ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೆಸ್ಟ್ ಸಾಯಲು ಗಂಗೂಲಿ ಬಿಡಲ್ಲ; ಬಿಸಿಸಿಐ ಒಪ್ಪದೆ 4 ದಿನಗಳ ಟೆಸ್ಟ್ ಜಾರಿ ಇಲ್ಲ’

ಸೌರವ್ ಗಂಗೂಲಿ ಬುದ್ಧಿವಂತ ಎಂದ ಪಾಕಿಸ್ತಾನ ವೇಗಿ ಶೋಯಬ್‌ ಅಖ್ತರ್
Last Updated 6 ಜನವರಿ 2020, 11:08 IST
ಅಕ್ಷರ ಗಾತ್ರ

ಕೋಲ್ಕತ್ತ:ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಜಾರಿಗೆ ತರಲು ಉದ್ದೇಶಿಸಿರುವ ನಾಲ್ಕು ದಿನಗಳ ಟೆಸ್ಟ್‌ಆಯೋಜನೆ ಬಗ್ಗೆ ಯಾರಿಗೂ ಆಸಕ್ತಿಯಿಲ್ಲ. ಬಿಸಿಸಿಐ ಒಪ್ಪಿಗೆ ಇಲ್ಲದೆ, ಐಸಿಸಿ ಇದನ್ನು ಜಾರಿಮಾಡಲಾಗದುಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್‌ ಅಖ್ತರ್ ಹೇಳಿದ್ದಾರೆ.

ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿಇತ್ತೀಚೆಗೆ ಬಿಡುಗಡೆಮಾಡಿರುವ ವಿಡಿಯೊದಲ್ಲಿ ಅವರು, ‘ನಾಲ್ಕು ದಿನಗಳ ಟೆಸ್ಟ್‌ ಯೋಜನೆ ಮೂರ್ಖತನದ್ದಾಗಿದೆ. ಯಾರೊಬ್ಬರಿಗೂ ಇದರಲ್ಲಿ ಆಸಕ್ತಿಯಿಲ್ಲ.ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ಬುದ್ದಿವಂತರಾಗಿದ್ದು, ಅವರು ಇದು ನಡೆಯಲು ಬಿಡುವುದಿಲ್ಲ. ಟೆಸ್ಟ್‌ ಕ್ರಿಕೆಟ್‌ ಸಾಯಲು ಅವರು ಬಿಡುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಬಿಸಿಸಿಐ ಒಪ್ಪಿಗೆ ಇಲ್ಲದೆ ಐಸಿಸಿ ಇದನ್ನು (ನಾಲ್ಕು ದಿನಗಳ ಟೆಸ್ಟ್‌) ಜಾರಿಗೆ ತರಲು ಸಾಧ್ಯವಿಲ್ಲ. ಪಾಕಿಸ್ತಾನ, ಶ್ರೀಲಂಕಾ ಹಾಗೂ ಭಾರತದ ಹೆಚ್ಚು ಜನರು ಇದರ ವಿರುದ್ಧ ಧ್ವನಿ ಎತ್ತಲಿ. ನನ್ನ ದೇಶದ ದಿಗ್ಗಜ ಕ್ರಿಕೆಟಿಗರೂ ಇದರ ಅಭಿಪ್ರಾಯ ವ್ಯಕ್ತಪಡಿಸಲಿ’ ಎಂದು ಹೇಳಿದ್ದಾರೆ.

20018ರಿಂದ ಈಚೆಗೆ ನಡೆದ ಶೇ. 60 ರಷ್ಟು ಪಂದ್ಯಗಳು ನಾಲ್ಕು ದಿನಗಳಲ್ಲೇ ಮುಕ್ತಾಯವಾಗಿವೆ ಎಂಬುದನ್ನು ಪರಿಗಣಿಸಿ ಈ ನಿರ್ಧಾರ ಕೈಗೊಂಡಿರುವ ಐಸಿಸಿ, ಪ್ರತಿದಿನ 98 ಓವರ್‌ಗಳ ಆಟ ನಡೆಯುವಂತೆ ನಾಲ್ಕುದಿನಗಳ ಟೆಸ್ಟ್‌ ಆಯೋಜನೆ ಪ್ರಸ್ತಾವನೆ ಸಲ್ಲಿಸಿದೆ. ಈ ನಿರ್ಧಾರಕ್ಕೆ ಹಲವು ದಿಗ್ಗಜ ಕ್ರಿಕೆಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಐಸಿಸಿ ಪ್ರಸ್ತಾವದ ಬಗ್ಗೆ ಪ್ರತಿಕ್ರಿಯಿಸಲು ಇದು ಸಕಾಲವಲ್ಲ. ಅದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ತಿಳಿದುಕೊಂಡು ನಂತರ ಪ್ರತಿಕ್ರಿಯಿಸುತ್ತೇನೆ’ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದರು.‌

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ,‘ಐಸಿಸಿಯ ಪ್ರಸ್ತಾವಕ್ಕೆ ನನ್ನ ಸಹಮತವಿಲ್ಲ. ಸಾಂಪ್ರದಾಯಿಕ ಟೆಸ್ಟ್‌ ಮಾದರಿಯ ಪಾವಿತ್ರಕ್ಕೆ ಧಕ್ಕೆ ಉಂಟಾಗುವಂತಹ ಯಾವುದೇ ಬದಲಾವಣೆಗಳನ್ನು ಮಾಡಿದರೂ ಅದನ್ನು ವಿರೋಧಿಸುತ್ತೇನೆ’ ಎಂದಿದ್ದರು.

ಮುಂದುವರಿದು,‘ಟೆಸ್ಟ್‌ ಮಾದರಿಗೆ ಅದರದ್ದೇ ಆದ ಪರಂಪರೆ ಇದೆ. ಅದನ್ನು ಹಾಗೆಯೇ ಇರಲು ಬಿಡಬೇಕು. ಈಗ ನಾಲ್ಕು ದಿನಗಳ ಟೆಸ್ಟ್‌ ಪ್ರಸ್ತಾವ ಮುಂದಿಡಲಾಗಿದೆ. ಮುಂದೆ ಪಂದ್ಯವನ್ನು ಮೂರು ದಿನಗಳಿಗೆ ಇಳಿಸುವಂತೆ ಮತ್ಯಾರೊ ಹೇಳಬಹುದು. ಇದಕ್ಕೆ ಕೊನೆಯೆಂಬುದೇ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಕೊಹ್ಲಿ ಹೇಳಿಕೆಯನ್ನು ಸಚಿನ್‌ ತೆಂಡೂಲ್ಕರ್‌ ಬೆಂಬಲಿಸಿದ್ದರು.

‘ಈ ಕುರಿತು ಗಂಭೀರ ಚಿಂತನೆ ನಡೆಯಬೇಕಿದೆ. ಈ ಯೋಜನೆ ಜಾರಿಯಾದರೆ ಏನೆಲ್ಲಾ ಅನುಕೂಲಗಳು ಆಗಲಿವೆ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ (ಸಿಎ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆವಿನ್‌ ರಾಬರ್ಟ್ಸ್‌ ಪ್ರತಿಕ್ರಿಯಿಸಿದ್ದರು.

ಆಸಿಸ್‌ ಮಾಜಿ ಕ್ರಿಕೆಟಿಗ ಗ್ಲೇನ್‌ ಮೆಕ್‌ಗ್ರಾತ್‌, ‘ನಾನು ಅಪ್ಪಟ ಸಂಪ್ರದಾಯವಾದಿ. ಆಟವು (ಟೆಸ್ಟ್‌ ಕ್ರಿಕೆಟ್‌) ಈಗ ಹೇಗಿದೆಯೋ ಆಗೆಯೇ ಇರುವುದನ್ನು ಬಯಸುತ್ತೇನೆ. ಅದನ್ನು ಕಡಿತಗೊಳಿಸುವುದನ್ನು ನಾನು ವಿರೋಧಿಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT