ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿಪಟಗಳ ಕದನ

Last Updated 19 ಮೇ 2018, 19:30 IST
ಅಕ್ಷರ ಗಾತ್ರ

ಗಾಳಿಪಟಗಳ ಕಥೆ

ಮಕರ ಸಂಕ್ರಾಂತಿಯಂದು ಸೂರ್ಯ ತನ್ನ ಪಥ ಬದಲಾಯಿಸುತ್ತಾನೆ. ಇದು ಭಾರತದಲ್ಲಿ ಸುಗ್ಗಿಯ ಸಂದರ್ಭವೂ ಹೌದು. ಆ ಹೊತ್ತಿನಲ್ಲಿ ದೇಶದ ಆಗಸದಲ್ಲಿ ಬಣ್ಣ ಬಣ್ಣದ ಗಾಳಿಪಟಗಳ ಹಾರಾಟ ಆರಂಭವಾಗುತ್ತವೆ.

ಇದೇ ಹೊತ್ತಿನಲ್ಲಿ ಗುಜರಾತಿನ ಅಹಮದಾಬಾದ್‌ನಲ್ಲಿ ‘ಅಂತರರಾಷ್ಟ್ರೀಯ ಗಾಳಿಪಟ ಉತ್ಸವ’ ಎನ್ನುವ ಹೆಸರಿನಲ್ಲಿ ಅತಿದೊಡ್ಡ ಕಾರ್ಯಕ್ರಮವೊಂದು ನಡೆಯುತ್ತದೆ. ಗಾಳಿಪಟ ಹಾರಿಸುವವರು ದೇಶದ–ವಿದೇಶಗಳಿಂದ ಇಲ್ಲಿಗೆ ಬರುತ್ತಾರೆ. ಈ ಬಗೆಯ ಉತ್ಸವಗಳು ಬೇರೆ ದೇಶಗಳಲ್ಲೂ ನಡೆಯುತ್ತವೆ.

**

ಗಾಳಿಪಟಗಳ ಕದನ

ಜಪಾನ್‌ನಲ್ಲಿ ಪ್ರತಿ ವರ್ಷ ಜೂನ್‌ ತಿಂಗಳಿನಲ್ಲಿ ಐದು ದಿನಗಳ ಗಾಳಿಪಟ ಕದನ ನಡೆಯುತ್ತದೆ. ಇದು ನಡೆಯುವುದು ಆ ದೇಶದ ಶಿರೋನ್ ಎನ್ನುವ ಊರಿನಲ್ಲಿ. ಇದು ಆರಂಭವಾಗಿದ್ದು 17ನೇ ಶತಮಾನದಲ್ಲಿ. ನಕನೊಗುಚಿ ನದಿಯವರೆಗೆ ಪಥಸಂಚಲನ ನಡೆಸುವ ಮೂಲಕ ಈ ಉತ್ಸವ ಆರಂಭವಾಗುತ್ತದೆ.

ಅಲ್ಲಿ ವಿರೋಧಿ ತಂಡಗಳು ನದಿಯ ಎರಡೂ ಬದಿಯ ದಂಡೆಗಳ ಮೇಲೆ ಎದುರುಬದುರಾಗಿ ನಿಲ್ಲುತ್ತವೆ. ಎರಡೂ ತಂಡಗಳ ಬಳಿ ದೊಡ್ಡ ಗಾತ್ರದ ಗಾಳಿಪಟಗಳು ಇರುತ್ತವೆ. ಎದುರು ಪಾಳೆಯದವರ ಗಾಳಿಪಟದ ದಾರ ಸುತ್ತಿಕೊಳ್ಳುವಂತೆ ಅಥವಾ ಹರಿದುಹೋಗುವಂತೆ ಮಾಡಿ, ಗಾಳಿಪಟ ನದಿಗೆ ಬೀಳುವಂತೆ ಮಾಡುವುದು ಈ ಆಟದ ಗುರಿ. ಒಂದೊಂದು ದಾರ ಹರಿದಾಗಲೂ ಹಾಗೆ ಮಾಡಿದ ತಂಡಕ್ಕೆ ಅಂಕ ಸಿಗುತ್ತದೆ.

**

ಕ್ಷಣಿಕ ಎಂಬ ಸಂದೇಶ

ಸಂಪಾಂಗೊ ನಗರದ ಗ್ವಾಟೆಮಾಲನ್ ಜನ ತಮ್ಮನ್ನು ಅಗಲಿದ ಪ್ರೀತಿಪಾತ್ರರಿಗೆ ಗೌರವ ಸಲ್ಲಿಸುವ ದಿನವಾದ ನವೆಂಬರ್ 1ರಂದು ಗಾಳಿಪಟಗಳ ಉತ್ಸವ ಆಯೋಜಿಸುತ್ತಾರೆ. ಜನ ಗುಂಪುಗಳಾಗಿ ಅಲ್ಲಿ ಬೃಹತ್ ಗಾತ್ರದ ಸುಂದರ ಗಾಳಿಪಟಗಳನ್ನು ಸಿದ್ಧಪಡಿಸುತ್ತಾರೆ.

ವೃತ್ತಾಕಾರದ ಈ ಗಾಳಿಪಟಗಳ ವ್ಯಾಸವು ಎರಡು ಮೀಟರ್‌ಗಳಿಂದ ಆರಂಭವಾಗಿ, ಇಪ್ಪತ್ತು ಮೀಟರ್‌ಗಳವರೆಗೂ ಇರುತ್ತದೆ. ಬಿದಿರಿನ ಪಟ್ಟಿಗಳು ಮತ್ತು ಮೃದು ಕಾಗದ ಬಳಸಿ ಈ ಗಾಳಿಪಟ ಮಾಡಲಾಗುತ್ತದೆ. ಅವುಗಳ ಮೇಲೆ ಸಂಕೀರ್ಣ ಚಿತ್ರಗಳೂ ಇರುತ್ತವೆ. ಕೆಲವು ಪಟಗಳ ಮೇಲೆ ‘ಪರಿಸರ ಉಳಿಸಿ’ ಎಂಬ ಸಂದೇಶ ಕೂಡ ಇರುತ್ತದೆ.

ಹಬ್ಬದ ದಿನ ಅಲ್ಲಿನ ಜನ, ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೇರಿ ಗಾಳಿಪಟ ಹಾರಿಸುತ್ತಾರೆ. ಗಾಳಿಪಟಗಳನ್ನು ಎಷ್ಟು ಸೃಜನಶೀಲವಾಗಿ ಸಿದ್ಧಪಡಿಸಲಾಗಿದೆ, ಅವು ಎಷ್ಟು ಹೊತ್ತು ಹಾರಾಟ ನಡೆಸಿವೆ ಎಂಬುದರ ಆಧಾರದಲ್ಲಿ ಸ್ಪರ್ಧೆ ಕೂಡ ನಡೆಯುತ್ತದೆ.

ಗಾಳಿಪಟ ಗಾಳಿಯಲ್ಲಿ ಮೇಲೆ ಮೇಲೆ ಹಾರಿದಾಗ, ಅಲ್ಲಿ ಜೋರಾಗಿ ಬೀಸುವ ಗಾಳಿ ಪಟಗಳನ್ನು ಹರಿದುಹಾಕುತ್ತವೆ. ಜೀವನ ಮತ್ತು ಸೌಂದರ್ಯ ಕ್ಷಣಿಕ ಎಂಬ ಸಂದೇಶವನ್ನು ಇದು ಪ್ರತಿನಿಧಿಸುತ್ತದೆ.

**

ಕಾಯುವವರ ಮುಷ್ಕರ

ಲಿಯೊನಾರ್ಡೊ ಡಾ ವಿನ್ಸಿ ಅವರ ‘ಮೋನಾಲಿಸಾ’ ಕಲಾಕೃತಿಯನ್ನು ಕಾಯಲು ನೇಮಕಗೊಂಡ ಭದ್ರತಾ ಸಿಬ್ಬಂದಿ ಒಮ್ಮೆ ಮುಷ್ಕರ ಹೂಡಿದರು. ತಾವು ಮಾಡುವ ಕೆಲಸಕ್ಕೆ ಹೆಚ್ಚಿನ ವೇತನ ನೀಡಬೇಕು ಎಂಬುದು ಅವರ ಬೇಡಿಕೆ ಆಗಿತ್ತು.

ಏಕೆಂದರೆ, ಈ ಕಲಾಕೃತಿಯನ್ನು ರಕ್ಷಿಸುವುದು ಅವರ ಪ್ರಕಾರ ಬಹಳ ಒತ್ತಡದ ಕೆಲಸ. ಈ ಕಲಾಕೃತಿಯನ್ನು ವೀಕ್ಷಿಸಲು ಪ್ರತಿ ಭಾನುವಾರ 65 ಸಾವಿರಕ್ಕೂ ಹೆಚ್ಚು ಜನ ಪ್ಯಾರಿಸ್ಸಿನ ಲಾವ್ರೆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT