ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಈಗ ಬರೀ ಆಟವಲ್ಲ..

ಇಲ್ಲಿವೆ ಹತ್ತಾರು ಉದ್ಯೋಗಾವಕಾಶಗಳು
Last Updated 13 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಹೆಸರುವಾಸಿ ಮಾಜಿ ಕ್ರಿಕೆಟಿಗರು ಕಾಮೆಂಟ್ರಿ ಬಾಕ್ಸ್ ಸೇರಿದ್ದಾರೆ. ಬೇರೆ ಬೇರೆ ಹಂತಗಳಲ್ಲಿ ಆಡಿ ಮುಗಿಸಿದ ಆಟಗಾರರು ಅಂಪೈರ್‌, ಸ್ಕೋರರ್, ತಂತ್ರಜ್ಞರಾಗಿ ಕಣಕ್ಕಿಳಿದಿದ್ದಾರೆ. ಆಟದಿಂದ ನಿವೃತ್ತರಾದರೂ ಕ್ರಿಕೆಟ್‌ನೊಂದಿಗಿನ ವೃತ್ತಿಯ ನಂಟನ್ನು ಬೆಸೆದುಕೊಂಡಿದ್ದಾರೆ. ಆಟದ ಪ್ರೀತಿಯ ಜೊತೆಗೆ ಉಪಜೀವನದ ಹಾದಿಯನ್ನೂ ಕಂಡುಕೊಂಡಿದ್ದಾರೆ. ಕ್ರಿಕೆಟ್ ಆಗಿ ಬರೀ ಆಟವಷ್ಟೇ ಅಲ್ಲ. ವೃತ್ತಿ ಮೂಲವಾಗಿಯೂ ಬೆಳೆಯುತ್ತಿದೆ.

ನಾನು ಮೊದಲು ಐಬಿಎಂ ಸಂಸ್ಥೆಯಲ್ಲಿದ್ದೆ. ಒಳ್ಳೆಯ ಸಂಬಳ ಇತ್ತು. ಉತ್ತಮ ಹುದ್ದೆಯೂ ಇತ್ತು. ಆದರೆ ಕ್ರಿಕೆಟ್‌ನ ಸೆಳೆತ ಬಿಡಲಾಗಲಿಲ್ಲ. ಅಲ್ಲಿ ಸಿಗುತ್ತಿದ್ದಷ್ಟೇ ಆದಾಯ ಕ್ರಿಕೆಟ್‌ನಲ್ಲಿ ಸಿಗುತ್ತದೆ ಎಂದು ಖಚಿತವಾಯಿತು. ಅದಕ್ಕೆ ಅಂಪೈರಿಂಗ್‌ ವೃತ್ತಿಯನ್ನೇ ಫುಲ್‌ಟೈಂ ಆಗಿ ಆರಂಭಿಸಿದೆ’–

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ಯಾನಲ್‌ ಅಂಪೈರ್ ಆಗಿರುವ ಅಭಿಜಿತ್ ಬೆಂಗೇರಿ ಅವರ ಮಾತುಗಳು ಇವು.

ಮೂಲತಃ ಹುಬ್ಬಳ್ಳಿಯವರಾದ ಅಭಿಜಿತ್ ಈಗ ರಣಜಿ ಕ್ರಿಕೆಟ್ ಸೇರಿದಂತೆ ಹಲವು ದೇಶಿ ಟೂರ್ನಿಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಷದ ಬಹುತೇಕ ಭಾಗ ಕ್ರಿಕೆಟ್‌ ಪಂದ್ಯಗಳು ನಡೆಯುತ್ತಿರುವುದರಿಂದ ಅವರಿಗೆ ಕೈತುಂಬಾ ಕೆಲಸ, ಬಿಡುವು ಸಿಕ್ಕಾಗ ಅಕೌಂಟಿಂಗ್ ಕನ್ಸಲ್ಟಂಟ್ ಆಗಿಯೂ ಕೆಲಸ ಮಾಡುತ್ತಾರೆ.

ಅಭಿಜಿತ್ ಅವರಂತೆ ಹಲವು ಯುವಕರು ಈಗ ಕ್ರಿಕೆಟ್‌ನೊಂದಿಗೆ ಕೇವಲ ಆಟಗಾರರಾಗಿ ಅಷ್ಟೇ ಅಲ್ಲ. ವಿವಿಧ ವೃತ್ತಿಗಳ ಮೂಲಕ ಆಟದೊಂದಿಗಿನ ನಂಟನ್ನು ನಿರಂತರವಾಗಿಟ್ಟುಕೊಂಡಿದ್ದಾರೆ. ಇವತ್ತು ಕ್ರಿಕೆಟ್ ಬರೀ ಕ್ರೀಡೆಯಾಗಿ ಉಳಿದಿಲ್ಲ. ಒಂದು ಬೃಹತ್ ಉದ್ಯಮವಾಗಿ ಬೆಳೆದಿರುವುದರ ಲಕ್ಷಣ ಇದಾಗಿದೆ.‌

ಇವತ್ತು ಯಾವುದೇ ಒಂದು ರಾಜ್ಯ ಕ್ರಿಕೆಟ್ ತಂಡವನ್ನು ನೋಡಿ. 16 ಮಂದಿ ಆಟಗಾರರಿರುತ್ತಾರೆ. ಅವರಿಗೆ ನೆರವು ಸಿಬ್ಬಂದಿಯಾಗಿ ಕನಿಷ್ಠ ಹತ್ತು ಜನರಾದರೂ ಇದ್ದೇ ಇರುತ್ತಾರೆ. ಅದರ ಹೊರತಾಗಿ ಆಯಾ ಕ್ರಿಕೆಟ್ ಸಂಸ್ಥೆಗಳ ಅಂಪೈರ್‌ಗಳು, ಪಿಚ್ ಕ್ಯುರೇಟರ್, ವಿಡಿಯೊ ವಿಶ್ಲೇಷಕರು, ಸ್ಕೋರರ್‌ಗಳು ಮತ್ತು ಮಾಧ್ಯಮ ಸಂಯೋಜಕರೂ ಇರುತ್ತಾರೆ. ಒಂದು ರಾಷ್ಟ್ರಮಟ್ಟದ ಪಂದ್ಯ ಎಲ್ಲಿಯೇ ನಡೆದರೂ ಇಷ್ಟು ಪ್ರಮಾಣದ ವೃತ್ತಿಪರರು ಅಲ್ಲಿ ಕಾರ್ಯನಿರ್ವಹಿಸುತ್ತಾರೆ.

ಈಗ ದೇಶಿ ಲೀಗ್ ಟೂರ್ನಿಗಳು ಜಾಸ್ತಿಯಾಗುತ್ತಿವೆ. ಅದರಿಂದಾಗಿ ಫ್ರ್ಯಾಂಚೈಸ್‌ಗಳಲ್ಲಿಯೂ ವೃತ್ತಿಪರರಿಗೆ ಒಳ್ಳೆಯ ಬೇಡಿಕೆ ಇದೆ. ಸ್ಪರ್ಧೆ ಹೆಚ್ಚಿದಂತೆ ಗುಣಮಟ್ಟವೂ ಹೆಚ್ಚಬೇಕು. ಅದಕ್ಕಾಗಿ ಪರಿಣತರು ಮತ್ತು ಅನುಭವಿಗಳಿಗೆ ಹೆಚ್ಚು ಸಂಭಾವನೆ ನೀಡಲು ಕ್ಷೇತ್ರ ಸಿದ್ಧವಾಗಿದೆ. ಇದರಿಂದಾಗಿ ಆಟಗಾರರ ದೈಹಿಕ, ಮಾನಸಿಕ ಕ್ಷಮತೆ ಹೆಚ್ಚುತ್ತಿದೆ. ಜೊತೆಗೆ ಆಟದ ಪೈಪೋಟಿಯೂ ಉತ್ತುಂಗಕ್ಕೆ ಏರುತ್ತಿದೆ. ವೀಕ್ಷಕರ ಸಂಖ್ಯೆಯೂ ಹೆಚ್ಚುತ್ತಿದೆ. ಬಿಸಿಸಿಐಗೆ ಪ್ರಾಯೋಜಕತ್ವದ ಹೊಳೆ ಹರಿಯುತ್ತಿದೆ. ಇದರ ಸ್ವಲ್ಪ ಭಾಗ ವೃತ್ತಿಪರರಿಗೆ ಸಂಭಾವನೆ, ಸಾರಿಗೆ, ಸಂಬಳ ರೂಪದಲ್ಲಿ ಸಂದಾಯವಾಗುತ್ತಿದೆ.

‘ನಮ್ಮ ಸಮಯದಲ್ಲಿ ಇಷ್ಟೆಲ್ಲ ವ್ಯವಸ್ಥೆಗಳು ಇರಲೇ ಇಲ್ಲ. ಆದರೆ ಆಟದ ಜನಪ್ರಿಯತೆ ಬೆಳೆದಂತೆ ವೃತ್ತಿಯ ಅವಕಾಶಗಳೂ ಹೆಚ್ಚುತ್ತಿವೆ. ಭಾರತ ತಂಡದಲ್ಲಿ ಗರಿಷ್ಠ 16 ಆಟಗಾರರಿಗೆ ಸ್ಥಾನ ಸಿಗುತ್ತದೆ. ಆದರೆ ನಮ್ಮಲ್ಲಿರುವ 38 ತಂಡಗಳ ಆಟಗಾರರಿಗೂ ಬೇರೆ ಬೇರೆ ಹಂತಗಳಲ್ಲಿಯೂ ಅವಕಾಶ ಸಿಗುವಂತಾಗಬೇಕು. ಅದಕ್ಕಾಗಿಯೇ ವಿವಿಧ ವಯೋಮಿತಿಯ ಟೂರ್ನಿಗಳು, ಅಂತರರಾಜ್ಯ ಟೂರ್ನಿಗಳನ್ನು ಬಿಸಿಸಿಐ ನಡೆಸುತ್ತಿದೆ. ಇದರಿಂದ ವರ್ಷವಿಡೀ ಕ್ರಿಕೆಟ್‌ ಪಂದ್ಯಗಳು ನಡೆಯುತ್ತಲೇ ಇರುತ್ತವೆ. ಇದು ಆಟದೊಂದಿಗೆ ನಿರಂತರ ನಂಟು ಉಳಿಸಿಕೊಳ್ಳಲು ಸಾಧ್ಯ ವಾಗುತ್ತಿದೆ. ಈ ರೀತಿಯ ವೃತ್ತಿಪರತೆ ಅವಕಾಶ ಬೇರೆ ಕ್ರೀಡೆಗಳಲ್ಲಿಯೂ ಸಿಗುವಂತಾಗಬೇಕು. ಆಗ ಮಾತ್ರ ಪಾಲಕ ರು ತಮ್ಮ ಮಕ್ಕಳನ್ನು ಆಟದ ಮೈದಾನಕ್ಕೆ ಕಳಿಸುತ್ತಾರೆ’ ಎಂದು ವೀಕ್ಷಕ ವಿವರಣೆ ಗಾರ ಗಾವಸ್ಕರ್ ಹೇಳುತ್ತಾರೆ.

ಭಾರತದಲ್ಲಿ ಕ್ರಿಕೆಟ್‌ ಆಟವೇ ಒಂದು ಧರ್ಮದಂತೆ ಬೆಳೆದಿದೆ. ಆದರೆ ಯುರೋಪ್‌ನಲ್ಲಿ ಫುಟ್‌ಬಾಲ್‌, ಅಮೆರಿಕದಲ್ಲಿ ಎನ್‌ಬಿಎ ಬ್ಯಾಸ್ಕೆಟ್‌ಬಾಲ್, ರಗ್ಬಿ, ಬೇಸ್‌ಬಾಲ್‌ ಕ್ರೀಡೆಗಳಲ್ಲಿ ಇಂತಹ ಹತ್ತಾರು ಅವಕಾಶಗಳು ಇವೆ. ಒಬ್ಬ ಹುಡುಗ ಅಥವಾ ಹುಡುಗಿ ಒಂದೊಮ್ಮೆ ತಮ್ಮ ನೆಚ್ಚಿನ ಆಟವನ್ನು ಆಯ್ಕೆ ಮಾಡಿಕೊಂಡರೆ ಜೀವನಪೂರ್ತಿ ಅವರು ಅದರೊಂದಿಗೆ ನಂಟು ಇಟ್ಟುಕೊಳ್ಳುವ ಅವಕಾಶ ಇಲ್ಲಿದೆ. ಒಂದಿಲ್ಲೊಂದು ಹಂತದಲ್ಲಿ ಅವರಿಗೆ ಉದ್ಯೋಗಗಳು ಸಿಗುತ್ತವೆ. ಆಟಗಾರರಾಗಿ ನಿವೃತ್ತರಾದ ನಂತರವೂ ಕ್ರೀಡಾಂಗಣದಲ್ಲಿ ಉಳಿಯುವುದರ ಜೊತೆಗೆ, ಜೀವನ ರೂಪಿಸಿಕೊಳ್ಳಲು ಆದಾಯವೂ ಸಿಗುತ್ತದೆ. ಅದು ಕೂಡ ಯಾವುದೇ ಖಾಸಗಿ ಅಥವಾ ಸರ್ಕಾರಿ ಉದ್ಯೋಗಗಳಿಗೆ ಕಮ್ಮಿ ಇಲ್ಲದಂತಹ ಆದಾಯ ಎನ್ನುವುದು ಇಲ್ಲಿ ವಿಶೇಷ. ಆ ಎಲ್ಲ ವೃತ್ತಿಗಳಿಗಾಗಿ ಪರಿಣತರನ್ನು ಸಿದ್ಧಗೊಳಿಸಲು ವಿಶೇಷ ತರಬೇತಿ ಕೋರ್ಸ್‌ಗಳೂ ಇವೆ. ಸ್ಪೇನ್, ಜರ್ಮನಿ, ಫ್ರಾನ್ಸ್‌ಗಳಲ್ಲಿ ಫುಟ್‌ಬಾಲ್ ಸಂಬಂಧಿ ಉದ್ಯೋಗ ತರಬೇತಿ ಪಡೆಯಲು 25 ರಿಂದ 50 ಲಕ್ಷ ರೂಪಾಯಿಗಳ ಶುಲ್ಕ ತೆಗೆದುಕೊಳ್ಳುತ್ತಾರೆ. ಕೆಲವು ಭಾರತೀಯ ಯುವಕರೂ ಅತ್ತ ಆಕರ್ಷಿತರಾಗುತ್ತಿದ್ದಾರೆ.

ಭಾರತದಲ್ಲಿಯೂ ಫುಟ್‌ಬಾಲ್, ಟೆನಿಸ್, ಕುಸ್ತಿ, ಕಬಡ್ಡಿ ಪ್ರೊ ಲೀಗ್ ಟೂರ್ನಿಗಳು ಬಂದ ನಂತರ ಇಂತಹ ಕೆಲವು ಅಲ್ಪಾವಧಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಮಾಜಿ ಆಟಗಾರರು ಕಾಮೆಂಟ್ರಿ ಬಾಕ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಕ್ರಿಕೆಟ್‌ ಮಟ್ಟಕ್ಕೆ ಬೆಳೆಯಲು ಈ ಕ್ರೀಡೆಗಳಿಗೆ ಇನ್ನೂ ಸಾಕಷ್ಟು ಸಮಯ ಬೇಕು ಎಂಬುದರಲ್ಲಿ ಸಂಶಯವಿಲ್ಲ.

‘ಈ ವರ್ಷ ಬೆಂಗಳೂರಿನಲ್ಲಿಯೇ ಎಲ್ಲ ಹಂತದ ಟೂರ್ನಿಗಳು ಸೇರಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆಯಲಿವೆ. ಇದರಲ್ಲಿ ಅಂತರರಾಷ್ಟ್ರೀಯ, ರಣಜಿ, ಲಿಸ್ಟ್ ಎ, ವಲಯವಾರು ಮತ್ತಿತರ ಟೂರ್ನಿಗಳೂ ಸೇರಿವೆ. ಈ ಎಲ್ಲ ಪಂದ್ಯಗಳಿಗೆ ಬೇರೆ ಬೇರೆ ಸಿಬ್ಬಂದಿಗಳು ಬೇಕು. ಅದರಲ್ಲೂ ಮುಖ್ಯವಾಗಿ ಅಂಪೈರ್, ರೆಫರಿ ಮತ್ತಿತರ ಪರಿಣತರು ಬೇಕೆ ಬೇಕು. ಕ್ರಿಕೆಟ್‌ ಬೆಳೆದಂತೆ ಈ ವೃತ್ತಿಪರರಿಗೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ ಆ ವಿಭಾಗಗಳಲ್ಲಿಯೂ ತರಬೇತಿ, ಪರೀಕ್ಷೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ’ ಎಂದು ಕೆಎಸ್‌ಸಿಎ ಮೂಲಗಳು ಹೇಳುತ್ತವೆ.

ಬ್ರ್ಯಾಂಡ್, ಕಮ್ಯುನಿಕೇಷನ್

ಇದಲ್ಲದೇ ಕೆಲವು ಖಾಸಗಿ ಕಂಪೆನಿಗಳು ವೃತ್ತಿಪರ ನಿರ್ವಹಣಾ ಸಮೂಹಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಸಂವಹನ ಪರಿಣತರು ಆಟಗಾರರಿಗೆ ಮಾಧ್ಯಮಗೋಷ್ಠಿಯನ್ನು ಎದುರಿಸುವ, ವಿಡಿಯೊ ಶೂಟ್‌ಗಳು ಮತ್ತು ಜಾಹೀರಾತುಗಳಲ್ಲಿ ನಟಿಸುವ ಕಲೆಗಳನ್ನು ಹೇಳಿಕೊಡುತ್ತಾರೆ. ಆಟಗಾರರು ಗಳಿಸುವ ಆದಾಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಕೆಲಸ ಮಾಡುವ ಆಡಿಟರ್‌ ಸಂಸ್ಥೆಗಳು ಇವೆ. ತಾರಾ ವರ್ಚಸ್ಸಿನ ಆಟಗಾರರ ಬ್ರ್ಯಾಂಡ್‌ ಮೌಲ್ಯವನ್ನು ಹೆಚ್ಚಿಸುವಂತೆ ನೋಡಿಕೊಳ್ಳುವುದೇ ಈ ಸಂಸ್ಥೆಗಳ ಕೆಲಸ.

ಈ ಎಲ್ಲ ಕಾರಣಗಳಿಂದಾಗಿಯೇ ಪಾಲಕರು ತಮ್ಮ ಮಕ್ಕಳನ್ನು ಕ್ರಿಕೆಟ್ ಆಟಕ್ಕೆ ಸೇರಿಸಲು ಉತ್ಸುಕರಾಗಿದ್ದಾರೆ.

ಪರೀಕ್ಷಾ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು

ಕ್ರಿಕೆಟ್ ಸಂಬಂಧಿತ ವೃತ್ತಿಗಳ ಕೋರ್ಸ್‌ಗಳಿಗೆ ಹೆಚ್ಚು ಆದ್ಯತೆ ನೀಡುತ್ತೇವೆ. ಕ್ರಿಕೆಟ್‌ನ ಎಲ್ಲ ವಿಭಾಗಗಳಲ್ಲಿಯೂ ಕರ್ನಾಟಕದವರು ಈಗ ಇದ್ದಾರೆ. ಅವರ ಸಂಖ್ಯೆಯು ಹೆಚ್ಚಬೇಕು. ಬಿಸಿಸಿಐ, ಐಸಿಸಿ ಮಟ್ಟದಲ್ಲಿ ನಮ್ಮ ಸಂಸ್ಥೆಯ ವೃತ್ತಿಪರರು ಕಾರ್ಯನಿರ್ವಹಿಸಬೇಕು. ಅದಕ್ಕೆ ತಕ್ಕ ತರಬೇತಿ, ಮಾರ್ಗದರ್ಶನ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ ಎಂದುಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ ಹೇಳುತ್ತಾರೆ.

ಈ ರೀತಿಯ ವ್ಯವಸ್ಥೆ ಶಾಶ್ವತವೇ?

ಕ್ರಿಕೆಟ್‌ನಲ್ಲಿ ಇವತ್ತು ಹತ್ತಾರು ತರಹದ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡು ಆಟದೊಂದಿಗೆ ನಂಟು ಉಳಿಸಿಕೊಳ್ಳುವ ಸಾಧ್ಯತೆಗಳು ಇವೆ. ಆದರೆ ಕೆಲವರಿಗೆ ಇನ್ನೂ ಒಂದಷ್ಟು ಅನುಮಾನಗಳು ಕಾಡುತ್ತಿವೆ.

ಪ್ರಮುಖವಾಗಿ; ಇರುವ ಕೆಲಸವನ್ನು ಬಿಟ್ಟು ಅಥವಾ ಮುಖ್ಯ ಉದ್ಯೋಗವಾಗಿ ಕ್ರಿಕೆಟ್‌ ಸಂಬಂಧಿತ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಬಹುದೇ? ಒಂದೊಮ್ಮೆ ಮಾಡಿಕೊಂಡರೆ ಈಗ ಇರುವಷ್ಟೇ ಪಂದ್ಯಗಳು ಭವಿಷ್ಯದಲ್ಲಿಯೂ ನಡೆಯುತ್ತವೆಯೇ? ‍ಪ್ರಾಯೋಜಕತ್ವದ ಹರಿವು ಇದೇ ರೀತಿ ಇರುತ್ತದೆಯೇ? ಎಂಬ ಪ್ರಶ್ನೆಗಳನ್ನು ಕೆಲವರು ಕೇಳುತ್ತಾರೆ.

ಬಿಸಿಸಿಐನ ಒಂದು ಮೂಲದ ಪ್ರಕಾರ, ಇವತ್ತು ಒಬ್ಬ ಬಿಸಿಸಿಐ ಪ್ಯಾನಲ್ ಅಂಪೈರ್‌ಗೆ ವರ್ಷದಲ್ಲಿ ನಾಲ್ಕು ತಿಂಗಳು ಕೆಲಸ ಇದ್ದೇ ಇರುತ್ತದೆ. ಒಂದು ದಿನದ ಕಾರ್ಯನಿರ್ವಹಣೆಗೆ ಬಿಸಿಸಿಐ ಅಂಪೈರ್ ಸುಮಾರು ₹ 30 ಸಾವಿರದವರೆಗೂ ಸಂಭಾವನೆ ಪಡೆಯುತ್ತಾರೆ. ಒಂದು ರಣಜಿ ಪಂದ್ಯದಲ್ಲಿ ಕೆಲಸ ಮಾಡಿದರೆ ₹ 1.20 ಲಕ್ಷ ಖಚಿತ. ದಿನಭತ್ಯೆ, ಸೌಲಭ್ಯಗಳು ಪ್ರತ್ಯೇಕವಾಗಿರುತ್ತವೆ. ಅದೇ ರೀತಿ ಸ್ಕೋರರ್‌ಗೆ ಎಂಟರಿಂದ ಹತ್ತು ಸಾವಿರ ರೂಪಾಯಿ ಸಿಗುತ್ತಿದೆ. ರಾಜ್ಯ ಸಂಸ್ಥೆಯ ಅಂಪೈರ್‌ಗಳಿಗೆ ₹ 1,500 ಸಿಗುತ್ತಿದೆ. ಸದ್ಯದಲ್ಲಿ ಬಿಸಿಸಿಐ ಅಂಪೈರ್‌ಗಳು ನಾಲ್ಕು ತಿಂಗಳಲ್ಲಿ ಒಟ್ಟು ಎಂಟರಿಂದ ಹತ್ತು ಲಕ್ಷ ರೂಪಾಯಿಗಳವರೆಗೆ ಗಳಿಸುವ ಅವಕಾಶಗಳಿವೆ. ಕೆಲವರು ಅಂಪೈರಿಂಗ್, ಸ್ಕೋರಿಂಗ್ ಮಾಡಿ, ಬಿಡುವಿನ ವೇಳೆಯಲ್ಲಿ ಸ್ಥಳೀಯ ಪಂದ್ಯಗಳಲ್ಲಿ ಅಥವಾ ತಮ್ಮ ಪರಿಣತಿ ಇರುವ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅವರೆಲ್ಲರ ಆಶಯವೆಂದರೆ ಮುಂದೆಯೂ ಇದೇ ಪ್ರಮಾಣದಲ್ಲಿ ಅವಕಾಶಗಳು ನಿರಂತರವಾಗಿ ಸಿಗುವಂತಾಗಬೇಕು ಎಂಬುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT