ಶುಕ್ರವಾರ, ಡಿಸೆಂಬರ್ 6, 2019
20 °C
ಬಿಸಿಸಿಐ ಅಧ್ಯಕ್ಷ

ಪ್ರತಿ ಸರಣಿಯಲ್ಲಿ ಕನಿಷ್ಠ ಒಂದಾದರೂ ಪಿಂಕ್‌ ಟೆಸ್ಟ್ ಇರಲಿ: ಸೌರವ್ ಗಂಗೂಲಿ

Published:
Updated:

ನವದೆಹಲಿ: ವಿರಾಟ್‌ ಕೊಹ್ಲಿ ನೇತೃತ್ವದಲ್ಲಿ ಭಾರತವು ಪ್ರತಿ ಟೆಸ್ಟ್‌ ಸರಣಿಯಲ್ಲಿ ಕನಿಷ್ಠ ಒಂದಾದರೂ ಪಿಂಕ್‌ ಟೆಸ್ಟ್‌ ಆಡಬೇಕು ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಬಯಸಿದ್ದಾರೆ.

ಭಾರತವು ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಕೊಲ್ಕತ್ತದಲ್ಲಿ ಪಿಂಕ್‌ ಟೆಸ್ಟ್‌ ಆಯೋಜಿಸಿತ್ತು. ಆ ಮೂಲಕ ಪಿಂಕ್‌ ಟೆಸ್ಟ್‌ ಆಯೋಜಿಸಿದ ಕ್ರಿಕೆಟ್‌ ಆಡುವ ಮತ್ತೊಂದು ಪ್ರಮುಖ ದೇಶ ಎನಿಸಿತು.

ಟೆಸ್ಟ್‌ ಕ್ರಿಕೆಟ್‌ನತ್ತ ಜನರನ್ನು ಸೆಳೆಯಲು ಹಗಲು–ರಾತ್ರಿ ಪಂದ್ಯಗಳು ಸಹಕಾರಿಯಾಗಲಿವೆ ಎಂಬುದು ಕ್ರಿಕೆಟ್‌ ಪಂಡಿತರ ಲೆಕ್ಕಾಚಾರ. ಅದರಂತೆ ಪಿಂಕ್‌ ಟೆಸ್ಟ್‌ ಆಯೋಜಿಸಲು ಸೌರವ್‌ ಗಂಗೂಲಿ ವಿಶೇಷ ಕಾಳಜಿ ತೋರಿದ್ದರು.

‘ಟೆಸ್ಟ್‌ ಕ್ರಿಕೆಟ್‌ನತ್ತ ಜನರನ್ನು ಸೆಳೆಯಲು ಇದೂ ಒಂದು ಹೆಜ್ಜೆ. ಎಲ್ಲ ಪಂದ್ಯಗಳೂ ಬೇಡ, ಸರಣಿಯಲ್ಲಿ ಕನಿಷ್ಠ ಒಂದು ಪಂದ್ಯವಾದರೂ ಸಾಕು’ ಎಂದು ಗಂಗೂಲಿ ದಿ ವೀಕ್‌ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕೋಲ್ಕತ್ತಾ ಫಲಿತಾಂಶವು ಪಿಂಕ್‌ ಟೆಸ್ಟ್ ಆಯೋಜನೆಗೆ ಸ್ಫೂರ್ತಿ ತುಂಬಿದೆ. ದೇಶದ ಬೇರೆ ಬೇರೆ ಪ್ರದೇಶಗಳಲ್ಲಿಯೂ ಹಗಲು–ರಾತ್ರಿ ಟೆಸ್ಟ್‌ಗೆ ಆತಿಥ್ಯ ವಹಿಸಲು ಸಿದ್ಧತೆ ನಡೆದಿವೆ ಎಂದೂ ಹೇಳಿದ್ದಾರೆ.

‘ನಾನು ಮಂಡಳಿಗಳೊಂದಿಗೆ ನನ್ನ ಅನುಭವವನ್ನು ಹಂಚಿಕೊಳ್ಳುತ್ತೇನೆ ಹಾಗೂ ಅವುಗಳನ್ನು ಬೇರೆ ಪ್ರದೇಶಗಳಲ್ಲಿಯೂ ಅಳವಡಿಸಿಕೊಳ್ಳಲು ಒಟ್ಟಾಗಿ ಪ್ರಯತ್ನಿಸುತ್ತೇವೆ. ಇದು(ಕೋಲ್ಕತ್ತಾ ಟೆಸ್ಟ್‌) ಆದ ನಂತರ ಎಲ್ಲರೂ ಸಿದ್ಧರಾಗಿದ್ದಾರೆ. ಐದು ಸಾವಿರ ಜನರೆದುರು ಕ್ರಿಕೆಟ್‌ ಆಡಲು ಯಾರೊಬ್ಬರೂ ಬಯಸುವುದಿಲ್ಲ’ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಪಿಂಕ್‌ ಬಾಲ್‌ ಟೆಸ್ಟ್‌ಗೆ ಸಂಬಂಧಿಸಿದಂತೆ ಬಿಸಿಸಿಐ ಮನವಿಗೆ ಒಪ್ಪಿಗೆ ಸೂಚಿಸಿದ್ದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಇದು ಕಡ್ಡಾಯವಾಗಬಾರದು ಎಂದೂ ತಿಳಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು