ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ‘ಕನ್ನಡಿಗ’ ಮನೀಷ್ ಪಾಂಡೆ

Last Updated 27 ಜನವರಿ 2019, 19:45 IST
ಅಕ್ಷರ ಗಾತ್ರ

‘ಎಡ್ಜ್‌ ಮಾಡ್ತಾನೆ ಮಾಮ್ ಇವನು. ನೋಡ್ತಾ ಇರು..’

ಎರಡು ವರ್ಷಗಳ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯವೊಂದರಲ್ಲಿ ಕ್ರಿಕೆಟಿಗ ಮನೀಷ್ ಪಾಂಡೆ ಮತ್ತು ರಾಬಿನ್ ಉತ್ತಪ್ಪ ನಡುವೆ ನಡೆದಿದ್ದ ಈ ಸಂಭಾಷಣೆ ಸ್ಟಂಪ್‌ ಮೈಕ್‌ನಲ್ಲಿ ಸೆರೆಯಾಗಿತ್ತು. ನಂತರ
ಸಾಮಾಜಿಕ ಜಾಲತಾಣಗಳ ಮೂಲಕ ಜಗಜ್ಜಾಹೀರಾಗಿತ್ತು. ಆ ಪಂದ್ಯದ ಕಾಮೆಂಟೇಟರ್ ಪಾಮಿ ಮಬಾಂಗ್ವಾ ಕೂಡ ‘ಓ ಕನ್ನಡ’ ಎಂದು ಉದ್ಗರಿಸಿದ್ದರು.

ಆದರೆ ಹತ್ತು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಉತ್ತರಾಂಚಲ ಮೂಲದ ಮನೀಷ್ ಪಾಂಡೆ ಕರ್ನಾಟಕ ರಣಜಿ ತಂಡಕ್ಕೆ ಪದಾರ್ಪಣೆ ಮಾಡಿದ ದಿನಗಳವು. ಸಹ ಆಟಗಾರರೊಂದಿಗೆ ಹಿಂದಿಯಲ್ಲಿಯೇ ಮನೀಷ್ ಮಾತನಾಡುತ್ತಿದ್ದರು. ಮಾಧ್ಯಮ ಪ್ರತಿನಿಧಿಗಳ ಮುಂದೆ ಬರಲು ಹಿಂಜರಿಯುತ್ತಿದ್ದ ಅವರು ಅನಿವಾರ್ಯವಾಗಿ ಬಂದು ನಿಂತಾಗಲೆಲ್ಲ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಮನೆಭಾಷೆ ಕನ್ನಡವಲ್ಲದಿದ್ದರೂ ಕರ್ನಾಟಕದಲ್ಲಿಯೇ ಕ್ರಿಕೆಟ್ ಭವಿಷ್ಯ ಕಂಡುಕೊಂಡಿರುವ ಅವರು ಈಗ ಕನ್ನಡವನ್ನು ಚೆನ್ನಾಗಿಯೇ ಮಾತನಾಡುತ್ತಿದ್ದಾರೆ. ಆ ಮಾತು ಬೇರೆ. ಆದರೆ ಅವರು ಪದಾರ್ಪಣೆ ಮಾಡಿ ಕಳೆದಿರುವ ಈ ಒಂದು ದಶಕದಲ್ಲಿ ಮಾಡಿರುವ ಸಾಧನೆಗಳು ಒಂದೆರಡಲ್ಲ. ಬೇರೆ ಬೇರೆ ಭಾಷೆ, ಧರ್ಮಗಳ ಆಟಗಾರರು ಇರುವ ಕರ್ನಾಟಕ ತಂಡವು ಒಂದು ರೀತಿಯಲ್ಲಿ ‘ಮಿನಿ ಭಾರತ’ವೇ ಆಗಿದೆ.

ಮನೀಷ್ ಪಾಂಡೆ ಫೀಲ್ಡಿಂಗ್ ವೈಖರಿ
ಮನೀಷ್ ಪಾಂಡೆ ಫೀಲ್ಡಿಂಗ್ ವೈಖರಿ

ಪ್ರತಿಭಾವಂತ ಯುವ ಆಟಗಾರರು ತುಂಬಿರುವ ಈ ರಾಜ್ಯದಲ್ಲಿ ತಂಡದಲ್ಲಿ ನಿರಂತರ ಹತ್ತು ವರ್ಷಗಳವರೆಗೆ ಸ್ಥಾನ ಉಳಿಸಿಕೊಂಡಿರುವುದು ಸುಲಭವಲ್ಲ. ಆದರೆ ಮನೀಷ್ ಈ ಸವಾಲನ್ನು ಸಮರ್ಥವಾಗಿ ಎದುರಿಸಿದ್ದಾರೆ. ಈ ಋತುವಿನಲ್ಲಿ ತಂಡದ ಪೂರ್ಣಾವಧಿ ನಾಯಕನ ಪಟ್ಟವನ್ನೂ ಅಲಂಕರಿಸಿದ್ದಾರೆ. ಲೀಗ್‌ ಹಂತದಲ್ಲಿ ಎರಡು ಮತ್ತು ಕ್ವಾರ್ಟರ್‌ಫೈನಲ್‌ನಲ್ಲಿ ತಂಡ ಜಯಿಸಿ ಸೆಮಿಫೈನಲ್‌ ಪ್ರವೇಶಿಸಿದೆ. ಅವರ ಬ್ಯಾಟಿಂಗ್ ಪ್ರತಾಪವೂ ಮುಂದುವರಿದಿದೆ.

ಸೇನೆಗೆ ಸೇರಬೇಕಿದ್ದವ ಕ್ರಿಕೆಟಿಗನಾದ: ಮನೀಷ್ ಅವರ ತಂದೆ ಕೃಷ್ಣಾನಂದ ಭಾರತೀಯ ಸೇನೆಯ ಅಧಿಕಾರಿ. ಮನೀಷ್ ಜನಿಸಿದ್ದು ಉತ್ತರಾಖಂಡದ ನೈನಿತಾಲ್‌ನಲ್ಲಿ. ಆದರೆ, ಅವರ ತಂದೆಗೆ ಬೆಂಗಳೂರಿಗೆ ವರ್ಗವಾಗಿ ಬಂದಿದ್ದು ಕರ್ನಾಟಕದ ಕ್ರಿಕೆಟ್‌ಗೆ ಒಳ್ಳೆಯದಾಯಿತು. ಮಗ ಸೇನೆ ಸೇರಬೇಕೆಂಬ ದೊಡ್ಡ ಆಸೆ ಅವರಿಗೆ ಇತ್ತು. ಆದರೆ, ಮನೀಷ್ ಎಎಸ್‌ಸಿ ಸೆಂಟರ್‌ನಲ್ಲಿರುವ ಕೇಂದ್ರಿಯ ವಿದ್ಯಾಲಯದಲ್ಲಿ ಓದುವಾಗಲೇ ಕ್ರಿಕೆಟ್‌ ಬ್ಯಾಟ್‌ನೊಂದಿಗೆ ಆಪ್ತಸ್ನೇಹಿತನಾದರು. ಮಗನ ಪ್ರತಿಭೆ ಮತ್ತು ಹುಮ್ಮಸ್ಸಿಗೆ ಅಪ್ಪ ಅಡ್ಡಿಯಾಗಲಿಲ್ಲ. ಉತ್ತಮ ಕೋಚ್‌ಗಳಿಂದ ತರಬೇತಿಯ ವ್ಯವಸ್ಥೆ ಮಾಡಿದರು.

ಐಪಿಎಲ್‌ನಲ್ಲಿ ಮೊದಲ ಶತಕ: 2008ರಲ್ಲಿ ರೈಲ್ವೆಸ್ ಎದುರು ಬೆಂಗಳೂರಿನಲ್ಲಿ ನಡೆದಿದ್ದ ರಣಜಿ ಪಂದ್ಯದಲ್ಲಿ ಮನೀಷ್ ಪದಾರ್ಪಣೆ ಮಾಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ಅವರು ಅರ್ಧಶತಕ ಹೊಡೆದಿದ್ದರು. ಆದರೆ ಮನೀಷ್ ಹೆಸರು ಬೆಳಕಿಗೆ ಬಂದಿದ್ದು 2009ರ ಐಪಿಎಲ್‌ನಲ್ಲಿ. ಆಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಮನೀಷ್ ದಕ್ಷಿಣ ಆಫ್ರಿಕಾದ ಸೆಂಚುರಿಯನ್ ಪಾರ್ಕ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್‌ ಎದುರು ಶತಕ ಬಾರಿಸಿದ್ದರು. ಅ ಮೂಲಕ ಐಪಿಎಲ್‌ನಲ್ಲಿ ಶತಕ ಹೊಡೆದ ಮೊದಲ ಭಾರತೀಯ ಆಟಗಾರನಾಗಿದ್ದರು. ಇದು ಅವರನ್ನು ರಾತ್ರೋರಾತ್ರಿ ತಾರೆಯನ್ನಾಗಿ ಮಾಡಿದ್ದ ಕ್ಷಣ. ಆನಂತರದ ಐಪಿಎಲ್‌ಗಳಲ್ಲಿ ಅವರಿಂದ ಶತಕಗಳು ದಾಖಲಾಗಲಿಲ್ಲ. ಆದರೆ, ತಾವಾಡುವ ತಂಡಗಳನ್ನು ಗೆಲ್ಲಿಸುವಂತಹ ಹಲವು ಇನಿಂಗ್ಸ್‌ಗಳನ್ನು ದಾಖಲಿಸಿದರು. ಇದರಿಂದಾಗಿ ಅವರ ಮೌಲ್ಯ ಹೆಚ್ಚಿತು. ಈ ಟೂರ್ನಿಯ ಕುಬೇರರಲ್ಲಿ ಮನೀಷ್ ಕೂಡ ಒಬ್ಬರು.

ಅಂತರರಾಷ್ಟ್ರೀಯ ಏಕದಿನ ಶತಕ: ರಣಜಿ ಮತ್ತು ಲಿಸ್ಟ್ ‘ಎ’ ಪಂದ್ಯಗಳಲ್ಲಿ ಮನೀಷ್ ರನ್‌ಗಳ ಹೊಳೆ ಹರಿಸಿದರೂ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಕಣ್ಣು ಇವರ ಮೇಲೆ ಬೀಳಲು ಬಹಳ ಸಮಯ ಹಿಡಿಯಿತು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಲೈನ್‌ ಅಪ್‌ನಲ್ಲಿ ಇದ್ದ ಪೈಪೋಟಿಯೂ ಅದಕ್ಕೆ ಕಾರಣವಿರಬಹುದು. 2015ರಲ್ಲಿ ಜಿಂಬಾಬ್ವೆ ಎದುರಿನ ಏಕದಿನ ಸರಣಿಯಲ್ಲಿ ಮೊದಲ ಬಾರಿಗೆ ಆಡುವ ಅವಕಾಶ ಲಭಿಸಿತು. ಅದರಲ್ಲಿ ಅವರು ಹೊಡೆದ 71 ರನ್‌ಗಳು ಮತ್ತು ಕೇದಾರ್ ಜಾಧವ್ ಅವರೊಂದಿಗಿನ ಜೊತೆಯಾಟವನ್ನು ಕ್ರಿಕೆಟ್‌ ಪ್ರಿಯರು ಮರೆಯುವುದಿಲ್ಲ. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದ ಆ ಪಂದ್ಯದಲ್ಲಿ ಮನೀಷ್ ಮಿಂಚಿದ್ದರು.

2016ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರಿನ ಅಜೇಯ 104 ರನ್‌ಗಳು ಭಾರತಕ್ಕೆ ಐತಿಹಾಸಿಕ ಜಯ ತಂದಿತ್ತಿತ್ತು. 330 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದ್ದ ಭಾರತ ಬೀಗಿತ್ತು. ಮನೀಷ್ ಪಂದ್ಯಶ್ರೇಷ್ಠರಾಗಿದ್ದರು. ಆದರೂ ಅವರ ಸ್ಥಾನ ತಂಡದಲ್ಲಿ ಭದ್ರವಾಗಲಿಲ್ಲ. ಸರಿಯಾದ ಅವಕಾಶಗಳು ಸಿಗಲಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಮಿಂಚುವುದನ್ನು ಬಿಡಲಿಲ್ಲ.

ತೀರಾ ಇತ್ತೀಚೆಗಿನ ವಿಷಯವನ್ನೇ ನೋಡಿ. ಆಸ್ಟ್ರೇಲಿಯಾ ತಂಡದ ಎದುರಿನ ಏಕದಿನ ಸರಣಿ, ನ್ಯೂಜಿಲೆಂಡ್ ಎದುರಿನ ಸರಣಿಗಳಲ್ಲಿ ಅವರನ್ನು ಆಯ್ಕೆ ಪರಿಗಣಿಸಲಿಲ್ಲ. ಆದರೆ, ಅವರು ರಣಜಿಯಲ್ಲಿ ರನ್‌ಗಳ ಹೊಳೆ ಹರಿಸುತ್ತಿದ್ದಾರೆ.

ತಂಡವು ಸಂಕಷ್ಟದಲ್ಲಿದ್ದಾಗಲೆಲ್ಲ ಪಾರು ಮಾಡುತ್ತಿದ್ದಾರೆ. ಸೆಮಿಫೈನಲ್‌ ಪಂದ್ಯದಲ್ಲಿ ತಂಡವು 30 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್‌ಗೆ ಬಂದಿದ್ದ ಅವರ ಆಕ್ರಮಣಕಾರಿ ಶೈಲಿಯ ಆಟ ತಂಡಕ್ಕೆ ಆಸರೆಯಾಗಿತ್ತು. ಅವರ ಲಾಫ್ಟ್‌, ಕಟ್ ಮತ್ತು ಡ್ರೈವ್‌ಗಳನ್ನು ನೋಡುವುದೇ ಚೆಂದ.

ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಎಲ್ಲ ಮುಗಿದು ಹೋಯಿತು ಎನ್ನುವಾಗ ತಂಡವನ್ನು ಸೋಲಿನಿಂದ ಪಾರು ಮಾಡಿದ್ದಾರೆ. ಕರ್ನಾಟಕ ತಂಡವು ಎರಡು ಬಾರಿ ರಣಜಿ ಟ್ರೋಫಿ ಗೆಲ್ಲುವಲ್ಲಿ ಅವರ ಪಾತ್ರವೂ ಪ್ರಮುಖವಾಗಿತ್ತು.

ಅವರನ್ನು ಭಾರತ ತಂಡದಿಂದ ಹೊರಗಿಡಲು ಕಾರಣಗಳು ಇಲ್ಲ. ಬದಲೀ ಫೀಲ್ಡರ್‌ ಆಗಿ ಅಂಗಳದಲ್ಲಿದ್ದಾಗಲೂ ಕಷ್ಟಕರ ಕ್ಯಾಚ್‌ಗಳನ್ನು ಪಡೆದು ಮಿಂಚಿದವರು. ಸ್ಲಿಪ್ ಮತ್ತು ಬೌಂಡರಿಲೈನ್‌ನಲ್ಲಿ ಚುರುಕಿನ ಫೀಲ್ಡರ್‌ ಆಗಿರುವ ಮನೀಷ್‌ಗೆ ಇದುವರೆಗೂ ಟೆಸ್ಟ್ ಆಡುವ ಅವಕಾಶವೇ ದೊರೆತಿಲ್ಲ. ಆದರೆ ಅವರ ಆಟ ನಿಂತಿಲ್ಲ. ಉತ್ಸಾಹ ಕುಂದಿಲ್ಲ.

ಯಾವುದೇ ಹಂತದ ಕ್ರಿಕೆಟ್‌ ಆಡುವಾಗಲೂ ಸಹ ಆಟಗಾರರನ್ನು ‘ಚೆನ್ನಾಗಿದೆ ಮಾಮ್‌ ಆಡು. ಬಿಡಬೇಡ’ ಎಂದು ಹುರಿದುಂಬಿಸುತ್ತ ಬೌಲರ್‌ಗಳಿಗೆ ತಲೆನೋವಾಗುತ್ತಾರೆ. ಮಾಧ್ಯಮದವರಿಂದ ದೂರವೇ ಇರುತ್ತಾರೆ!

**

ಹೆಚ್ಚು ರಕ್ಷಣಾತ್ಮಕವಾಗಿ ಆಡಿ ಪಂದ್ಯಗಳನ್ನು ಕೈಚೆಲ್ಲಿದ ಉದಾಹರಣೆಗಳು ಬೇಕಾದಷ್ಟಿವೆ. ಅದಕ್ಕೇ ಆಕ್ರಮಣಕಾರಿ ಶೈಲಿಯೇ ಉತ್ತಮ. ಎದುರಾಳಿ ಬೌಲರ್‌ಗಳ ಆತ್ಮವಿಶ್ವಾಸ ಕುಗ್ಗಿಸಿದರೆ ಮುಂದಿನ ಹಾದಿ ಸುಗಮ. ಪರಿಸ್ಥಿತಿಗೆ ತಕ್ಕಂತೆ ಆಡಬೇಕು. ತಂಡದ ಗೆಲುವಿಗೆ ಪ್ರಮುಖ ಆದ್ಯತೆ ಇರಬೇಕು.
–ಮನೀಷ್ ಪಾಂಡೆ, ಕರ್ನಾಟಕ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT