ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಪಡೆಗೆ ಶುಭಾರಂಭದ ನಿರೀಕ್ಷೆ: ಪ್ಲೆಸಿ ಬಳಗಕ್ಕೆ ಸೋಲಿನ ಸರಪಳಿ ಕಳಚುವ ತವಕ

Last Updated 5 ಜೂನ್ 2019, 11:24 IST
ಅಕ್ಷರ ಗಾತ್ರ

ಸೌತಾಂಪ್ಟನ್:ವಿಶ್ವಕಪ್ ಕ್ರಿಕೆಟ್ 2019 ಪಂದ್ಯಾವಳಿಯಲ್ಲಿ ಮೊದಲ ಪಂದ್ಯ ಆಡಲಿರುವ ಭಾರತ ಹಾಗೂ ಆಡಿರುವ ಎರಡೂ ಪಂದ್ಯಗಳಲ್ಲಿ ಮುಗ್ಗರಿಸಿರುವ ದಕ್ಷಿಣ ಆಫ್ರಿಕಾ ತಂಡ ಇಲ್ಲಿನ‘ದ ರೋಸ್ ಬಾಲ್‌’ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ.

ಪಂದ್ಯಾವಳಿ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳನ್ನು ಆಡಿದ್ದ ಭಾರತಕ್ಕೆ ಆರು ದಿನಗಳ ಬಳಿಕ ಕಣಕ್ಕಿಳಿಯುತ್ತಿದೆ. ಇದರಿಂದ ಉತ್ತಮ ಯೋಜನೆಗಳನ್ನು ರೂಪಿಸುವ ಹಾಗೂ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಅವಕಾಶ ವಿರಾಟ್‌ ಕೊಹ್ಲಿ ಬಳಗಕ್ಕೆ ಸಿಕ್ಕಂತಾಗಿದೆ. ಆದರೆ ಫಾಫ್‌ ಡು ಪ್ಲೆಸಿ ನೇತೃತ್ವದ ಆಫ್ರಿಕಾ ತಂಡ ಆಡಿರುವ ಎರಡೂ ಪಂದ್ಯಗಳಲ್ಲಿ ಹೀನಾಯವಾಗಿ ಸೋಲು ಕಂಡಿದ್ದು ಒತ್ತಡದಲ್ಲಿ ಅಂಗಳಕ್ಕಿಳಿಯುತ್ತಿದೆ.

ಈ ಪಂದ್ಯವನ್ನು ಗೆದ್ದು ಪಂದ್ಯಾವಳಿಯಲ್ಲಿ ಶುಭಾರಂಭ ಮಾಡುವ ಲೆಕ್ಕಾಚಾರ ವಿರಾಟ್‌ ಪಡೆಯ ಲೆಕ್ಕಾಚಾರ ಒಂದೆಡೆಯಾದರೆ, ಈ ಲೆಕ್ಕಾಚಾರವನ್ನು ಬುಡಮೇಲು ಮಾಡಿ ಸೋಲಿನ ಸುಳಿಯಿಂದ ಹೊರಬರಲು ಕಾದಿರುವ ಪ್ಲೆಸಿ ಪಡೆಯ ರಣತಂತ್ರ ಮತ್ತೊಂದೆಡೆ. ವಿಶ್ವಕಪ್‌ನಲ್ಲಿ ಉಭಯ ತಂಡಗಳು ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿವೆ. ಮೂರರಲ್ಲಿ ಆಪ್ರಿಕನ್ನರು ಜಯದ ನಗೆ ಬೀರಿದ್ದರೆ, ಭಾರತ ಗೆಲುವು ಕಂಡಿರುವುದು ಒಮ್ಮೆ ಮಾತ್ರ. ಹೀಗಾಗಿ ಇಂದು ಮದ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ ಪಂದ್ಯ ಕ್ರಿಕೆಟ್‌ ಪ್ರೇಮಿಗಳ ಕುತೂಹಲ ಕೆರಳಿಸಿದೆ.

ಮೊದಲೆರಡು ಪಂದ್ಯಗಳಲ್ಲಿ ಆಫ್ರಿಕಾ ಸೋಲು
ಪ್ರಬಲ ವೇಗಿಗಳು; ಪ್ರದರ್ಶನ‘ಡಮ್ಮಿ’
ಬಲಿಷ್ಠ ಬೌಲಿಂಗ್‌ ಹೊಂದಿರುವಆಫ್ರಿಕಾ ಈ ಬಾರಿ ತಾನಾಡಿರುವ ಎರಡೂ ಪಂದ್ಯಗಳಲ್ಲಿ ಮುನ್ನೂರಕ್ಕೂ ಹೆಚ್ಚು ಮೊತ್ತ ಬಿಟ್ಟುಕೊಟ್ಟಿರುವುದು ನಾಯಕ ಪ್ಲೆಸಿಗೆ ಒತ್ತಡ ಹೆಚ್ಚಿಸಿದೆ. ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ(ಮೇ 30) ಆತಿಥೇಯ ಆಂಗ್ಲರು ನಿಗದಿತ 50 ಓವರ್‌ಗಳಲ್ಲಿ 311 ರನ್‌ ಗಳಿಸಿದ್ದರು. ಈ ಪಂದ್ಯದಲ್ಲಿ ಆಫ್ರಿಕಾ 104ರನ್‌ ಅಂತರದಿಂದ ಸೋಲು ಕಂಡಿತ್ತು.ಎರಡನೇ ಪಂದ್ಯದಲ್ಲಿ ಅಷ್ಟೇನು ಪ್ರಬಲವಲ್ಲದ ಬಾಂಗ್ಲಾದೇಶವೂ 330ರನ್‌ ಕಲೆ ಹಾಕಿತ್ತು. ಈ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿಯೂ 21ರನ್‌ಗಳಿಂದ ಸೋತು ಮುಖಭಂಗ ಅನುಭವಿಸಿತ್ತು. ಈ ಸೋಲು ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಪೆಟ್ಟು ನೀಡಿದೆ.

ಆಫ್ರಿಕಾದ ಪ್ರಮುಖ ವೇಗಿಗಳಾದ ಕಗಿಸೊ ರಬಡಾ ಹಾಗೂ ಲುಂಗಿ ಗಿಡಿ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರದೇ ಇರುವುದು ಹಾಗೂ ಅನುಭವಿ ವೇಗಿ ಡೇಲ್‌ ಸ್ಟೇನ್‌ ಅನುಪಸ್ಥಿತಿ ಪ್ರಮುಖ ಹಿನ್ನಡೆಯಾಗಿದೆ.

ಕೈಗೂಡದ ನಾಯಕನ ಲೆಕ್ಕಾಚಾರ
ಮೊದಲೆರಡು ಪಂದ್ಯಗಳಲ್ಲಿ ಟಾಸ್‌ ಗೆದ್ದರೂ ಎದುರಾಳಿ ತಂಡಕ್ಕೆ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ನೀಡಿದ್ದು ಹರಿಣಗಳ ಪಾಲಿಗೆ ದುಬಾರಿಯಾಯಿತು. ಎದುರಾಳಿಗಳನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿ, ಗುರಿ ಬೆನ್ನಟ್ಟಿ ಗೆಲುವು ಸಾಧಿಸುವ ಲೆಕ್ಕಾಚಾರ ನಾಯಕ ಪ್ಲೆಸಿ ಲೆಕ್ಕಾಚಾರ ಕೈಗೂಡಲಿಲ್ಲ.

ಭಾರತತಂಡ ಸಂಯೋಜನೆ: 2015ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ ನಂತರ ಬಿಸಿಸಿಐ ಈ ವಿಶ್ವಕಪ್‌ ಟೂರ್ನಿಗಾಗಿ ಸಿದ್ಧತೆಯನ್ನು ಆರಂಭಿಸಿತ್ತು. ಅದಕ್ಕಾಗಿ ಹಲವಾರು ಪ್ರಯೋಗಗಳಿಗೆ ಕೈಹಾಕಿತ್ತು. ಅದರ ಫಲವಾಗಿ ಅನುಭವಿ ಮತ್ತು ಯುವ ಆಟಗಾರರು ಇರುವ ತಂಡವು ಸಿದ್ಧವಾಗಿದೆ.

ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಶಿಖರ್ ಧವನ್ ಮತ್ರು ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸುವುದು ಖಚಿತ. ಮೂರನೇ ಕ್ರಮಾಂಕದಲ್ಲಿ ವಿರಾಟ್, ನಾಲ್ಕರಲ್ಲಿ ಕೆ.ಎಲ್. ರಾಹುಲ್ ಆಡುವುದು ಬಹುತೇಕ ಖಚಿತ. ಐದನೇ ಕ್ರಮಾಂಕದಲ್ಲಿ ವಿಜಯಶಂಕರ್ ಅಥವಾ ಕೇದಾರ್ ಜಾಧವ್‌ ಅವರಲ್ಲಿ ಒಬ್ಬರಿಗೆ ಸ್ಥಾನ ಲಭಿಸಬಹುದು. ನಂತರ ಮಹೇಂದ್ರಸಿಂಗ್ ಧೋನಿ, ಹಾರ್ದಿಕ್ ಪಾಂಡ್, ರವೀಂದ್ರ ಜಡೇಜ ಬ್ಯಾಟಿಂಗ್‌ಗೆ ಬರುವ ಸಾಧ್ಯತೆ ಹೆಚ್ಚು. ಟಾಸ್ ಗೆಲ್ಲುವ ತಂಡದ ನಾಯಕ ತೆಗೆದುಕೊಳ್ಳುವ ನಿರ್ಧಾರವೂ ಇಲ್ಲಿ ಪ್ರಮುಖ ಪಾತ್ರ ವಹಿಸುವುದು.

ಡೆತ್ ಓವರ್ ಪರಿಣತ ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಮೇಲೆ ಹೆಚ್ಚು ನಿರೀಕ್ಷೆಗಳು ಇವೆ. ಫೀಲ್ಡಿಂಗ್‌ನಲ್ಲಿ ಲೋಪಗಳಾಗದಂತೆ ತಡೆದರೆ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT