ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ ಹಾಕಿ, ಕಾಲಿಗೆ ನಮಸ್ಕರಿಸಿ ಪ್ರತಿಭಟನೆ

ನೆಲಮಂಗಲ: ಸರ್ವಿಸ್ ರಸ್ತೆಗೆ ಬಾರದ ಕೆಎಸ್‌ಆರ್‌ಟಿಸಿ ಬಸ್‌ಗಳ ತಡೆ
Last Updated 5 ಮಾರ್ಚ್ 2018, 19:49 IST
ಅಕ್ಷರ ಗಾತ್ರ

ನೆಲಮಂಗಲ: ಕೆಎಸ್‌ಆರ್‌ಟಿಸಿ ಬಸ್‌ಗಳು ಸರ್ವಿಸ್ ರಸ್ತೆಗೆ ಬಾರದೆ ರಾಷ್ಟ್ರೀಯ ಹೆದ್ದಾರಿ 4ರ ಮೇಲ್ಸೇತುವೆ ಮೇಲೆ ಹೋಗುವುದನ್ನು ಖಂಡಿಸಿ ಸಾರ್ವಜನಿಕರು ಹಾಗು ವಿವಿಧ ಸಂಘಟನೆಗಳು ನಿರ್ವಾಹಕರಿಗೆ ಮತ್ತು ಚಾಲಕರಿಗೆ ಹಾರ ಹಾಕಿ, ಕಾಲಿಗೆ ನಮಸ್ಕರಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

ರಾಷ್ಟ್ರೀಯ ಕಿಸಾನ್‌ ಸಂಘದ ಉಪಾಧ್ಯಕ್ಷ ಭೀಮಯ್ಯ ನೇತೃತ್ವದಲ್ಲಿ ಸಂಡೆಕೊಪ್ಪ ವೃತ್ತದ ಬಳಿ ಮೇಲ್ಸೇತುವೆ ಮೇಲೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಈ ರೀತಿ ಮನವಿ ಮಾಡುತ್ತಿದ್ದರು. ನೆಲಮಂಗಲದಲ್ಲಿ ಬಸ್‌ ನಿಲುಗಡೆಗೆ ಆದೇಶವಾಗಿ ಹಲವು ವರ್ಷಗಳಾಗಿದ್ದರೂ ಸರ್ವಿಸ್ ರಸ್ತೆಯಲ್ಲಿ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು.

ಬಸ್‌ ನಿಲ್ಲಿಸದಿರುವುದರಿಂದ ನಿತ್ಯ ಬೆಂಗಳೂರು, ತುಮಕೂರು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸುವ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಮಹಿಳೆಯರು, ವೃದ್ಧರಿಗೆ ತಡೆಗೋಡೆ ದಾಟಲಾಗುವುದಿಲ್ಲ. ಎಷ್ಟೋ ಬಾರಿ ಅನಾಹುತ ಸಂಭವಿಸಿವೆ. ಹಲವಾರು ಬಾರಿ ಪ್ರತಿಭಟಿಸಿದರೂ ಹೀಗೆ ಮುಂದುವರಿಯುತ್ತಿದೆ. ಮುಂದೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಭೀಮಯ್ಯ ಎಚ್ಚರಿಸಿದರು.

ತುಮಕೂರು ಕಡೆ ಹೋಗುವ ಮತ್ತು ಬೆಂಗಳೂರು ಕಡೆ ಬರುವ ಸರ್ವಿಸ್‌ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ ಮತ್ತು ತಂಗು
ದಾಣಗಳನ್ನೂ ನಿರ್ಮಿಸಲಾಗಿದೆ. ಇಲ್ಲಿ ಬಸ್‌ ನಿಲ್ಲಿಸಿ, ನಮೂದಿಸಿ ಮುಂದೆ ಸಾಗಬೇಕಾಗಿರುವ ಆದೇಶವನ್ನು ಸಾಕಷ್ಟು ಬಸ್‌ಗಳು ಪಾಲಿಸುತ್ತಿಲ್ಲ ಎಂದು ದೂರಿದರು.

ಅಧಿಕಾರಿಗಳಿಗೆ ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಪ್ರತಿಭಟನೆ ಮಾಡಿದ ಕೆಲವು ದಿನಗಳು ಸರ್ವಿಸ್ ರಸ್ತೆಯಲ್ಲಿ ಬರುತ್ತಾರೆ. ಕೆಲ ದಿನಗಳ ನಂತರ ಮತ್ತೆ ಹಳೆ ಚಾಳಿಯೇ ಮುಂದುವರಿಯುತ್ತದೆ. ಮೇಲ್ಸೇತುವೆ ಮೇಲೆ ಹೋಗಿ ಟೋಲ್‌ ಸುಂಕ ಕಟ್ಟಿ ಸಂಸ್ಥೆಗೂ ನಷ್ಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT