ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಪಾಂಡೆ ಪಡೆಗೆ ಪಂಜಾಬ್ ಸವಾಲು

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿ ಸೂಪರ್ ಲೀಗ್:; ಕರ್ನಾಟಕದ ಮೂರನೇ ಪಂದ್ಯ ಇಂದು
Last Updated 23 ನವೆಂಬರ್ 2019, 19:46 IST
ಅಕ್ಷರ ಗಾತ್ರ

ಸೂರತ್: ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಹಂತದಲ್ಲಿ ಜಯದ ‘ಹ್ಯಾಟ್ರಿಕ್’ ಸಾಧಿಸುವತ್ತ ಚಿತ್ತ ನೆಟ್ಟಿದೆ. ಈ ಹಂತದಲ್ಲಿ ಸತತ ಎರಡು ಪಂದ್ಯಗಳಲ್ಲಿ ಗೆದ್ದಿರುವ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕವು ಭಾನುವಾರ ಇಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ.

ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಸೂಪರ್ ಲೀಗ್ ಹಂತಕ್ಕೆ ಅರ್ಹತೆ ಗಳಿಸಿದ್ದ ಕರ್ನಾಟಕ ತಂಡವು, ಈ ಹಂತದ ಮೊದಲ ಪಂದ್ಯದಲ್ಲಿ ತಮಿಳುನಾಡುವ ವಿರುದ್ಧ ಗೆದ್ದಿತ್ತು. ಶುಕ್ರವಾರ ಜಾರ್ಖಂಡ್ ಎದುರು ರೋಚಕ ಜಯ ಸಾಧಿಸಿತ್ತು.

ಈ ಎರಡೂ ಪಂದ್ಯಗಳಲ್ಲಿ ಕರ್ನಾ ಟಕದ ಬ್ಯಾಟಿಂಗ್‌ ಬಲವೇ ಹೆಚ್ಚು ಪಾರಮ್ಯ ಮೆರೆದಿತ್ತು. ಬೌಲಿಂಗ್‌ ವಿಭಾಗವು ಇನ್ನಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಎದ್ದು ಕಂಡಿತ್ತು. ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ದೇವದತ್ತ ಪಡಿಕ್ಕಲ್, ಕರುಣ್ ನಾಯರ್ ಮತ್ತು ಪವನ್ ದೇಶಪಾಂಡೆ ಅವರು ಉತ್ತಮ ಫಾರ್ಮ್‌ನಲ್ಲಿರುವುದರಿಂದ ಬ್ಯಾಟಿಂಗ್‌ ವಿಭಾಗದಲ್ಲಿ ಹೆಚ್ಚು ಚಿಂತೆಯೇನಿಲ್ಲ. ಆದರೆ, ಮಧ್ಯಮವೇಗಿಗಳಾದ ವಿ. ಕೌಶಿಕ್, ಅನುಭವಿ ಅಭಿಮನ್ಯು ಮಿಥುನ್ ಅವರು ಇನಿಂಗ್ಸ್‌ನ ಆರಂಭದಲ್ಲಿ ಸಫಲತೆ ಸಾಧಿಸುತ್ತಿದ್ದಾರೆ. ಆದರೆ, ನಂತರದ ಓವರ್‌ಗಳಲ್ಲಿ ಹೆಚ್ಚು ವಿಕೆಟ್ ಗಳಿಸಲು ಸಾಧ್ಯವಾಗುತ್ತಿಲ್ಲ. ಆದರೂ ಎರಡನೇ ಪಂದ್ಯದಲ್ಲಿ ಜಾರ್ಖಂಡ್ ತಂಡಕ್ಕೆ ಕೊನೆಯ ಒಂದು ಓವರ್‌ನಲ್ಲಿ 24 ರನ್‌ಗಳ ಅಗತ್ಯವಿತ್ತು. ವಿರಾಟ್ ಸಿಂಗ್ ಹೊಡೆಯುವ ಉತ್ಸಾಹದಲ್ಲಿಯೂ ಇದ್ದರು. ಆದರೆ ಕೌಶಿಕ್ ಗೆಲುವಿನ ಕಾಣಿಕೆ ನೀಡಿದ್ದರು.

ತಂಡಗಳು: ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಕೆ.ಎಲ್. ರಾಹುಲ್, ದೇವದತ್ತ ಪಡಿಕ್ಕಲ್, ರೋಹನ್ ಕದಂ, ಕರುಣ್ ನಾಯರ್, ಪವನ್ ದೇಶಪಾಂಡೆ, ಮನೋಜ್ ಬಾಂಢಗೆ, ಪ್ರವೀಣ್ ದುಬೆ, ನಿಹಾಲ್ ಉಲ್ಲಾಳ, ಅಭಿಮನ್ಯು ಮಿಥುನ್, ವಿ.ಕೌಶಿಕ್, ಲವನೀತ್ ಸಿಸೋಡಿಯಾ, ಆರ್. ಸಮರ್ಥ್, ಶ್ರೇಯಸ್ ಗೋಪಾಲ್, ರೋನಿತ್ ಮೋರೆ; ಪಂಜಾಬ್: ಮನದೀಪ್ ಸಿಂಗ್ (ನಾಯಕ), ಅಭಿಷೇಕ್ ಶರ್ಮಾ, ಅನಮೋಲ್‌ಪ್ರೀತ್ ಸಿಂಗ್, ಹರಪ್ರೀತ್ ಬ್ರಾರ್, ಗುರುಕೀರತ್ ಸಿಂಗ್ ಮಾನ್, ನಿಖಿಲ್ ಚೌಧರಿ, ಅನ್ಮೋಲ್ ಮಲ್ಹೋತ್ರಾ (ವಿಕೆಟ್‌ಕೀಪರ್), ಕ್ರಿಷನ್ ಅಲಂಗ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್, ಮಯಂಕ್ ಮಾರ್ಕಂಡೆ, ಸಿಮ್ರನ್ ಸಿಂಗ್, ಶರದ್ ಲುಂಬಾ, ಕರಣ್ ಕೈಲಾ, ಬಲತೇಜ್ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT