ದಾವಣಗೆರೆ: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್)ನಲ್ಲಿ ಆರ್ಸಿಬಿ ತಂಡದ ಯಶಸ್ಸು, ಮೊತ್ತಮೊದಲ ಬಾರಿಗೆ ತವರಲ್ಲಿ ನಡೆದ ವಿಶ್ವಕಪ್ನಲ್ಲಿನ ಭಾರತೀಯ ವನಿತೆಯರ ಚಾರಿತ್ರಿಕ ಗೆಲುವು ಹದಿಹರೆಯದ ಹುಡುಗಿಯರನ್ನು ಕ್ರಿಕೆಟ್ನತ್ತ ಹೆಚ್ಚು ಆಕರ್ಷಿಸುತ್ತಿದೆ.

ಪುರುಷರ ಕ್ರಿಕೆಟ್ನ ಅಭಿಮಾನಿ ಪಡೆಯಲ್ಲಿ ಅಧಿಕ ಪ್ರಮಾಣದಲ್ಲಿರುವ ಮಹಿಳೆಯರು ಇದೀಗ ತಾವೇ ಕ್ರಿಕೆಟ್ ಆಡುತ್ತ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ.

ಕರ್ನಾಟಕದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್ ಅವರು ಭಾರತ ತಂಡವನ್ನು ಪ್ರತಿನಿಧಿಸಿ ಹೆಸರು ಗಳಿಸಿದ ನಂತರ ಇದೀಗ ಶ್ರೇಯಾಂಕಾ ಪಾಟೀಲ್ ಡಬ್ಲ್ಯೂಪಿಎಲ್ನಲ್ಲಿ 2ನೇ ಬಾರಿಗೆ ಮಿಂಚಿದ್ದಾರೆ. ಇದರ ಫಲವಾಗಿ ಮಧ್ಯ ಕರ್ನಾಟಕ ಭಾಗದ ಹುಡುಗಿಯರ ಪಡೆ ಕ್ರಿಕೆಟ್ ಅಂಗಳದತ್ತ ದಾಪುಗಾಲಿರಿಸಲು ಶುರು ಮಾಡಿದೆ.

ಕ್ರಿಕೆಟ್ ಆಡುವಂತೆ ಪಾಲಕರೂ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡಿ ಪ್ರೇರೇಪಿಸುತ್ತಿದ್ದಾರೆ. ಆದ್ದರಿಂದ ಕ್ರಿಕೆಟ್ ತರಬೇತಿ ನೀಡುವ ಅಕಾಡೆಮಿಗಳಲ್ಲಿ ಹೆಣ್ಣುಮಕ್ಕಳ ಕಲರವವೂ ಶುರುವಾಗಿದೆ. ಹೆಣ್ಣುಮಕ್ಕಳಿಗೆ ಕ್ರಿಕೆಟ್ ಆಡಲು ಈಗ ಪೂರಕ ವಾತಾವರಣ ಸೃಷ್ಟಿಯಾಗಿರುವುದೇ ಇದಕ್ಕೆ ಕಾರಣ.

ಸ್ಥಳೀಯವಾಗಿ ಆಯ್ಕೆ ಪ್ರಕ್ರಿಯೆ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಇದೀಗ ತುಮಕೂರು ವಲಯ (ತುಮಕೂರು, ದಾವಣಗೆರೆ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆ ವ್ಯಾಪ್ತಿ) ತಂಡದ ಆಯ್ಕೆ ಟ್ರಯಲ್ಸ್ ಅನ್ನು ದಾವಣಗೆರೆಯಲ್ಲೇ ಆಯೋಜಿಸಿದ್ದು, ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿರುವ ಹುಡುಗಿಯರು ಆಯ್ಕೆ ಬಯಸಿ ಸಹಜವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

ದೂರದ ಬೆಂಗಳೂರಿನಲ್ಲಿ ಆಯೋಜಿಸುತ್ತಿದ್ದ ರಾಜ್ಯ ತಂಡದ ಆಯ್ಕೆಗೆ ತೆರಳುತ್ತಿದ್ದ ಇಲ್ಲಿನ ಬೆರಳೆಣಿಕೆಯ ಬಾಲಕಿ ಯರಿಗೆ ಅವಕಾಶಗಳೇ ಸಿಗುತ್ತಿರಲಿಲ್ಲ. ಪ್ರಸಕ್ತ ವರ್ಷದಿಂದ ಪುರುಷರ ತಂಡದ ಮಾದರಿಯಲ್ಲೇ ವಲಯ ತಂಡ ಮತ್ತು ಅಂತರ ವಲಯ ಟೂರ್ನಿ ಆಯೋಜಿಸಲು ನಿರ್ಧರಿಸಿದ್ದಲ್ಲದೆ, ವಲಯ ತಂಡದ ಆಯ್ಕೆ ಪ್ರಕ್ರಿಯೆಯನ್ನು ಮಧ್ಯ ಕರ್ನಾಟಕದಲ್ಲಿ ಆಯೋಜಿಸಿರುವುದು ಬಾಲಕಿಯರಿಗೆ ವರದಾನವಾಗಿದೆ.

ಏಪ್ರಿಲ್ 10ರಂದು 15 ವರ್ಷದೊಳಗಿನ ತಂಡದ ಆಯ್ಕೆ ಪ್ರಕ್ರಿಯೆ ನಡೆದಿದ್ದರೆ, ಏಪ್ರಿಲ್ 13ರಂದು 19 ವರ್ಷದೊಳಗಿನ ತಂಡದ ಆಯ್ಕೆಗೆ ಟ್ರಯಲ್ಸ್ ನಡೆದಿದೆ.

ಕಳೆದ ವರ್ಷದವರೆಗೆ ಈ ಎರಡೂ ವಿಭಾಗದ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಮತ್ತು ತುಮಕೂರು ಜಿಲ್ಲೆಗಳಿಂದ ತಲಾ ಇಬ್ಬರು ಅಥವಾ ಮೂವರು (ಒಟ್ಟು 10ರಿಂದ 12 ಜನ) ಭಾಗವಹಿಸುತ್ತಿದ್ದರು. 15 ಮತ್ತು 19 ವರ್ಷದೊಳಗಿನ ವಲಯ ತಂಡದ ಆಯ್ಕೆಯಲ್ಲಿ ಈ ಬಾರಿ 35ಕ್ಕೂ ಹೆಚ್ಚು ಬಾಲಕಿಯರು ಭಾಗವಹಿಸಿರುವುದು ಮಹಿಳಾ ಕ್ರಿಕೆಟ್ ಅಭ್ಯುದಯಕ್ಕೆ ಹಿಡಿದ ಕೈಗನ್ನಡಿ ಎಂದು ಈ ತಂಡಗಳ ಆಯ್ಕೆಗೆ ಕೆಎಸ್ಸಿಎ ನಿಯೋಜಿಸಿದ್ದ ಮುಖ್ಯ ಆಯ್ಕೆಗಾರರು ‘ಪ್ರಜಾವಾಣಿ’ ಎದುರು ಹರ್ಷ ವ್ಯಕ್ತಪಡಿಸಿದರು.

ತುಮಕೂರು ವಲಯದ ಕನ್ವೀನರ್ ಹರೀಶ್ ಅವರು ಮಹಿಳಾ ಕ್ರಿಕೆಟ್ಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ. ಮಕ್ಕಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸ ಮಾಡುತ್ತಿದ್ದು, ಅವರ ಬೆಳವಣಿಗೆಗೂ ನೆರವಾಗುತ್ತಿದ್ದಾರೆ
ಹೇಮಲತಾ ಪುರಾಣಿಕ್,15 ವರ್ಷದೊಳಗಿನವರ ತಂಡದ ಆಯ್ಕೆಗಾರ್ತಿ

‘ಬದಲಾದ ಮನಃಸ್ಥಿತಿಯೇ ಬದಲಾವಣೆಗೆ ಕಾರಣ’

‘ಪೋಷಕರು ಹಾಗೂ ಕ್ರಿಕೆಟ್ ಪ್ರೇಮಿಗಳ ಮನಃಸ್ಥಿತಿ ಬದಲಾಗಿರುವುದು ಮಹಿಳಾ ಕ್ರಿಕೆಟ್ನಲ್ಲಿ ಬದಲಾವಣೆಯ ಗಾಳಿ ಬೀಸಲು ಮುಖ್ಯ ಕಾರಣ’ ಎಂದು ದಾವಣಗೆರೆಯ ಉದಯೋನ್ಮುಖ ಆಟಗಾರ್ತಿ ಕೆ.ವಿ.ದಿಶಾ ಅಭಿಪ್ರಾಯಪಡುತ್ತಾರೆ.

‘ಡಬ್ಲ್ಯೂಪಿಎಲ್ ಜನಪ್ರಿಯವಾಗುವ ಮುನ್ನ ಮಹಿಳಾ ಕ್ರಿಕೆಟ್ ಎಂದರೆ ಮೂಗು ಮುರಿಯುವವರೇ ಹೆಚ್ಚಿದ್ದರು. ಆದರೆ ಈಗ ಸ್ವತಃ ಪೋಷಕರೇ ಕ್ರಿಕೆಟ್ ಆಡುವಂತೆ ಹೆಣ್ಣು ಮಕ್ಕಳನ್ನು ಉತ್ತೇಜಿಸುತ್ತಿದ್ದಾರೆ. ಪ್ರತಿನಿತ್ಯ ಅವರನ್ನು ಅಭ್ಯಾಸಕ್ಕೆಂದು ಅಕಾಡೆಮಿಗಳಿಗೆ ಕರೆದೊಯ್ಯುತ್ತಿದ್ದಾರೆ. ಹೀಗಾಗಿ ಜಿಲ್ಲಾ ಹಾಗೂ ರಾಜ್ಯ ತಂಡಗಳಲ್ಲಿ ಸ್ಥಾನ ಪಡೆಯಲು ತೀವ್ರ ಪೈಪೋಟಿ ಸೃಷ್ಟಿಯಾಗಿದೆ’ ಎಂದು 19 ವರ್ಷದೊಳಗಿನವರ ರಾಜ್ಯ ತಂಡದಲ್ಲಿ ಆಡಿರುವ ದಿಶಾ ಹೇಳುತ್ತಾರೆ.

‘ಜಿಲ್ಲಾ ಮಟ್ಟದಲ್ಲೇ ತಂಡಗಳ ಆಯ್ಕೆ ನಡೆಯುತ್ತಿರುವುದರಿಂದ ಸಾಧನೆಯ ಕನಸು ಹೊತ್ತ ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೆಎಸ್ಸಿಎ ಮಹಿಳಾ ಕೆಪಿಎಲ್ ಆಯೋಜಿಸುತ್ತಿರುವುದೂ ವನಿತೆಯರ ಕ್ರಿಕೆಟ್ ಜನಪ್ರಿಯತೆ ಪಡೆಯಲು ಕಾರಣ’ ಎಂಬುದು ಅವರ ಅಭಿಪ್ರಾಯ.

ದಿಶಾ, ಮಹಿಳಾ ಕೆಪಿಎಲ್ನಲ್ಲಿ ಮೈಸೂರು ವಾರಿಯರ್ಸ್ ಪರ ಆಡಿದ್ದಾರೆ. ಅವರನ್ನೊಳಗೊಂಡ ತಂಡ ಹಿಂದಿನ ಆವೃತ್ತಿಯ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿತ್ತು.

ಮಹಿಳೆಯರಿಗೂ ಪುರುಷರಷ್ಟೇ ಪ್ರಾಧಾನ್ಯತೆ

‘ಸಮಾನ ಅವಕಾಶ ಹಾಗೂ ಸಮಾನ ಸೌಲಭ್ಯದ ಧ್ಯೇಯದೊಂದಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಈಗ ಕೆಲಸ ಮಾಡುತ್ತಿದೆ. ಈ ಕಾರಣಕ್ಕೆ ಹುಡುಗರಂತೆ ಹುಡುಗಿಯರಿಗೂ ಅಗತ್ಯ ಪ್ರೋತ್ಸಾಹ ಸಿಗುತ್ತಿದೆ. ಇದೇ ಮೊದಲ ಬಾರಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ತಂಡಗಳ ಆಯ್ಕೆಗೆ ಟ್ರಯಲ್ಸ್ ನಡೆಸಲಾಗುತ್ತಿದೆ’ ಎಂದು ಕೆಎಸ್ಸಿಎ 15 ವರ್ಷದೊಳಗಿನ ಬಾಲಕಿಯರ ತಂಡದ ಆಯ್ಕೆಗಾರರಾದ ಹೇಮಲತಾ ಪುರಾಣಿಕ್ ಜೀವನ್ರಾವ್ ಹೇಳಿದರು.

‘ಶಾಂತಾ ರಂಗಸ್ವಾಮಿ ಹಾಗೂ ಕಲ್ಪನಾ ಅವರ ಕನಸು ಹಾಗೂ ಇಚ್ಛಾಶಕ್ತಿಯಿಂದಾಗಿ ಈಗ ಮಹಿಳಾ ಕ್ರಿಕೆಟ್ನಲ್ಲೂ ಕ್ರಾಂತಿ ಶುರುವಾಗಿದೆ. ಇದಕ್ಕೆ ಕೆಎಸ್ಸಿಎ ಬೆನ್ನೆಲುಬಾಗಿ ನಿಂತಿದೆ. ಮೊದಲೆಲ್ಲಾ ಮಹಿಳಾ ಕ್ರಿಕೆಟ್ಗೆ ಪ್ರಾಯೋಜಕರೇ ಸಿಗುತ್ತಿರಲಿಲ್ಲ. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಪ್ರಾಯೋಜಕತ್ವ ಪಡೆಯಲು ಅನೇಕರು ಮುಂದೆ ಬರುತ್ತಿದ್ದಾರೆ. ಈ ಕಾರಣಕ್ಕೆ ಮಹಾರಾಣಿ ಕಪ್ ಸೇರಿದಂತೆ ಇನ್ನೂ ಅನೇಕ ಟೂರ್ನಿಗಳನ್ನು ಆಯೋಜಿಸಲು ಸಾಧ್ಯವಾಗಿದೆ’ ಎಂದು ತಿಳಿಸಿದರು.

‘ನಮ್ಮಲ್ಲಿ ಪ್ರತಿಭೆಗಳ ಕಣಜವೇ ಇದೆ. ಅವುಗಳನ್ನು ಹೆಕ್ಕುವ ಕೆಲಸ ಆಗಿರಲಿಲ್ಲ. ಈ ಕಾರಣಕ್ಕೆ ಕೆಎಸ್ಸಿಎ ಇಂತಹ ವೇದಿಕೆಗಳನ್ನು ಕಲ್ಪಿಸಿದೆ. ದಾವಣಗೆರೆ, ಚಿತ್ರದುರ್ಗ, ತುಮಕೂರು ಹಾಗೂ ಬಳ್ಳಾರಿಯಲ್ಲೂ ಸಾಕಷ್ಟು ಪ್ರತಿಭೆಗಳು ಇವೆ ಎಂಬುದಕ್ಕೆ ಈ ಟ್ರಯಲ್ಸ್ ಸಾಕ್ಷಿ. ಇದರಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರೂ ತಾವು ಚೆನ್ನಾಗಿ ಆಡಬಲ್ಲೆವು ಎಂಬುದನ್ನು ತೋರಿಸಿದ್ದಾರೆ’ ಎಂದರು.

‘ನಮ್ಮ ಕಾಲಕ್ಕೆ ಹೋಲಿಸಿದರೆ ಈಗ ಮಹಿಳಾ ಕ್ರಿಕೆಟ್ನ ಗತಿಯೇ ಬದಲಾಗಿದೆ. ನಾವೆಲ್ಲಾ ಶೂನ್ಯದಿಂದ ಕ್ರಿಕೆಟ್ ಬದುಕು ಶುರುಮಾಡಿದವರು. ಬೇರೆ ರಾಜ್ಯಗಳಲ್ಲಿ ಟೂರ್ನಿಗಳಿದ್ದಾಗ ನಾವೇ ಹಣ ಹೊಂದಿಸಿಕೊಂಡು ರೈಲಿನಲ್ಲಿ ಸಾಮಾನ್ಯ ಬೋಗಿಗಳಲ್ಲಿ ಕುಳಿತು ಹೋಗಿದ್ದಿದೆ. ಕಲ್ಯಾಣ ಮಂಟಪಗಳಲ್ಲಿ ತಂಗುತ್ತಿದ್ದುದನ್ನೂ ಮರೆಯುವಂತಿಲ್ಲ. ಆದರೆ ಈಗ ವಿಮಾನ ಪ್ರಯಾಣದ ವ್ಯವಸ್ಥೆ ಸೇರಿ ಅನೇಕ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ’ ಎಂದು ಹೇಳಿದರು.

ಹೊಸ ಮನ್ವಂತರಕ್ಕೆ ಮುನ್ನುಡಿ

‘ಕೆಎಸ್ಸಿಎಯ ಚುಕ್ಕಾಣಿ ಹಿಡಿದಿರುವ ‘ಟೀಮ್ ಗೇಮ್ ಚೇಂಜರ್’ ಮಹಿಳಾ ಕ್ರಿಕೆಟ್ನಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ’ ಎಂದು ಕೆಎಸ್ಸಿಎ ತುಮಕೂರು ವಲಯದ ಚೇರ್ಮನ್ ಎಲ್.ಎಂ.ಪ್ರಕಾಶ್ ಹೇಳಿದರು.

‘ಪುರುಷರು ಹಾಗೂ ಮಹಿಳೆಯರ ನಡುವೆ ತಾರತಮ್ಯ ತೋರದೆ ಎಲ್ಲರಿಗೂ ಸಮಾನ ಅವಕಾಶ ನೀಡುವ ಧ್ಯೇಯವನ್ನು ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದ ತಂಡ ಹೊಂದಿದೆ. ಹಿಂದೆ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಎಲ್ಲಾ ಜಿಲ್ಲೆಯವರೂ ಬೆಂಗಳೂರಿಗೇ ಹೋಗಬೇಕಿತ್ತು. ಅಲ್ಲಿ 1,000 ಜನ ಬಂದರೆ ಆಯ್ಕೆಯಾಗುತ್ತಿದ್ದವರು 15 ಜನ ಮಾತ್ರ. ಆದರೆ ಈಗ ಜಿಲ್ಲಾ ಹಂತದಲ್ಲೇ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಹೀಗಾಗಿ ಪಾಲ್ಗೊಳ್ಳುವ ಎಲ್ಲಾ ಆಟಗಾರ್ತಿಯರಿಗೂ ಬ್ಯಾಟಿಂಗ್, ಬೌಲಿಂಗ್, ವಿಕೆಟ್ ಕೀಪಿಂಗ್ಗೆ ಅವಕಾಶ ಲಭಿಸುತ್ತಿದೆ’ ಎಂದು ತಿಳಿಸಿದರು.

‘15 ಮತ್ತು 19 ವರ್ಷದೊಳಗಿನವರ ವಿಭಾಗದಲ್ಲಿ ತಲಾ 25 ಆಟಗಾರ್ತಿಯರನ್ನು ಆಯ್ಕೆ ಮಾಡಲಾಗುತ್ತದೆ. ಇವರಿಗಾಗಿ ದಾವಣಗೆರೆಯಲ್ಲಿ ಒಂದು ತಿಂಗಳು ವಿಶೇಷ ಶಿಬಿರ ಆಯೋಜಿಸಲಾಗುತ್ತದೆ. ಬೆಂಗಳೂರಿನಿಂದ ನುರಿತ ಕೋಚ್ಗಳು, ಟ್ರೈನರ್ಗಳು, ಫಿಸಿಯೊಗಳು ಇಲ್ಲಿಗೆ ಬಂದು ಅಂತರರಾಷ್ಟ್ರೀಯ ಅಕಾಡೆಮಿಯ ಮಾದರಿಯಲ್ಲೇ ಗುಣಮಟ್ಟದ ತರಬೇತಿ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಬೆಂಗಳೂರಿನ ಅಕಾಡೆಮಿಗಳಲ್ಲಿ ಸಿಗುತ್ತಿರುವ ತರಬೇತಿ ಹಾಗೂ ಸೌಕರ್ಯ ಗ್ರಾಮೀಣ ಭಾಗದ ಮಕ್ಕಳಿಗೂ ಸಿಗಬೇಕೆಂಬ ಮಹಾದಾಸೆಯನ್ನು ಕೆಎಸ್ಸಿಎ ಹೊಂದಿದೆ. ಈ ಕಾರಣಕ್ಕೆ ತನ್ನ ಕೋಚ್ಗಳನ್ನು ಇಲ್ಲಿಗೆ ನಿಯೋಜಿಸುತ್ತಿದೆ. ಇವರಿಗೆ ಸ್ಥಳೀಯ ಕೋಚ್ಗಳು ಸಹಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದರು.

‘ಶಿಬಿರದಲ್ಲಿ ಪಾಲ್ಗೊಂಡವರಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ 15 ಜನರನ್ನು ತುಮಕೂರು ವಲಯದ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಸಿಗುವಂತೆ ಮಾಡುವ ಆಲೋಚನೆ ಕೆಎಸ್ಸಿಎಗೆ ಇದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.