ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ಶ್ರೀಲಂಕಾ ವಿರುದ್ಧ ಭಾರತಕ್ಕೆ 10 ವಿಕೆಟ್‌ ಜಯ

Last Updated 4 ಜುಲೈ 2022, 14:08 IST
ಅಕ್ಷರ ಗಾತ್ರ

ಪಲ್ಲೆಕೆಲೆ (ಪಿಟಿಐ): ‘ತಂಡಕ್ಕೆ ಉತ್ತಮ ಆರಂಭ ನೀಡುತ್ತಿಲ್ಲ’ ಎಂದು ತಮ್ಮನ್ನು ಟೀಕಿಸಿದವರಿಗೆ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮ ಬ್ಯಾಟ್‌ನಿಂದಲೇ ಉತ್ತರ ನೀಡಿದರು.

ಶ್ರೀಲಂಕಾ ವಿರುದ್ಧ ಸೋಮವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಇಬ್ಬರೂ ಭರ್ಜರಿ ಆಟವಾಡಿ ತಂಡಕ್ಕೆ 10 ವಿಕೆಟ್‌ಗಳ ಜಯ ತಂದಿತ್ತರು. ಮೊದಲು ಬ್ಯಾಟ್‌ ಮಾಡಿದ ಲಂಕಾ 173 ರನ್‌ ಗಳಿಸಿದರೆ, ಭಾರತ 25.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ಗುರಿ ತಲುಪಿತು.

ಸ್ಮೃತಿ ಮಂದಾನ 94 (83 ಎ, 4X11, 6X1) ಮತ್ತು ಶಫಾಲಿ 71 (71 ಎ, 4X4, 6X1) ಗೆಲುವಿನ ರೂವಾರಿ ಎನಿಸಿದರು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2–0 ಮುನ್ನಡೆ ಗಳಿಸಿತು.

ಲಂಕಾ ವಿರುದ್ಧದ ಸರಣಿಯಲ್ಲಿ ಇದುವರೆಗೆ ಸ್ಮೃತಿ ಮತ್ತು ಶಫಾಲಿ ತಂಡಕ್ಕೆ ಉತ್ತಮ ಆರಂಭ ನೀಡಿರಲಿಲ್ಲ. ಇದರಿಂದ ಬಳಿಕ ಬರುವ ಬ್ಯಾಟರ್‌ಗಳು ಒತ್ತಡದಲ್ಲೇ ಆಡಬೇಕಿತ್ತು. ಆದರೆ ಇಬ್ಬರೂ ಏಕಕಾಲಕ್ಕೆ ಫಾರ್ಮ್‌ ಕಂಡುಕೊಂಡರು.

ಮಹಿಳೆಯರ ಏಕದಿನ ಪಂದ್ಯದಲ್ಲಿ ತಂಡವೊಂದು ಯಾವುದೇ ವಿಕೆಟ್‌ ಕಳೆದುಕೊಳ್ಳದೆ ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಿ ಗೆಲುವು ಪಡೆದಿರುವುದು ಇದೇ ಮೊದಲು. ಲಂಕಾ ವಿರುದ್ಧ ಭಾರತದ ಪರ ಯಾವುದೇ ವಿಕೆಟ್‌ಗೆ ದಾಖಲಾದ ಅತಿದೊಡ್ಡ ಜೊತೆಯಾಟ ಇದಾಗಿದೆ.

ಮೊದಲು ಬ್ಯಾಟ್‌ ಮಾಡಿದ ಲಂಕಾ ತಂಡ, ಭಾರತದ ಶಿಸ್ತಿನ ಬೌಲಿಂಗ್‌ ಮುಂದೆ ಪರದಾಟ ನಡೆಸಿತು. ರೇಣುಕಾ ಸಿಂಗ್‌ (28ಕ್ಕೆ 4) ಯಶಸ್ವಿ ಬೌಲರ್‌ ಎನಿಸಿಕೊಂಡರೆ, ಮೇಘನಾ ಸಿಂಗ್‌ ಮತ್ತು ದೀಪ್ತಿ ಶರ್ಮ ತಲಾ ಎರಡು ವಿಕೆಟ್‌ ಪಡೆದರು.

ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಗುರುವಾರ ನಡೆಯಲಿದ್ದು, ಭಾರತ ಸರಣಿ ‘ಕ್ಲೀನ್‌ಸ್ವೀಪ್‌’ ಮಾಡುವ ವಿಶ್ವಾಸದಲ್ಲಿದೆ.

ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ 173 (50 ಓವರ್) ಚಾಮರಿ ಅಟಪಟ್ಟು 27, ಅನುಷ್ಕಾ ಸಂಜೀವನಿ 25, ನೀಲಾಕ್ಷಿ ಡಿ’ಸಿಲ್ವ 32, ಅಮಾ ಕಾಂಚನ ಔಟಾಗದೆ 47, ರೇಣುಕಾ ಸಿಂಗ್ 28ಕ್ಕೆ 4, ಮೇಘನಾ ಸಿಂಗ್ 43ಕ್ಕೆ 2, ದೀಪ್ತಿ ಶರ್ಮ 30ಕ್ಕೆ 2

ಭಾರತ ವಿಕೆಟ್‌ ನಷ್ಟವಿಲ್ಲದೆ 174 (25.4 ಓವರ್) ಶಫಾಲಿ ವರ್ಮ ಔಟಾಗದೆ 71, ಸ್ಮೃತಿ ಮಂದಾನ ಔಟಾಗದೆ 94

ಫಲಿತಾಂಶ: ಭಾರತಕ್ಕೆ 10 ವಿಕೆಟ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT