ಗುರುವಾರ , ನವೆಂಬರ್ 21, 2019
26 °C

ಕ್ರಿಕೆಟ್‌: ಕರ್ನಾಟಕ–ಗೋವಾ ಹಣಾಹಣಿ ಇಂದಿನಿಂದ

Published:
Updated:

ಹುಬ್ಬಳ್ಳಿ: ಮೊದಲ ಪಂದ್ಯ ಡ್ರಾ ಮಾಡಿಕೊಂಡಿರುವ ಕರ್ನಾಟಕ ತಂಡ 16 ವರ್ಷದ ಒಳಗಿನವರ ವಿಜಯ್‌ ಮರ್ಚಂಟ್‌ ಟ್ರೋಫಿ ದಕ್ಷಿಣ ವಲಯದ ಕ್ರಿಕೆಟ್‌ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಗುರುವಾರದಿಂದ ಮೂರು ದಿನ ಗೋವಾ ಎದುರು ಆಡಲಿದ್ದು, ಗೆಲುವಿನ ನಿರೀಕ್ಷೆಯಲ್ಲಿದೆ.

ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡ ಇತ್ತೀಚೆಗೆ ಹೈದರಾಬಾದ್‌ ಎದುರು ಆಡಿತ್ತು. ಆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಒಟ್ಟು ಮೂರು ದಿನಗಳ ಪಂದ್ಯ ಎರಡು ದಿನವಷ್ಟೇ ನಡೆದಿತ್ತು. ಕರ್ನಾಟಕ–ಗೋವಾ ತಂಡಗಳ ನಡುವೆ ಬೆಳಗಾವಿಯಲ್ಲಿ ಪಂದ್ಯ ಆಯೋಜನೆಯಾಗಿತ್ತು. ಅಲ್ಲಿ ಮಳೆ ಭೀತಿ ಇರುವುದರಿಂದ ವಾಣಿಜ್ಯ ನಗರಿಗೆ ಸ್ಥಳಾಂತರಿಸಲಾಗಿದೆ.

ರಾಜ್ಯ ತಂಡ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿತ್ತು. ಎಸ್‌. ಚೈತನ್ಯ ಶತಕ ಗಳಿಸಿ ಬ್ಯಾಟಿಂಗ್‌ ಶಕ್ತಿ ಎನಿಸಿದ್ದರು. ಬೌಲಿಂಗ್‌ ಕೂಡ ಚುರುಕಾಗಿತ್ತು. ಗೋವಾ ತಂಡ ತನ್ನ ಮೊದಲ ಪಂದ್ಯದಲ್ಲಿ ಕೇರಳ ಎದುರು ಸೋತಿದೆ.

ಮೊದಲ ಇನಿಂಗ್ಸ್‌ನಲ್ಲಿ ಕೇವಲ 43 ರನ್‌ಗೆ ಆಲೌಟ್‌ ಆಗಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತ್ತು. ಈ ಪಂದ್ಯವನ್ನು ಕೇರಳ ಇನಿಂಗ್ಸ್‌ ಹಾಗೂ 174 ರನ್‌ಗಳಿಂದ ಜಯಿಸಿತ್ತು. ಆದ್ದರಿಂದ ಗೋವಾ ತಂಡ ಕೂಡ ಈ ಬಾರಿಯ ಟೂರ್ನಿಯಲ್ಲಿ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದೆ.

ಪಂದ್ಯ ಆರಂಭ: ಬೆಳಿಗ್ಗೆ 9.30.

ಪ್ರತಿಕ್ರಿಯಿಸಿ (+)