ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಹೊರೆ ತಾಳದೇ ಕ್ರಿಕೆಟಿಗ ವಿ.ಬಿ. ಚಂದ್ರಶೇಖರ್ ಆತ್ಮಹತ್ಯೆ

Last Updated 16 ಆಗಸ್ಟ್ 2019, 13:08 IST
ಅಕ್ಷರ ಗಾತ್ರ

ಚೆನ್ನೈ: ಭಾರತ ಕ್ರಿಕೆಟ್ ಮಾಜಿ ಆಟಗಾರ ವಿ.ಬಿ. ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೃದಯಸ್ತಂಭನದಿಂದ ಅವರು ನಿಧನರಾಗಿಲ್ಲ ಎಂದು ಎಂದು ಚೆನ್ನೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

‘ಚಂದ್ರಶೇಖರ್ ಅವರು ಗುರುವಾರ ಸಂಜೆ ಇಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಡ ಮೊತ್ತದ ಸಾಲ ಮಾಡಿಕೊಂಡಿದ್ದ ಅವರು ಒತ್ತಡದಲ್ಲಿದ್ದರು. ಬಹುಶಃ ಅದೇ ಕಾರಣಕ್ಕಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಂದ್ರಶೇಖರ್ ಅವರು ತಮಿಳುನಾಡು ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿದ್ದ ವಿಬಿ ಕಂಚಿ ವೀರನ್ಸ್‌ ಫ್ರ್ಯಾಂಚೈಸ್‌ನ ಮಾಲೀಕರಾಗಿದ್ದರು.

‘ದೊಡ್ಡ ಪ್ರಮಾಣದ ಸಾಲ ಮಾಡಿದ್ದರು. ಅದರ ಹೊರೆಯಿಂದಾಗಿ ಅವರು ಮಾನಸಿಕವಾಗಿ ಕುಗ್ಗಿದ್ದರು. ಅವರ ಆರೋಗ್ಯವೂ ಹದಗೆಟ್ಟಿತ್ತು. ಬಹಳ ಖಿನ್ನರಾಗಿದ್ದರು’ ಎಂದು ಮೂಲಗಳು ತಿಳಿಸಿವೆ.

‘ವಿಬಿಸಿ ಸಾವಿನಿಂದಾಗಿ ತಮಿಳುನಾಡಿನ ಕ್ರಿಕೆಟ್‌ ವಲಯವು ಆಘಾತಗೊಂಡಿದೆ. ಉದ್ಯಮಿ ಎನ್. ಶ್ರೀನಿವಾಸನ್ ಅವರಿಗೆ ನಿಕಟವರ್ತಿಯಾಗಿದ್ದರು. ಅವರ ಒಡೆತನದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಮಹೇಂದ್ರಸಿಂಗ್ ಧೋನಿಯನ್ನು ಆಯ್ಕೆ ಮಾಡುವಲ್ಲಿ ವಿಬಿಸಿ ಪಾತ್ರ ದೊಡ್ಡದಿತ್ತು’ ಎಂದು ಮೂಲಗಳು ಹೇಳಿವೆ.

ಬಲಗೈ ಬ್ಯಾಟ್ಸ್‌ಮನ್ ಮತ್ತು ವಿಕೆಟ್‌ಕೀಪರ್ ಆಗಿದ್ದ ಅವರು 1986 ರಿಂದ 1998ರವರೆಗೆ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. ತಮಿಳುನಾಡು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. 81 ಪಂದ್ಯಗಳಿಂದ 4999 ರನ್‌ ಪೇರಿಸಿದ್ದರು.

ಭಾರತ ತಂಡದಲ್ಲಿ ಏಳು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನೂ ಆಡಿದ್ದರು. ನಿವೃತ್ತಿಯ ನಂತರ ದೇಶಿ ತಂಡಗಳಿಗೆ ಕೋಚ್ ಆಗಿದ್ದರು. ವೀಕ್ಷಕ ವಿವರಣೆಕಾರರಾಗಿಯೂ ಕಾರ್ಯನಿರ್ವಹಿಸಿದ್ದರು.

ವಿಬಿಸಿ ಇದೇ 21ರಂದು ತಮ್ಮ 58ನೇ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು. ಅವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣಮಕ್ಕಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT