ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ನ್ಯೂಜಿಲೆಂಡ್ ಟಿ20 ಎರಡನೇ ಪಂದ್ಯ: ಸರಣಿ ಕೈವಶದತ್ತ ರೋಹಿತ್ ಪಡೆ ಕಣ್ಣು

Last Updated 18 ನವೆಂಬರ್ 2021, 17:44 IST
ಅಕ್ಷರ ಗಾತ್ರ

ರಾಂಚಿ: ಭಾರತ ತಂಡವು ರೋಹಿತ್ ಶರ್ಮಾ ನಾಯಕತ್ವ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಮೊದಲ ಪಂದ್ಯದಲ್ಲಿಯೇ ರೋಚಕ ಜಯ ಸಾಧಿಸಿರುವ ಭಾರತ ಈಗ ಸರಣಿ ಕೈವಶ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ನ್ಯೂಜಿಲೆಂಡ್ ಎದುರಿನ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಜಯಿಸುವ ವಿಶ್ವಾಸದಲ್ಲಿ ಭಾರತ ತಂಡವಿದೆ. ಬುಧವಾರ ಜೈಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡವು ಗೆದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1–0ಯಿಂದ ಮುನ್ನಡೆ ಸಾಧಿಸಿತ್ತು.

ವಿರಾಟ್ ಕೊಹ್ಲಿ ಗೈರುಹಾಜರಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ ಮತ್ತು ನಾಯಕ ರೋಹಿತ್ ಅವರ ಅಮೋಘ ಬ್ಯಾಟಿಂಗ್‌ನಿಂದಾಗಿ ಭಾರತ ತಂಡವು ಜಯಿಸಿತು. ಕಿವೀಸ್ ತಂಡದ ಟ್ರೆಂಟ್‌ ಬೌಲ್ಟ್‌ ಕ್ಯಾಚ್‌ ಕೈಚೆಲ್ಲಿದ್ದು ಸೂರ್ಯನಿಗೆ ವರದಾನವಾಯಿತು. 42 ಎಸೆತಗಳಲ್ಲಿ 62 ರನ್ ಗಳಿಸಿದರು.

ಆರಂಭಿಕ ಜೋಡಿ ರಾಹುಲ್ ಮತ್ತು ರೋಹಿತ್ 50 ರನ್‌ಗಳನ್ನು ಸೇರಿಸಿ ಉತ್ತಮ ಆರಂಭ ನೀಡಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದರು. ಅನುಭವಿ ಶ್ರೇಯಸ್ ಅಯ್ಯರ್ ಮತ್ತು ಹೊಸ ಪ್ರತಿಭೆ ವೆಂಕಟೇಶ್ ಅಯ್ಯರ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಮಧ್ಯಮ ಕ್ರಮಾಂಕ ಬಲಿಷ್ಠವಾಗುವುದು ಖಚಿತ. ಆಲ್‌ರೌಂಡರ್ ಅಕ್ಷರ್ ಪಟೇಲ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದ್ದರು. ಆದರೆ ಅಶ್ವಿನ್ ಮತ್ತು ಭುವನೇಶ್ವರ್ ಕುಮಾರ್ ಉತ್ತಮವಾಗಿ ಬೌಲಿಂಗ ಮಾಡಿದ್ದರು. ಅದರಿಂದಾಗಿ ಕಿವೀಸ್ ತಂಡವು ದೊಡ್ಡ ಮೊತ್ತ ಕಲೆಹಾಕುವುದು ತಪ್ಪಿತ್ತು.

ಕೇನ್ ವಿಲಿಯಮ್ಸನ್ ಇಲ್ಲದ ಪ್ರವಾಸಿ ತಂಡವನ್ನು ಟಿಮ್ ಸೌಥಿ ಮುನ್ನಡೆಸುತ್ತಿದ್ದಾರೆ. ಮಾರ್ಟಿನ್ ಗಪ್ಟಿಲ್ ಮತ್ತು ಮಾರ್ಕ್ ಚಾಪ್‌ಮನ್ ಅವರಿಬ್ಬರೂ ಉತ್ತಮ ಲಯದಲ್ಲಿದ್ದಾರೆ. ಡೆರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್‌ ಲಯಕ್ಕೆ ಮರಳಿದರೆ ತಂಡದ ಬ್ಯಾಟಿಂಗ್ ಬಲಿಷ್ಠವಾಗುವುದು ಖಚಿತ. ಬೌಲಿಂಗ್‌ನಲ್ಲಿ ಸೌಥಿ, ಬೌಲ್ಟ್ ಮತ್ತು ಸ್ಯಾಂಟನರ್ ಅವರು ಪಂದ್ಯ ಗೆಲ್ಲಿಸಿಕೊಡುವ ಸಮರ್ಥರು.

ಪಿಚ್ ಹೇಗಿದೆ?

ರಾಂಚಿಯ ಕ್ರೀಡಾಂಗಣದಲ್ಲಿ ನಾಲ್ಕು ವರ್ಷಗಳ ನಂತರ ಅಂತರರಾಷ್ಟ್ರೀಯ ಟಿ20 ಪಂದ್ಯ ನಡೆಯಲಿದೆ. ಇಲ್ಲಿ ನಡೆದಿರುವ ಒಟ್ಟು ಎರಡು ಟಿ20 ಪಂದ್ಯಗಳಲ್ಲಿಯೂ ಭಾರತ ತಂಡ ಜಯಿಸಿದೆ. ಮುಸ್ಸಂಜೆಯಲ್ಲಿ ಕಾಡುವ ಮಂಜು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬ್ಯಾಟರ್‌ಗಳಿಗೆ ಸ್ನೇಹಿಯಾಗಿರುವ ಪಿಚ್‌ನಲ್ಲಿ ದೊಡಡ ಮೊತ್ತ ಕಲೆ ಹಾಕುವ ಅವಕಾಶವೂ ಇದೆ. ಚಾಣಾಕ್ಷತೆಯಿಂದ ಸ್ಪಿನ್‌ ಮಾಡುವ ಬೌಲರ್‌ಗಳಿಗೂ ವಿಕೆಟ್‌ ಗಳಿಸುವ ಅವಕಾಶವೂ ಇದೆ.

ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ಶ್ರೇಯರ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಋತುರಾಜ್ ಗಾಯಕವಾಡ್.

ನ್ಯೂಜಿಲೆಂಡ್‘ ಟಿಮ್ ಸೌಥಿ (ನಾಯಕ), ಟಾಡ್ ಆಸ್ಟ್ಲ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪಮನ್, ಲಾಗಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಆ್ಯಡಂ ಮಿಲ್ನೆ, ಡೆರಿಲ್ ಮಿಚೆಲ್, ಜಿಮ್ಮಿ ನಿಶಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಟಿಮ್ ಸೀಫರ್ಟ್, ಈಶ್ ಸೋಧಿ.

ಪಂದ್ಯ ಆರಂಭ: ರಾತ್ರಿ 7ರಿಂದ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT