ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತವಾಯಿತು ವಿಶ್ವ ಕ್ರಿಕೆಟ್‌ನ ‘ಲಾರ್ಡ್ಸ್’

Last Updated 25 ಏಪ್ರಿಲ್ 2019, 6:17 IST
ಅಕ್ಷರ ಗಾತ್ರ

‘ಕ್ರಿಕೆಟ್‌ ಕಾಶಿ’ ಲಾರ್ಡ್ಸ್‌ ಕ್ರೀಡಾಂಗಣದಲ್ಲೊಂದು ಅಟ್ಟವಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ಕ್ಲೈವ್‌ ಲಾಯ್ಡ್‌ ಅವರು ಸತತ ಎರಡು ಬಾರಿ ಆ ಪ್ರತಿಷ್ಠಿತ ಅಟ್ಟದ ಮೇಲೆ ನಿಂತು ಪ್ರುಡೆನ್ಶಿಯಲ್ ವಿಶ್ವಕಪ್‌ಗೆ ಮುತ್ತಿಟ್ಟಿದ್ದರು. ಆ ದೃಶ್ಯ ನೋಡಿದ ಬೇರೆ ದೇಶಗಳ ಕ್ರಿಕೆಟ್ ತಂಡಗಳ ನಾಯಕರು ತಾವೂ ಒಂದು ಆ ಸ್ಥಾನದಲ್ಲಿ ನಿಲ್ಲುವ ಕನಸು ಕಂಡಿದ್ದರು. ಅದರಲ್ಲಿ ಯಶಸ್ವಿಯಾದ ಮೊದಲ ವ್ಯಕ್ತಿ ಕಪಿಲ್ ದೇವ್. 1983ರಲ್ಲಿ ಭಾರತ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಗೆದ್ದಿತು. ಆ ಸಂದರ್ಭದಲ್ಲಿಯೇ ಭಾರತದಲ್ಲಿ ಟೆಲಿವಿಷನ್ ಕೂಡ ಬಂದಿತ್ತು. ಹಲವರು ತಮ್ಮ ಮನೆಯಲ್ಲಿ ಕುಳಿತು ಕಪಿಲ್ ಬಳಗದ ಸಾಧನೆಯನ್ನು ಕಣ್ತುಂಬಿಕೊಂಡಿದ್ದು ಇತಿಹಾಸ.

ಆ ದಿನ: 25 ಜೂನ್ 1983

ನೆಚ್ಚಿನ ತಂಡ: ಎರಡು ಬಾರಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ‘ಹ್ಯಾಟ್ರಿಕ್‌’ ಸಾಧಿಸುವ ನಿರೀಕ್ಷೆ ಇತ್ತು. ಟಾಸ್ ಗೆದ್ದ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

* ಅಲ್ಪಮೊತ್ತಕ್ಕೆ ಔಟ್: ಮೊದಲ ಬಾರಿ ಫೈನಲ್ ತಲುಪಿ ಇತಿಹಾಸ ಬರೆದಿದ್ದ ಕಪಿಲ್ ಬಳಗವು ವಿಂಡೀಸ್ ದಾಳಿಯ ಮುಂದೆ ದೊಡ್ಡ ಮೊತ್ತ ಗಳಿಸಲಿಲ್ಲ. 54.4 ಓವರ್‌ಗಳಲ್ಲಿ 183 ರನ್ ಗಳಿಸಿ ಆಲೌಟ್ ಆಯಿತು. ಆರಂಭಿಕ ಬ್ಯಾಟ್ಸ್‌ಮನ್ ಕೃಷ್ಣಮಾಚಾರಿ ಶ್ರೀಕಾಂತ್ (38; 57ಎಸೆತ, 7ಬೌಂಡರಿ, 1ಸಿಕ್ಸರ್), ಮೊಹಿಂದರ್ ಅಮರನಾಥ್ (26 ರನ್) ಮತ್ತು ಸಂದೀಪ್ ಪಾಟೀಲ (27 ರನ್) ಅವರಷ್ಟೇ ಇಪ್ಪತ್ತು ರನ್‌ಗಳ ಗಡಿ ದಾಟಿದ್ದು. ‌ವಿಂಡೀಸ್‌ನ ಆ್ಯಂಡಿ ರಾಬರ್ಟ್ಸ್‌ (32ಕ್ಕೆ3) ಅವರ ಪರಿಣಾಮಕಾರಿ ದಾಳಿ ಮತ್ತು ಮಾಲ್ಕಂ ಮಾರ್ಷಲ್, ಮೈಕೆಲ್ ಹೊಲ್ಡಿಂಗ್ ಮತ್ತು ಲ್ಯಾರಿ ಗೋಮ್ಸ್‌ ತಲಾ ಎರಡು ವಿಕೆಟ್ ಗಳಿಸಿದರು.

l ಸಂಧು–ಮದನ್ ಹುಟ್ಟಿಸಿದ ಆತ್ಮವಿಶ್ವಾಸ: ವಿಂಡೀಸ್ ತಂಡವು ಐದು ರನ್‌ ಗಳಿಸಿದ್ದಾಗಲೇ ಮಧ್ಯಮವೇಗಿ ಬಲ್ವಿಂದರ್ ಸಿಂಗ್ ಸಂಧು ಅವರು ಗಾರ್ಡನ್ ಗ್ರಿನೀಜ್ ವಿಕೆಟ್ ಹಾರಿಸಿದರು. 50 ರನ್‌ ಆಗಿದ್ದಾಗ ಮದನಲಾಲ್ ಎಸೆತದಲ್ಲಿ ಡೆಸ್ಮಂಡ್ ಹೇಯ್ನ್ಸ್ (13 ರನ್) ಅವರ ವಿಕೆಟ್ ಕಬಳಿಸಿದ ಮದನ್ ಲಾಲ್ ಸಂಭ್ರಮಿಸಿದರು. ಇದು ಭಾರತದ ಬಳಗದಲ್ಲಿ ಆತ್ಮವಿಶ್ವಾಸದ ಸಂಚಲನ ಮೂಡಿಸಿತ್ತು. ಆದರೆ ಇನ್ನೊಂದು ಬದಿಯ ಕ್ರೀಸ್‌ನಲ್ಲಿದ್ದ ಸರ್‌ ವಿವಿಯನ್ ರಿಚರ್ಡ್ಸ್‌ ಅವರಿಂದ ಆತಂಕ ಇತ್ತು.

l ಮ್ಯಾಚ್ ಗೆಲ್ಲಿಸಿದ ಕ್ಯಾಚ್: ಅಂದು ಕಪಿಲ್ ದೇವ್ ಪಡೆದ ಆ ಕ್ಯಾಚ್ ಇಂದಿಗೂ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಕ್ಯಾಚ್. ಏಕೆಂದರೆ ಅದು ವಿವ್ ರಿಚರ್ಡ್ಸ್‌ (33; 28ಎ, 7ಬೌಂಡರಿ) ಅವರು ಔಟಾದ ಕ್ಷಣ. ಮದನ್‌ ಲಾಲ್ ಎಸೆತವನ್ನು ಮಿಡ್‌ವಿಕೆಟ್ ದಾಟಿಸಲು ರಿಚರ್ಡ್ಸ್‌ ಹೊಡೆದಿದ್ದರು. ಮಿಡ್‌ ಆನ್‌ನಲ್ಲಿದ್ದ ಕಪಿಲ್‌ ದೇವ್ ಚೆಂಡಿನ ಮೇಲೆ ಕಣ್ಣು ನೆಟ್ಟು ಓಡಿದರು. ಹಲವು ಯಾರ್ಡ್ಸ್‌ಗಳಷ್ಟು ದೂರ ಸಾಗಿದ ಅವರು ಚೆಂಡನ್ನು ತಮ್ಮ ಬೊಗಸೆಯಲ್ಲಿ ತುಂಬಿಕೊಂಡರು. ಅಸಾಧ್ಯವಾದದ್ದನ್ನು ಸಾಧ್ಯ ಮಾಡಿದ್ದರು. ಅದು ಪಂದ್ಯಕ್ಕೆ ಮಹತ್ವದ ತಿರುವು.

l ಬೌಲರ್‌ಗಳ ಉತ್ಕರ್ಷ: ಮದನ ಲಾಲ್ (31ಕ್ಕೆ3), ಮೊಹಿಂದರ್ ಅಮರನಾಥ್ (12ಕ್ಕೆ3) ಮಿಂಚಿದರು. ರೋಜರ್ ಬಿನ್ನಿ ಮತ್ತು ಕಪಿಲ್ ತಲಾ ಒಂದೊಂದು ವಿಕೆಟ್‌ ಗಳಿಸಿದರು. ಅಚ್ಚರಿಯೆಂಬಂತೆ ವಿಂಡೀಸ್ ತಂಡವು 52 ಓವರ್‌ಗಳಲ್ಲಿ 140 ರನ್‌ ಗಳಿಸಿ ವ್ಯವಹಾರ ಮುಗಿಸಿತು. ಇತಿಹಾಸ ನಿರ್ಮಾಣವಾಯಿತು.

l ಬಿನ್ನಿ ಮಿಂಚು: ಇಡೀ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು ಕರ್ನಾಟಕದ ಆಲ್‌ರೌಂಡರ್ ರೋಜರ್ ಬಿನ್ನಿ (18 ವಿಕೆಟ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT