ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ | ಪಾಂಡೆ ಬಳಗಕ್ಕೆ ರಾಯುಡು ಪಡೆ ಸವಾಲು

ಕರ್ನಾಟಕ–ಹೈದರಾಬಾದ್ ಮುಖಾಮುಖಿ ಇಂದು
Last Updated 30 ಸೆಪ್ಟೆಂಬರ್ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ದಿನಗಳ ಹಿಂದೆ ಚೆಂದದ ಶತಕ ಗಳಿಸಿದ್ದ ಕೆ.ಎಲ್. ರಾಹುಲ್ ಮತ್ತು ಸತತ ಎರಡು ಪಂದ್ಯಗಳಲ್ಲಿಯೂ ಅರ್ಧಶತಕದ ಮಿಂಚು ಹರಿಸಿರುವ ಮನೀಷ್ ಪಾಂಡೆ ಅವರ ಮೇಲೆ ಹೈದರಾಬಾದ್ ಬೌಲರ್‌ಗಳು ಈಗ ವಿಶೇಷ ನಿಗಾ ಇಟ್ಟಿದ್ದಾರೆ.

ಮಂಗಳವಾರ ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕದ ಎದುರು ಜಯಿಸಬೇಕಾದರೆ ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವುದು ಅಗತ್ಯ ಎಂಬುದು ಹೈದರಾಬಾದ್ ಬೌಲರ್‌ಗಳಿಗೆ ಮನವರಿಕೆಯಾಗಿದೆ. ಅದರಲ್ಲೂ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದಿರುವ ಆತಿಥೇಯ ಬಳಗದ ಮುಂದೆ ಹೈದರಾಬಾದ್ ಬಲಿಷ್ಠವೇನಲ್ಲ. ಆಡಿರುವ ಎರಡು ಪಂದ್ಯಗಳಲ್ಲಿ ಸೌರಾಷ್ಟ್ರದ ಎದುರು ಮಾತ್ರ ಅಂಬಟಿ ರಾಯುಡು ಬಳಗವು ಗೆದ್ದಿತ್ತು.

ಆದರೆ ಹೆಚ್ಚು ಆಲ್‌ರೌಂಡರ್‌ಗಳಿರುವ ಕರ್ನಾಟಕ ತಂಡವನ್ನು ಕಟ್ಟಿಹಾಕುವ ಕಠಿಣ ಸವಾಲು ಹೈದರಾಬಾದ್‌ನ ಮೊಹಮ್ಮದ್ ಸಿರಾಜ್ ಮುಂದಾಳತ್ವದ ಬೌಲಿಂಗ್ ಪಡೆಯ ಮೇಲಿದೆ. ದೇವದತ್ತ ಪಡಿಕ್ಕಲ್, ಪವನ್ ದೇಶಪಾಂಡೆ, ಕೃಷ್ಣಪ್ಪ ಗೌತಮ್ ತಂಡಕ್ಕೆ ರನ್‌ ಕಾಣಿಕೆ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಬೌಲಿಂಗ್‌ನಲ್ಲಿಯೂ ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್, ಪ್ರಸಿದ್ಧ ಕೃಷ್ಣ, ಗೌತಮ್ ಅವರು ಉತ್ತಮವಾಗಿ ಆಡುತ್ತಿದ್ದಾರೆ. ಹೋದ ಪಂದ್ಯದಲ್ಲಿ ಗಾಯಗೊಂಡು ಕೀಪಿಂಗ್‌ನಿಂದ ಬಿಡುವು ಪಡೆದಿದ್ದ ಕೆ.ವಿ. ಸಿದ್ಧಾರ್ಥ್ ಚೇತರಿಸಿಕೊಳ್ಳುತ್ತಿದ್ದಾರೆ. ಶರತ್ ಶ್ರೀನಿವಾಸ್ ಅವರಿಗೆ ಸ್ಥಾನ ಸಿಗಬಹುದು.

ಹೈದರಾಬಾದ್ ತಂಡದ ತನ್ಮಯ್ ಅಗರವಾಲ್ ಮತ್ತು ತಿಲಕ್ ವರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರಿಂದ ಹೆಚ್ಚಿನ ನಿರೀಕ್ಷೆಗಳು ಇವೆ. ಅನುಭವಿ ಅಂಬಟಿ ರಾಯುಡು ಇನ್ನೂ ಲಯಕ್ಕೆ ಮರಳಿಲ್ಲ. ಆದ್ದರಿಂದ ಮಧ್ಯಮಕ್ರಮಾಂಕವು ಮಂಕಾಗಿರುವುದು ನಿಜ.

ಉಭಯ ತಂಡಗಳು ಟೂರ್ನಿಯ ಮೊದಲ ದಿನವೇ(ಸೆ 24) ಮುಖಾಮುಖಿಯಾಗಬೇಕಿತ್ತು. ಆದರೆ ಮಳೆ ಬಂದಿದ್ದರಿಂದ ರದ್ದು ಮಾಡಲಾಗಿತ್ತು. ತಂಡಗಳು: ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ದೇವದತ್ತ ಪಡಿಕ್ಕಲ್, ಕೆ.ವಿ.ಸಿದ್ಧಾರ್ಥ್, ಪವನ್ ದೇಶಪಾಂಡೆ ,ಅಭಿಷೇಕ್ ರೆಡ್ಡಿ, ಕೃಷ್ಣಪ್ಪ ಗೌತಮ್ , ಜೆ. ಸುಚಿತ್, ಅಭಿಮನ್ಯು ಮಿಥುನ್ , ಪ್ರಸಿದ್ಧ ಎಂ ಕೃಷ್ಣ, ರೋನಿತ್ ಮೋರೆ , ಶರತ್ ಶ್ರೀನಿವಾಸ್ (ವಿಕೆಟ್‌ಕೀಪರ್), ಶ್ರೇಯಸ್ ಗೋಪಾಲ್.

ಹೈದರಾಬಾದ್: ಅಂಬಟಿ ರಾಯುಡು (ನಾಯಕ), ಆಶಿಶ್ ಶ್ರೀವಾಸ್ತವ, ಅಭಿರಥ್ ರೆಡ್ಡಿ, ಚಂದನ್ ಸಹಾನಿ, ಕೆ.ಎಸ್‌.ಕೆ. ಚೈತನ್ಯ, ಪಿ.ಎಸ್. ಚೈತನ್ಯರೆಡ್ಡಿ, ತನಯ್ ತ್ಯಾಗರಾಜನ್, ನಿತೀಶ್ ರೆಡ್ಡಿ, ವರುಣ್, ಸಿ. ಹಿತೇಶ್ ಯಾದವ್, ಫೈಜಲ್ ಅಳ್ವಿ, ಮೊಹುಲ್ ಭೌಮಿಕ್, ಜಿ. ಅನಿಕೇತ್‌ ರೆಡ್ಡಿ, ರವಿಕಿರಣ, ಶ್ರೇಯಸ್ ವಾಲಾ, ಆಕಾಶ್ ಭಂಡಾರಿ, ಸಿ.ವಿ. ಮಿಲಿಂದ್, ಮೆಹದಿ ಹಸನ್, ಅಕ್ಷತ್ ರೆಡ್ಡಿ, ತನ್ಮಯ್ ಅಗರವಾಲ್, ಜೆ. ಮಲ್ಲಿಕಾರ್ಜುನ, ಮೊಹಮ್ಮದ್ ಸಿರಾಜ್, ಜಾವೀದ್ ಅಲಿ.

ಪಂದ್ಯ ಆರಂಭ: ಬೆಳಿಗ್ಗೆ 9.

ಬಂಗಾಳ ಜಯದಲ್ಲಿ ಮಿಂಚಿದ ಇಶಾನ್‌

ಜೈಪುರ: ಇಶಾನ್‌ ಪೊರೆಲ್‌ ಆರು ವಿಕೆಟ್‌ ಉರುಳಿಸಿದರು. ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಬಂಗಾಳ ಕ್ರಿಕೆಟ್‌ ತಂಡ ಜಮ್ಮು–ಕಾಶ್ಮೀರ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು.

ಜೈಪುರಿಯಾ ವಿದ್ಯಾಲಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಸಿ ಗುಂಪಿನ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಜಮ್ಮು ಕಾಶ್ಮೀರ, 169 ರನ್‌ಗಳಿಗೆ ಎಲ್ಲ ವಿಕೆಟ್‌ ಒಪ್ಪಿಸಿತು. ಬಂಗಾಳ ತಂಡ 28 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಜಯಭೇರಿ ಮೊಳಗಿಸಿತು. ಇತರ ಪಂದ್ಯಗಳಲ್ಲಿ ಮಧ್ಯಪ್ರದೇಶ ಹಾಗೂ ಗುಜರಾತ್‌ ತಂಡಗಳು ಜಯ ಕಂಡವು.

ಸಂಕ್ಷಿಪ್ತ ಸ್ಕೋರು: ಜಮ್ಮು– ಕಾಶ್ಮೀರ: 48.2 ಓವರ್‌ಗಳಲ್ಲಿ 169 (ರಾಮ್‌ ದಯಾಳ್‌ 57, ಫಾಜಿಲ್‌ ರಶೀದ್‌ 43; ಇಶಾನ್‌ ಪೊರೆಲ್‌ 34ಕ್ಕೆ 6, ಅಶೋಕ್‌ ದಿಂಡಾ 27ಕ್ಕೆ 2) ಬಂಗಾಳ: 28 ಓವರ್‌ಗಳಲ್ಲಿ 2 ವಿಕೆಟ್‌ಗೆ 175 (ಶ್ರೀವತ್ಸ ಗೋಸ್ವಾಮಿ 86, ಅಭಿಮನ್ಯು ಈಶ್ವರನ್‌ 51; ರಾಮ್‌ ದಯಾಳ್‌ 40ಕ್ಕೆ 2) ಫಲಿತಾಂಶ: ಬಂಗಾಳಕ್ಕೆ 8 ವಿಕೆಟ್‌ಗಳ ಜಯ.

ಗುಜರಾತ್‌: 50 ಓವರ್‌ಗಳಲ್ಲಿ 305 (ಭಾರ್ಗವ್‌ ಮೆರಾಯ್‌ 125, ಮನ್‌ಪ್ರೀತ್‌ ಜುನೇಜಾ 50, ಅಕ್ಷರ್‌ ಪಟೇಲ್‌ 45; ಅಜಯ್‌ ಸರ್ಕಾರ್‌ 68ಕ್ಕೆ 3, ಮುನಿಶಂಕರ್‌ ಮುರಾಸಿಂಗ್‌ 43ಕ್ಕೆ 2). ತ್ರಿಪುರ:50 ಓವರ್‌ಗಳಲ್ಲಿ 8 ವಿಕೆಟ್‌ಗೆ 204 (ಮಿಲಿಂದ್‌ ಕುಮಾರ್‌ 103, ತನ್ಮಯ್‌ ಮಿಶ್ರಾ 62; ಚಿಂತನ್‌ ಗಜ 17ಕ್ಕೆ 2) ಫಲಿತಾಂಶ: ಗುಜರಾತ್‌ಗೆ 101 ರನ್‌ಗಳ ಜಯ.

ಬಿಹಾರ: 40.4 ಓವರ್‌ಗಳಲ್ಲಿ 137(ಶಶೀಮ್‌ ರಾಥೋಡ್ 25, ಅಶುತೋಷ್‌ ಅಮನ್‌ 25; ಮಿಹಿರ್‌ ಹಿರ್ವಾನಿ 29ಕ್ಕೆ 4, ಗೌರವ್‌ ಯಾದವ್‌ 41ಕ್ಕೆ 3) ಮಧ್ಯಪ್ರದೇಶ: 27.4 ಓವರ್‌ಗಳಲ್ಲಿ 3 ವಿಕೆಟ್‌ಗೆ 138 (ರಜತ್‌ ಪಾಟಿದಾರ್‌ 48, ಮುಕುಲ್‌ ರಾಘವ್‌ 46; ವಿವೇಕ್‌ ಕುಮಾರ್‌ 25ಕ್ಕೆ 1, ನಿಕ್ಕು ಸಿಂಗ್‌ 29ಕ್ಕೆ 1) ಫಲಿತಾಂಶ: ಮಧ್ಯಪ್ರದೇಶ ತಂಡಕ್ಕೆ 7 ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT