ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಸ್‌ಕೆ ಸ್ಪಿನ್ನರ್‌ಗಳಿಗೆ ರಸೆಲ್‌ ಸವಾಲು

ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌– ಕೋಲ್ಕತ್ತ ನೈಟ್‌ ರೈಡರ್ಸ್‌ ನಡುವೆ ಹಣಾಹಣಿ
Last Updated 8 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

ಚೆನ್ನೈ: ಪರಿಣಾಮಕಾರಿ ಸ್ಪಿನ್ ದಾಳಿ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಹಣಾಹಣಿಗೆ ಕಣ ಸಜ್ಜಾಗಿದೆ. ಮಂಗಳವಾರ ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಪಿನ್‌ ದಾಳಿಯನ್ನು ಕೋಲ್ಕತ್ತ ನೈಟ್ ರೈಡರ್ಸ್‌ನ ಆ್ಯಂಡ್ರೆ ರಸೆಲ್‌ ಮತ್ತು ರಾಬಿನ್ ಉತ್ತಪ್ಪ ಅವರನ್ನು ಒಳಗೊಂಡ ಬ್ಯಾಟಿಂಗ್ ಬಳಗ ಹೇಗೆ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಎರಡೂ ತಂಡಗಳು ತಲಾ ಐದು ಪಂದ್ಯಗಳನ್ನು ಆಡಿದ್ದು ನಾಲ್ಕರಲ್ಲಿ ಗೆಲುವು ಸಾಧಿಸಿವೆ. ನೆಟ್ ರನ್‌ರೇಟ್ ಆಧಾರದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಅಗ್ರ ಸ್ಥಾನದಲ್ಲಿದೆ. ಸೂಪರ್ ಕಿಂಗ್ಸ್‌ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಮಂಗಳವಾರದ ಪಂದ್ಯದಲ್ಲಿ ಗೆದ್ದು ಸ್ಥಾನ ಉಳಿಸಿಕೊಳ್ಳಲು ನೈಟ್ ರೈಡರ್ಸ್ ಪ್ರಯತ್ನಿಸಲಿದೆ. ಅಗ್ರ ಸ್ಥಾನಕ್ಕೇರುವ ಆಸೆಯೊಂದಿಗೆ ಚೆನ್ನೈ ಕಣಕ್ಕೆ ಇಳಿಯಲಿದೆ.

ಸ್ಥಳೀಯ ಆಟಗಾರ ರವಿಚಂದ್ರನ್ ಅಶ್ವಿನ್ ನಾಯಕತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಶನಿವಾರದ ಪಂದ್ಯದಲ್ಲಿ ಸೂಪರ್ ಕಿಂಗ್ಸ್ ಸುಲಭವಾಗಿ ಮಣಿಸಿತ್ತು. ಈಗ ಚೆನ್ನೈನ ಮತ್ತೊಬ್ಬ ಆಟಗಾರ ದಿನೇಶ್ ಕಾರ್ತಿಕ್ ನಾಯಕತ್ವದ ನೈಟ್ ರೈಡರ್ಸ್ ಸವಾಲು ಎದುರಿಸಲು ಮಹೇಂದ್ರ ಸಿಂಗ್ ಧೋನಿ ಬಳಗ ಸಜ್ಜಾಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಲ್‌ರೌಂಡ್ ಆಟವಾಡಿ ಗೆದ್ದಿರುವ ನೈಟ್ ರೈಡರ್ಸ್ ಭರವಸೆಯಿಂದಲೇ ಇಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿದೆ.

ಪಿಚ್ ಮೇಲೆ ಕಣ್ಣು: ಟೂರ್ನಿಯ ಮೊದಲ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಈ ಪಿಚ್‌ನಲ್ಲಿ ಪರದಾಡಿದ್ದರು. ನಂತರ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳ ಸಮಬಲದ ಹೋರಾಟಕ್ಕೆ ಪಿಚ್ ನೆರವಾಗಿತ್ತು. ಆದರೂ ಸ್ಪನ್ನರ್‌ಗಳು ಪಿಚ್ ತಮಗೆ ನೆರವಾಗುವ ನಿರೀಕ್ಷೆಯಲ್ಲಿದ್ದಾರೆ.

ಹರಭಜನ್ ಸಿಂಗ್‌, ಇಮ್ರಾನ್ ತಾಹಿರ್ ಮತ್ತು ರವೀಂದ್ರ ಜಡೇಜ ಸೂಪರ್ ಕಿಂಗ್ಸ್‌ ಪರವಾಗಿ ಮಿಂಚಲು ಸಜ್ಜಾಗಿದ್ದರೆ, ಕುಲದೀಪ್ ಯಾದವ್‌, ಸುನಿಲ್ ನಾರಾಯಣ್ ಮತ್ತು ಪೀಯೂಷ್ ಚಾವ್ಲಾ ನೈಟ್ ರೈಡರ್ಸ್‌ ತಂಡದಲ್ಲಿ ಭರವಸೆ ಮೂಡಿಸಿದ್ದಾರೆ.

ಆ್ಯಂಡ್ರೆ ರಸೆಲ್ ಮತ್ತು ರಾಬಿನ್ ಉತ್ತಪ್ಪ ಅವರನ್ನು ನಿಯಂತ್ರಿಸಲು ಸೂಪರ್‌ ಕಿಂಗ್ಸ್‌ನ ಬೌಲರ್‌ಗಳು ಭಾರಿ ಪ್ರಯತ್ನಪಡಬೇಕಾದೀತು. ಫಾಫ್ ಡು ಪ್ಲೆಸಿ, ಶೇನ್ ವ್ಯಾಟ್ಸನ್‌, ಮಹೇಂದ್ರ ಸಿಂಗ್ ಧೋನಿ ಮುಂತಾದವನ್ನು ಒಳಗೊಂಡ ಸೂಪರ್ ಕಿಂಗ್ಸ್‌ ಬ್ಯಾಟಿಂಗ್ ಬಳಗವನ್ನು ಕಟ್ಟಿ ಹಾಕುವುದು ನೈಟ್‌ ರೈಡರ್ಸ್‌ ಬೌಲರ್‌ಗಳಿಗೂ ಸುಲಭವಾಗಲಾರದು.

ತಂಡಗಳು: ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ (ನಾಯಕ/ವಿಕೆಟ್ ಕೀಪರ್‌), ಸುರೇಶ್ ರೈನಾ, ಅಂಬಟಿ ರಾಯುಡು, ಶೇನ್ ವ್ಯಾಟ್ಸನ್‌, ಫಾಫ್ ಡು ಪ್ಲೆಸಿ, ಮುರಳಿ ವಿಜಯ್‌, ಕೇದಾರ್ ಜಾದವ್‌, ಸ್ಯಾಮ್ ಬಿಲಿಂಗ್ಸ್‌, ರವೀಂದ್ರ ಜಡೇಜ, ಧ್ರುವ ಶೋರೆ, ಚೈತನ್ಯ ಬಿಷ್ಟೋಯ್‌, ಋತುರಾಜ್‌ ಗಾಯಕವಾಡ್‌, ಡ್ವೇನ್ ಬ್ರಾವೊ, ಕರಣ್ ಶರ್ಮಾ, ಇಮ್ರಾನ್‌ ತಾಹಿರ್‌, ಹರಭಜನ್‌ ಸಿಂಗ್‌, ಮಿಷೆಲ್ ಸ್ಯಾಂಟನರ್‌, ಶಾರ್ದೂಲ್ ಠಾಕೂರ್‌, ಮೋಹಿತ್ ಶರ್ಮಾ, ಕೆ.ಎಂ.ಆಸಿಫ್‌, ದೀಪಕ್ ಚಾಹರ್‌, ಎನ್‌.ಜಗದೀಶನ್‌, ಸ್ಕಾಟ್‌ ಕುಗೆಲಿನ್‌.

ಕೋಲ್ಕತ್ತ ನೈಟ್ ರೈಡರ್ಸ್‌: ದಿನೇಶ್ ಕಾರ್ತಿಕ್‌ (ನಾಯಕ/ವಿಕೆಟ್ ಕೀಪರ್‌), ರಾಬಿನ್ ಉತ್ತಪ್ಪ, ಕ್ರಿಸ್ ಲಿನ್‌, ಶುಭಮನ್ ಗಿಲ್‌, ಆ್ಯಂಡ್ರೆ ರಸೆಲ್‌, ಕಾರ್ಲೋಸ್‌ ಬ್ರಾಥ್‌ವೇಟ್‌, ಸುನಿಲ್ ನಾರಾಯಣ್‌, ಪೀಯೂಷ್ ಚಾವ್ಲಾ, ಕುಲದೀಪ್ ಯಾದವ್, ನಿತೀಶ್ ರಾಣಾ, ನಿಕಿಲ್‌ ನಾಯಕ್‌, ಜೋ ಡೆನ್ಲಿ, ಶ್ರೀಕಾಂತ್ ಮುಂಡೆ, ಸಂದೀಪ್ ವಾರಿಯರ್‌, ಪ್ರಸಿದ್ಧ ಕೃಷ್ಣ, ಲೋಕಿ ಫರ್ಗುಸನ್‌, ಹ್ಯಾರಿ ಗುರ್ನಿ, ಕೆ.ಸಿ.ಕಾರ್ಯಪ್ಪ, ಯಾರ ಪೃಥ್ವಿರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT