ಏಕದಿನ ಕ್ರಿಕೆಟ್‌: ಗುಲ್ಬದೀನ್‌ಗೆ ಅಫ್ಗಾನ್‌ ಸಾರಥ್ಯ

ಬುಧವಾರ, ಏಪ್ರಿಲ್ 24, 2019
31 °C

ಏಕದಿನ ಕ್ರಿಕೆಟ್‌: ಗುಲ್ಬದೀನ್‌ಗೆ ಅಫ್ಗಾನ್‌ ಸಾರಥ್ಯ

Published:
Updated:

ಬೆಂಗಳೂರು: ಆಲ್‌ರೌಂಡರ್‌ ಗುಲ್ಬದೀನ್ ನೈಬ್‌ ಅವರು ಅಫ್ಗಾನಿಸ್ತಾನ ಏಕದಿನ ಕ್ರಿಕೆಟ್‌ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.

ಅಫ್ಗಾನಿಸ್ತಾನ ಕ್ರಿಕೆಟ್‌ ಮಂಡಳಿ (ಎಸಿಬಿ) ಏಕದಿನ ವಿಶ್ವಕಪ್‌ಗೂ ಮುನ್ನ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದು ಅನುಭವಿ ಆಟಗಾರ ಅಸ್ಗರ್‌ ಅಫ್ಗಾನ್‌ ಅವರನ್ನು ಶುಕ್ರವಾರ ನಾಯಕತ್ವದಿಂದ ಕೆಳಗಿಳಿಸಿದೆ.

2015ರಲ್ಲಿ ಮೊಹಮ್ಮದ್‌ ನಬಿ, ನಾಯಕತ್ವ ತ್ಯಜಿಸಿದ್ದರು. ಹೀಗಾಗಿ ಅಸ್ಗರ್‌ಗೆ ಸಾರಥ್ಯ ವಹಿಸಲಾಗಿತ್ತು. 31 ವರ್ಷದ ಅಸ್ಗರ್‌ ಮುಂದಾಳತ್ವದಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಅಫ್ಗಾನ್‌ ತಂಡ ಈ ವರ್ಷದ ಮೇ ತಿಂಗಳಿಂದ ಜುಲೈವರೆಗೆ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆಯುವ ವಿಶ್ವಕಪ್‌ಗೆ ಅರ್ಹತೆ ಗಳಿಸಿತ್ತು.

28ರ ಹರೆಯದ ನೈಬ್‌, 2011ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 52 ಏಕದಿನ ಪಂದ್ಯಗಳನ್ನು ಆಡಿರುವ ಅವರು 22.41ರ ಸರಾಸರಿಯಲ್ಲಿ 807ರನ್‌ ದಾಖಲಿಸಿದ್ದಾರೆ. ಇದರಲ್ಲಿ ಐದು ಅರ್ಧಶತಕಗಳಿವೆ. ಜೊತೆಗೆ 40 ವಿಕೆಟ್‌ ಕಬಳಿಸಿದ್ದಾರೆ. 38 ಟ್ವೆಂಟಿ–20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 432ರನ್‌ ಬಾರಿಸಿದ್ದಾರೆ.

ಆಲ್‌ರೌಂಡರ್‌ ರಹಮತ್‌ ಶಾ ಅವರನ್ನು ಟೆಸ್ಟ್‌ ತಂಡದ ನಾಯಕನನ್ನಾಗಿ ನೇಮಿಸಲಾಗಿದ್ದು, ರಶೀದ್‌ ಖಾನ್‌ ಅವರಿಗೆ ಟ್ವೆಂಟಿ–20 ತಂಡದ ಸಾರಥ್ಯ ವಹಿಸಲಾಗಿದೆ.

ರಶೀದ್‌ ಅವರನ್ನು ಏಕದಿನ ತಂಡದ ಉಪ ನಾಯಕನನ್ನಾಗಿಯೂ ನೇಮಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !