ಇಂಗ್ಲೆಂಡ್‌ ಎದುರಿನ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯ: ಭಾರತ 107ಕ್ಕೆ ಆಲೌಟ್‌

7
ಆ್ಯಂಡರ್ಸನ್‌ ದಾಳಿಗೆ ಬೆಚ್ಚಿದ ಕೊಹ್ಲಿ ಪಡೆ

ಇಂಗ್ಲೆಂಡ್‌ ಎದುರಿನ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯ: ಭಾರತ 107ಕ್ಕೆ ಆಲೌಟ್‌

Published:
Updated:
Deccan Herald

ಲಂಡನ್‌ : ಜೇಮ್ಸ್‌ ಆ್ಯಂಡರ್ಸನ್‌ (20ಕ್ಕೆ5) ದಾಳಿಗೆ ಬೆದರಿದ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಶುಕ್ರವಾರ ‘ಕ್ರಿಕೆಟ್‌ ಕಾಶಿ’ ಲಾರ್ಡ್ಸ್‌ ಮೈದಾನದಲ್ಲಿ ಪೆವಿಲಿಯನ್‌ ಪರೇಡ್‌ ನಡೆಸಿದರು.

ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟವನ್ನು ಪೂರ್ಣ ನುಂಗಿ ಹಾಕಿದ್ದ ಮಳೆ ಎರಡನೇ ದಿನವಾದ ಶುಕ್ರವಾರವೂ ಕಾಡಿತು. ಇದರ ಪರಿಣಾಮ ವಿರಾಟ್ ಕೊಹ್ಲಿ ಬಳಗ ಸಂಕಷ್ಟಕ್ಕೆ ಒಳಗಾಯಿತು. ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡ ಪ್ರವಾಸಿ ಪಡೆ ಮೊದಲ ಇನಿಂಗ್ಸ್‌ನಲ್ಲಿ 35.2 ಓವರ್‌ಗಳಲ್ಲಿ 107 ರನ್‌ಗಳಿಗೆ ಆಲೌಟ್‌ ಆಯಿತು.

ಮೊದಲ ದಿನವಾದ ಗುರುವಾರ ಟಾಸ್‌ ಕೂಡ ಹಾಕಿರಲಿಲ್ಲ. ಶುಕ್ರವಾರ ಟಾಸ್‌ ಗೆದ್ದ ಆತಿಥೇಯ ತಂಡದ ನಾಯಕ ಜೋ ರೂಟ್‌ ಫೀಲ್ಡಿಂಗ್‌ ಮಾಡಲು ನಿರ್ಧರಿಸಿದರು.

ಹೊಸ ಚೆಂಡಿನೊಂದಿಗೆ ದಾಳಿಗಿಳಿದ ವೇಗದ ಬೌಲರ್‌ ಜೇಮ್ಸ್‌ ಆ್ಯಂಡರ್ಸನ್‌ ಮೊದಲ ಓವರ್‌ನಲ್ಲೇ ಮೋಡಿ ಮಾಡಿದರು.

ಅವರು ‌ಐದನೇ ಎಸೆತದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌ (0) ಅವರನ್ನು ಬೌಲ್ಡ್‌ ಮಾಡಿದರು. ವಿಜಯ್‌ ಪೆವಿಲಿಯನ್‌ ಸೇರಿದಾಗ ಪ್ರವಾಸಿ ಪಡೆ ಖಾತೆಯನ್ನೇ ತೆರೆದಿರಲಿಲ್ಲ!

ಕೆ.ಎಲ್‌.ರಾಹುಲ್‌, ಸ್ಟುವರ್ಟ್‌ ಬ್ರಾಡ್‌ ಹಾಕಿದ ಎರಡನೇ ಓವರ್‌ನ ಆರೂ ಎಸೆತಗಳನ್ನು ಎದುರಿಸಿದರು. ಆದರೆ ಖಾತೆ ತೆರೆಯಲು ಅವರಿಗೆ ಸಾಧ್ಯವಾಗಲಿಲ್ಲ.

ಆ್ಯಂಡರ್ಸನ್‌ ಹಾಕಿದ ಮೂರನೇ ಓವರ್‌ ಕೂಡಾ ಮೇಡನ್‌ ಆಯಿತು. ಬ್ರಾಡ್‌ ಹಾಕಿದ ನಾಲ್ಕನೇ ಓವರ್‌ನ ನಾಲ್ಕನೇ ಎಸೆತವನ್ನು ರಾಹುಲ್‌ ಬೌಂಡರಿ ಗೆರೆ ದಾಟಿಸಿ ತಂಡದ ಖಾತೆ ತೆರೆದರು. ಆ್ಯಂಡರ್ಸನ್‌ ಹಾಕಿದ ಐದನೇ ಓವರ್‌ನ ಕೊನೆಯ ಎಸೆತದಲ್ಲೂ ಬೌಂಡರಿ ಬಾರಿಸಿದ ರಾಹುಲ್‌, ಇದೇ ಬೌಲರ್‌ ಹಾಕಿದ ಏಳನೇ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್‌ ಕೀಪರ್‌ ಜಾನಿ ಬೇಸ್ಟೊಗೆ ಕ್ಯಾಚ್‌ ನೀಡಿದರು. ಬಳಿಕ ಬಂದ ಕೊಹ್ಲಿ, ಓವರ್‌ನ ಮೂರನೇ ಎಸೆತದಲ್ಲಿ ಒಂದು ರನ್‌ ದಾಖಲಿಸಿದರು. ಈ ವೇಳೆ ಮಳೆ ಸುರಿದ ಕಾರಣ ಆಟ ನಿಲ್ಲಿಸಲಾಯಿತು.

ಪಂದ್ಯ ಮತ್ತೆ ಆರಂಭವಾದ ನಂತರವೂ ಭಾರತದ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಶಿಖರ್‌ ಧವನ್‌ ಬದಲಿಗೆ ತಂಡದಲ್ಲಿ ಸ್ಥಾನ ಗಳಿಸಿದ್ದ ಚೇತೇಶ್ವರ ಪೂಜಾರ ನಾಯಕನ ಜೊತೆ ತಾಳ್ಮೆಯ ಆಟಕ್ಕೆ ಮೊರೆ ಹೋದರು. ಆದರೆ ಒಂಬತ್ತನೇ ಓವರ್‌ನಲ್ಲಿ ನಿರಾಸೆಗೆ ಒಳಗಾದರು.

ಆ್ಯಂಡರ್ಸನ್ ಹಾಕಿದ ಈ ಓವರ್‌ನ ಮೂರನೇ ಎಸೆತವನ್ನು ಪಾಯಿಂಟ್ ಕಡೆಗೆ ತಳ್ಳಿದ ಅವರು ಒಂದು ರನ್ ಗಳಿಸಲು ಓಡಿದರು. ಕ್ರೀಸ್‌ನ ಇನ್ನೊಂದು ತುದಿಯಲ್ಲಿದ್ದ ಕೊಹ್ಲಿ ಕೂಡ ಸ್ಪಂದಿಸಿದರು. ಆದರೆ ತಕ್ಷಣ ನಿರ್ಧಾರ ಬದಲಿಸಿದ ವಿರಾಟ್‌, ವಾಪಸ್ ಹೋದರು. ಚೊಚ್ಚಲ ಪಂದ್ಯ ಆಡಿದ ಒಲಿ ಪೋಪ್‌ ಸುಲಭವಾಗಿ ಪೂಜಾರ (1; 25ಎ) ಅವರನ್ನು ರನ್‌ ಔಟ್‌ ಮಾಡಿದರು.

57 ಎಸೆತಗಳಲ್ಲಿ 2 ಬೌಂಡರಿ ಸಹಿತ 23ರನ್‌ ಗಳಿಸಿದ್ದ ವೇಳೆ ಕೊಹ್ಲಿ ಕೂಡಾ ಔಟಾದರು. ನಂತರ ಭಾರತ ತಂಡ ಕುಸಿತದ ಹಾದಿ ಹಿಡಿಯಿತು. ಬ್ಯಾಟ್ಸ್‌ಮನ್‌ಗಳು ಜಿದ್ದಿಗೆ ಬಿದ್ದವರ ಹಾಗೆ ವಿಕೆಟ್‌ ನೀಡಿದರು.

ಉಪ ನಾಯಕ ಅಜಿಂಕ್ಯ ರಹಾನೆ (18; 44ಎ, 2ಬೌಂ), ಹಾರ್ದಿಕ್‌ ಪಾಂಡ್ಯ (11; 10ಎ, 2ಬೌಂ) ಮತ್ತು ದಿನೇಶ್‌ ಕಾರ್ತಿಕ್‌ (1; 3ಎ) ಕಿಂಚಿತ್ತೂ ಹೋರಾಟ ತೋರಲಿಲ್ಲ. ಹೀಗಾಗಿ ತಂಡ 90ರ ಗಡಿ ದಾಟುವುದೇ ಕಷ್ಟ ಎನಿಸಿತ್ತು. ಆದರೆ ಆರ್‌.ಅಶ್ವಿನ್‌ (29; 38ಎ, 4ಬೌಂ) ಮತ್ತು ಮೊಹಮ್ಮದ್‌ ಶಮಿ (ಔಟಾಗದೆ 10; 3ಎ, 2ಬೌಂ) ದಿಟ್ಟ ಆಟ ಆಡಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರು:
ಭಾರತ, ಮೊದಲ ಇನಿಂಗ್ಸ್‌: 35.2 ಓವರ್‌ಗಳಲ್ಲಿ 107 (ಕೆ.ಎಲ್‌.ರಾಹುಲ್‌ 8, ಚೇತೇಶ್ವರ್ ಪೂಜಾರ 1, ವಿರಾಟ್ ಕೊಹ್ಲಿ 23, ಅಜಿಂಕ್ಯ ರಹಾನೆ 18, ಹಾರ್ದಿಕ್‌ ಪಾಂಡ್ಯ 11, ಆರ್‌.ಅಶ್ವಿನ್‌ 29, ಮೊಹಮ್ಮದ್‌ ಶಮಿ ಔಟಾಗದೆ 10; ಜೇಮ್ಸ್ ಆ್ಯಂಡರ್ಸನ್‌ 20ಕ್ಕೆ5, ಸ್ಟುವರ್ಟ್‌ ಬ್ರಾಡ್‌ 37ಕ್ಕೆ1, ಕ್ರಿಸ್‌ ವೋಕ್ಸ್‌ 19ಕ್ಕೆ2, ಸ್ಯಾಮ್‌ ಕರನ್‌ 26ಕ್ಕೆ1).

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 2

  Sad
 • 1

  Frustrated
 • 8

  Angry

Comments:

0 comments

Write the first review for this !