ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲೇ ಟಿ20 ವಿಶ್ವಕಪ್‌ ಆಯೋಜನೆ: ಬಿಸಿಸಿಐ ವಿಶ್ವಾಸ

ನಾಲ್ಕು ಅಥವಾ ಐದು ನಗರಗಳಿಗೆ ಆತಿಥ್ಯ ಸಾಧ್ಯತೆ
Last Updated 30 ಏಪ್ರಿಲ್ 2021, 21:53 IST
ಅಕ್ಷರ ಗಾತ್ರ

ನವದೆಹಲಿ: ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲೇ ಆಯೋಜಿಸುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವಾಸ ವ್ಯಕ್ತಪಡಿಸಿದೆ. ಆದರೆ ಈ ಮೊದಲು ನಿಗದಿಯಾಗಿದ್ದ ಒಂಬತ್ತರ ಬದಲು ಐದು ನಗರಗಳಲ್ಲಿ ಟೂರ್ನಿ ನಡೆಯುವ ಸಾಧ್ಯತೆಯಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಒಪ್ಪಂದದಂತೆ, ಟೂರ್ನಿಯ ಪರ್ಯಾಯ ಆತಿಥ್ಯ ರಾಷ್ಟ್ರವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಅನ್ನು (ಯುಎಇ) ಸಜ್ಜುಗೊಳಿಸಿತ್ತು.

‘ಟೂರ್ನಿಯ ಆರಂಭಕ್ಕೆ ಇನ್ನು ಐದು ತಿಂಗಳು ಉಳಿದಿದೆ. ದೇಶದ ಸಾಕಷ್ಟು ಜನರು ಇನ್ನೂ ಕೋವಿಡ್‌ಗೆ ಲಸಿಕೆ ಪಡೆಯಬೇಕಿದೆ. ವಿಶ್ವಕಪ್ ಆಯೋಜಿಸುವ ಸ್ಥಿತಿಯಲ್ಲಿ ನಾವಿದ್ದು, ಒಂಬತ್ತು ತಾಣಗಳ ಬದಲಾಗಿ ನಾಲ್ಕು ಅಥವಾ ಐದು ನಗರಗಳಲ್ಲಿ ಟೂರ್ನಿ ನಡೆಸುವ ಆಯ್ಕೆ ನಮ್ಮ ಮುಂದಿದೆ‘ ಎಂದು ಬಿಸಿಸಿಐನ ಹಿರಿಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಐಪಿಎಲ್‌ನ ಬಯೋಸೆಕ್ಯೂರ್ ವ್ಯವಸ್ಥೆಯನ್ನು ವೀಕ್ಷಿಸಲು ಐಸಿಸಿ ತಂಡವೊಂದು ಏಪ್ರಿಲ್ 26ರಂದು ದೆಹಲಿಗೆ ಬರಬೇಕಿತ್ತು. ಆದರೆ ಪ್ರಯಾಣ ನಿರ್ಬಂಧದಿಂದಾಗಿ ಈ ಭೇಟಿಯನ್ನು ಮುಂದೂಡಲಾಗಿದೆ.

‘ಟೂರ್ನಿ ನಡೆಯುವ ಸ್ಥಳ ಯುಎಇ ಆಗಿರಲಿದೆ‘ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮುಖ್ಯ ವ್ಯವಸ್ಥಾಪಕ ಧೀರಜ್ ಮಲ್ಹೊತ್ರಾ ಅವರು ಗುರುವಾರ ‘ಬಿಬಿಸಿ‘ಗೆ ತಿಳಿಸಿದ್ದರು.

‘ನಿಯಮಗಳ ಪ್ರಕಾರ ಯುಎಇ ಯಾವಾಗಲೂ ಎರಡನೇ ಆಯ್ಕೆ ಆಗಿರಲಿದೆ. ಕಳೆದ ವರ್ಷ ನಡೆದ ಐಸಿಸಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಧೀರಜ್ ಅವರು ಹೇಳಿರುವುದರಲ್ಲಿ ಹೊಸತೇನಿಲ್ಲ. ಐದು ತಿಂಗಳ ನಂತರವೂ ಕೋವಿಡ್ ಬಿಕ್ಕಟ್ಟು ಮುಂದುವರಿದರೆ ಪರ್ಯಾಯ ಯೋಜನೆಯ ಮೊರೆ ಹೋಗಬೇಕಾಗುತ್ತದೆ‘ ಎಂದು ಬಿಸಿಸಿಐ ಪದಾಧಿಕಾರಿ ಹೇಳಿದರು.

‘ಮುಂಬೈ, ಚೆನ್ನೈ, ದೆಹಲಿ ಮತ್ತು ಬೆಂಗಳೂರುಗಳಲ್ಲಿ ಅತ್ಯುತ್ತಮ ಕ್ರೀಡಾಂಗಣಗಳಿವೆ. ಆತಿಥ್ಯದ ಆಯ್ಕೆ ಬಂದಾಗ ಇವುಗಳನ್ನು ಕಡೆಗಣಿಸುವಂತಿಲ್ಲ‘ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT