿರುದ್ಧ ಅಬ್ಬರಸಿದ್ದ ಬ್ಯಾಟ್ಸ್‌ಮನ್‌ಗಳು ಭಾರತದ ಎದುರಿನ ಮೊದಲ ಪಂದ್ಯದಲ್ಲಿ ವಿಫಲರಾದರು. ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ಶರಣಾದರು. ಬೌಲರ್‌ಗಳ ಆಟವೂ ನಡೆಯಲಿದೆ. ಕನ್ನಡಿಗ ರಾಹು್ಲ್ ಅವರ ಅಬ್ಬರದ ಶತಕಕ್ಕೆ ಆತಿಥೇಯರು ಬಸವಳಿದರು.

ಆದರೆ, ಜೇಸನ್ ರಾಯ್, ಜೋ ರೂಟ್, ಜಾಸ್ ಬಟ್ಲರ್, ಜಾನಿ ಬೆಸ್ಟೋ, ಅಲೆಕ್ಸ್‌ ಹೇಲ್ಸ್‌ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ತಿರುಗೇಟು ನೀಡಿದರೆ ಅಚ್ಚರಿಪಡಬೇಕಿಲ್ಲ. ಆದ್ದರಿಂದ ಭಾರತದ ಬೌಲರ್‌ಗಳು ಇನ್ನಷ್ಟು ಪ್ರಭಾವಿ ದಾಳಿ ಸಂಘಟಿಸುವುದು ಅನಿವಾರ್ಯ. ಉತ್ತಮ ಲಯದಲ್ಲಿರುವ ಕುಲದೀಪ್ ಅವರಿಗೆ ಉಳಿದ ಬೌಲರ್‌ಗಳು ಉತ್ತಮ ಜೊತೆ ನೀಡಬೇಕು.

ಮ್ಯಾಚೆಸ್ಟರ್ ಪಂದ್ಯದ ಮೊದಲ ಓವರ್‌ನಲ್ಲಿಯೇ ಔಟಾಗಿದ್ದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇಲ್ಲಿಯೂ ಇನಿಂಗ್ಸ್‌ ಆರಂಭಿಸುವ ನಿರೀಕ್ಷೆ ಇದೆ. ಅವರು ರೋಹಿತ್ ಜೊತೆಗೆ ಉತ್ತಮ ಅಡಿಪಾಯ ಹಾಕಿದರೆ ಮುಂದಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ದಾರಿ ಸುಲಭವಾಗುತ್ತದೆ.

ತಂಡಗಳು ಇಂತಿವೆ

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಸುರೇಶ್ ರೈನಾ, ಮನೀಷ್ ಪಾಂಡೆ, ಮಹೇಂದ್ರಸಿಂಗ್ ದೋನಿ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹಾರ್ದಿಕ್ ಪಾಂಡ್ಯ, ಸಿದ್ಧಾರ್ಥ್ ಕೌಲ್, ಉಮೇಶ್ ಯಾದವ್, ರವಿಶಾಸ್ತ್ರಿ (ಮುಖ್ಯ ಕೋಚ್).

ಇಂಗ್ಲೆಂಡ್: ಇಯಾನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಜಾನಿ ಬೆಸ್ಟೋ, ಜೇಕ್ ಬಾಲ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಸ್ಯಾಮ್ ಕುರ್ರನ್ , ಅಲೆಕ್ಸ್‌ ಹೇಲ್ಸ್‌, ಕ್ರಿಸ್ ಜೋರ್ಡನ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಡೇವಿಡ್ ವಿಲ್ಲಿ, ಡೇವಿಡ್ ಮಲಾನ್.

ಪಂದ್ಯ ಆರಂಭ: ರಾತ್ರಿ 10
ನೇರಪ್ರಸಾರ: ಸೋನಿ ನೆಟ್‌ವರ್ಕ್‌

****

ಲಂಡನ್‌ಗೆ ಅನುಷ್ಕಾ
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಲಂಡನ್‌ಗೆ ತೆರಳಿದ್ದಾರೆ. ಅವರು ಗುರುವಾರ ಕಾರ್ಡಿಫ್‌ನಲ್ಲಿ ಭಾರತ ತಂಡದ ಅಭ್ಯಾಸವನ್ನು ವೀಕ್ಷಿಸಿದರು. ನಂತರ ಪತಿಯೊಂದಿಗೆ ಭಾರತ ತಂಡದ ಬಸ್‌ನಲ್ಲಿ ಹೋಟೆಲ್‌ಗೆ ತೆರಳಿದರು. ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಆಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT