ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಕೆ ನಾಯ್ಡು ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಜಯ ಅನಿವಾರ್ಯ

ಮಧ್ಯಪ್ರದೇಶ ಎದುರು ಇಂದಿನಿಂದ ಪಂದ್ಯ
Last Updated 8 ಜನವರಿ 2019, 19:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತನ್ನ ಹಿಂದಿನ ಪಂದ್ಯದಲ್ಲಿ ತಮಿಳುನಾಡು ಎದುರು ಗೆಲುವು ಪಡೆದು ವಿಶ್ವಾಸದಲ್ಲಿರುವ ಕರ್ನಾಟಕ ತಂಡ 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಈಗ ಮತ್ತೊಂದು ಜಯದ ಅನಿವಾರ್ಯತೆಗೆ ಸಿಲುಕಿದೆ.

ಇಲ್ಲಿನ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗಲಿರುವ ನಾಲ್ಕು ದಿನಗಳ ಪಂದ್ಯದಲ್ಲಿ ರಾಜ್ಯ ತಂಡ ಮಧ್ಯಪ್ರದೇಶವನ್ನು ಎದುರಿಸಲಿದೆ. ಕರ್ನಾಟಕಕ್ಕೆ ಇದು ಕೊನೆಯ ಲೀಗ್ ಪಂದ್ಯವಾಗಿದ್ದು, ನಾಕೌಟ್‌ ತಲುಪಲು ಗೆಲುವು ಅಗತ್ಯವಾಗಿದೆ.

ಕರ್ನಾಟಕ ತಂಡ ಏಳು ಪಂದ್ಯಗಳನ್ನಾಡಿದ್ದು, ಮೂರರಲ್ಲಿ ಜಯ ಪಡೆದಿದೆ. ಎರಡರಲ್ಲಿ ಸೋತಿದ್ದು, ಎರಡು ಡ್ರಾ ಆಗಿವೆ. ಒಟ್ಟು 23 ಪಾಯಿಂಟ್ಸ್‌ ಹೊಂದಿದೆ. ತಮಿಳುನಾಡು ಎದುರಿನ ಪಂದ್ಯದಲ್ಲಿ ರಾಜ್ಯ ತಂಡ ಐದು ವಿಕೆಟ್‌ಗಳ ಗೆಲುವು ಪಡೆದಿತ್ತು. ಎಂ.ಬಿ. ದರ್ಶನ್‌ ಐದು, ಮನೋಜ ಬಾಂಢಗೆ ನಾಲ್ಕು ವಿಕೆಟ್‌ ಕಬಳಿಸಿದ್ದರು.

ಸುಜಿತ್‌ ಎನ್‌. ಗೌಡ 86 ರನ್ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದ್ದರಿಂದ ಇವರ ಮೇಲೆ ಹೆಚ್ಚು ನಿರೀಕ್ಷೆಯಿದೆ. ಹುಬ್ಬಳ್ಳಿಯ ಪ್ರತೀಕ ಪಾಟೀಲ ಹಾಗೂ ಪರೀಕ್ಷಿತ್‌ ಶೆಟ್ಟಿ 15 ಸದಸ್ಯರ ತಂಡದಲ್ಲಿದ್ದಾರೆ.

ಮಧ್ಯಪ್ರದೇಶ ಏಳು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಪಡೆದು, ನಾಲ್ಕು ಪಂದ್ಯಗಳಲ್ಲಿ ಸೋತಿದೆ. ಈ ತಂಡದ ಖಾತೆಯಲ್ಲಿ 19 ಪಾಯಿಂಟ್ಸ್‌ ಇವೆ. ಆದ್ದರಿಂದ ಮಧ್ಯಪ್ರದೇಶದ ಪಾಲಿಗೆ ಇದು ’ಆಟಕ್ಕುಂಟು ಲೆಕ್ಕಕ್ಕಿಲ್ಲ‘ದ ಪಂದ್ಯ. ಎಲೀಟ್‌ ’ಎ‘ ಮತ್ತು ’ಬಿ‘ ಗುಂಪಿನಲ್ಲಿ 18 ತಂಡಗಳಿದ್ದು, ಹೆಚ್ಚು ಪಾಯಿಂಟ್ಸ್‌ ಕಲೆಹಾಕಿದ ಮೊದಲ ಐದು ತಂಡಗಳು ನಾಕೌಟ್‌ ತಲುಪಲಿವೆ. ಎಲೀಟ್‌ ’ಸಿ‘ ಮತ್ತು ಪ್ಲೇಟ್‌ ವಿಭಾಗದ ತಲಾ ಒಂದು ಅಗ್ರ ತಂಡ ಮುಂದಿನ ಘಟ್ಟ ತಲುಪಲಿದೆ.

ಬಂಗಾಳ (36 ಪಾಯಿಂಟ್ಸ್‌), ಪಂಜಾಬ್‌ (33), ಗುಜರಾತ್‌ (32), ಉತ್ತರ ಪ್ರದೇಶ (32) ಮತ್ತು ಮುಂಬೈ (28) ತಂಡಗಳು ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಹೊಂದಿವೆ. ಈ ಐದರೊಳಗೆ ಸ್ಥಾನ ಪಡೆಬೇಕಾದ ಸವಾಲು ಕರ್ನಾಟಕದ ಮುಂದಿದೆ.

’ತಮಿಳುನಾಡು ಎದುರು ಪಡೆದ ಗೆಲುವು ನಮ್ಮ ಆಟಗಾರರ ವಿಶ್ವಾಸ ಹೆಚ್ಚಿಸಿದೆ. ಸೋಲಿನತ್ತ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಅಂತಿಮ ಲೀಗ್ ಪಂದ್ಯದಲ್ಲಿ ಗೆಲುವು ಪಡೆಯುತ್ತೇವೆ‘ ಎಂದು ಕರ್ನಾಟಕ ತಂಡದ ಕೋಚ್‌ ಎನ್‌.ಸಿ. ಅಯ್ಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪಂದ್ಯ ಆರಂಭ: ಬೆಳಿಗ್ಗೆ 9.30ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT