ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿಗೆ ದೇವದತ್ತ ಆಸರೆ; ಡೆಲ್ಲಿ ಕ್ಯಾಪಿಟಲ್ಸ್‌ನ ನಾರ್ಕಿಯಗೆ ಮೂರು ವಿಕೆಟ್

Last Updated 3 ನವೆಂಬರ್ 2020, 3:25 IST
ಅಕ್ಷರ ಗಾತ್ರ

ಅಬುಧಾಬಿ: ದೇವದತ್ತ ಪಡಿಕ್ಕಲ್ ಅವರ ತಾಳ್ಮೆಯ ಬ್ಯಾಟಿಂಗ್‌ ಮತ್ತು ದಕ್ಷಿಣ ಆಫ್ರಿಕಾದ ಆ್ಯನ್ರಿಕ್ ನಾರ್ಕಿಯ–ಕಗಿಸೊ ರಬಾಡ ವೇಗದ ಬೌಲಿಂಗ್ ಸೋಮವಾರ ರಾತ್ರಿ ಇಲ್ಲಿ ವಿಜೃಂಭಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸವಾಲಿನ 152 ರನ್ ಕಲೆ ಹಾಕಿತು.

ಟಾಸ್ ಗೆದ್ದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಎಡಗೈ ವೇಗಿ ಡ್ಯಾನಿಯಲ್ ಸ್ಯಾಮ್ಸ್ ಮತ್ತು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಡೆಲ್ಲಿ ಪರ ಬೌಲಿಂಗ್ ಆರಂಭಿಸಿದರು. ಇವರ ದಾಳಿಯನ್ನು ತಾಳ್ಮೆಯಿಂದ ಎದುರಿಸಿದ ಜೋಶ್ ಫಿಲಿಪ್ ಮತ್ತು ದೇವದತ್ ಪಡಿಕ್ಕಲ್ ಮೊದಲ ವಿಕೆಟ್‌ಗೆ 17 ಎಸೆತಗಳಲ್ಲಿ 25 ರನ್ ಸೇರಿಸಿದರು. ಆದರೆ ರಬಾಡ ದಾಳಿಗೆ ಇಳಿಯುತ್ತಿದ್ದಂತೆ ಪರಿಸ್ಥಿತಿ ಬದಲಾಯಿತು. ಬೆಂಗಳೂರು ತಂಡ ಫಿಲಿಪ್ ಅವರನ್ನು ಕಳೆದುಕೊಂಡಿತು. ರಬಾಡ ಅವರ ಲೆಂಗ್ತ್ ಬಾಲ್‌ನ ಗತಿ ಅರಿಯುವಲ್ಲಿ ಎಡವಿದ ಫಿಲಿಪ್ ಅವರು ಆಫ್‌ಸೈಡ್ ಮೂಲಕ ಬೌಂಡರಿ ಗಳಿಸಲು ಪ್ರಯತ್ನಿಸಿದರು. ಆದರೆ ಚೆಂಡು ಪೃಥ್ವಿ ಶಾ ಅವರ ಕೈಸೇರಿತು.

ಪಡಿಕ್ಕಲ್ ಅವರ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ಗೆ ಮುಂದಾದರು. ಇಬ್ಬರೂ ಎರಡನೇ ವಿಕೆಟ್‌ಗೆ 57 ರನ್ ಸೇರಿದರು. ಆದರೆ 13ನೇ ಓವರ್‌ನಲ್ಲಿ ಕೊಹ್ಲಿ ಅವರನ್ನು ರವಿಚಂದ್ರನ್ ಅಶ್ವಿನ್ ವಾಪಸ್ ಕಳುಹಿಸಿದರು. ನಿಧಾನಗತಿಯಲ್ಲಿ ಬಂದ ಚೆಂಡನ್ನು ಮುನ್ನುಗ್ಗಿ ಹೊಡೆಯಲು ಯತ್ನಿಸಿದ ಕೊಹ್ಲಿ ಅವರ ಲಯ ತಪ್ಪಿತು. ಮಿಡ್‌ವಿಕೆಟ್‌ನಲ್ಲಿ ಬೌಂಡರಿ ಗೆರೆ ಬಳಿ ಕಾಯುತ್ತಿದ್ದ ಸ್ಟೋಯಿನಿಸ್ ಕ್ಯಾಚ್ ಮಾಡಿದರು.

ಡಿವಿಲಿಯರ್ಸ್ ಕ್ರೀಸ್‌ಗೆ ಬಂದ ಕೂಡಲೇ ಬೀಸು ಹೊಡೆತಗಳಿಗೆ ಮುಂದಾದರು. ಇನ್ನೊಂದೆಡೆ ದೇವದತ್ತ ಅವರು ಅಮೋಘ ಬ್ಯಾಟಿಂಗ್ ಮುಂದುವರಿಸಿದರು. 41 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ ಅವರು ಅರ್ಧಶತಕ ಪೂರೈಸಿದರು. ಈ ಸಂದರ್ಭದಲ್ಲಿಆ್ಯನ್ರಿಕ್ ನಾರ್ಕಿಯ ಸತತವಾಗಿ ಪೆಟ್ಟುಕೊಟ್ಟರು. 16ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಪಡಿಕ್ಕಲ್ ಅವರನ್ನು ಬೌಲ್ಡ್ ಮಾಡಿದ ನಾರ್ಕಿಯ ಕೊನೆಯ ಎಸೆತದಲ್ಲಿ ಕ್ರಿಸ್ ಮೊರಿಸ್ ಅವರನ್ನೂ ವಾಪಸ್ ಕಳುಹಿಸಿದರು. ಡಿವಿಲಿಯರ್ಸ್ ಜೊತೆಗೂಡಿದ ಶಿವಂ ದುಬೆ ವೇಗವಾಗಿ ರನ್ ಕಲೆ ಹಾಕಲು ಮುಂದಾದರು. 18 ಎಸೆತಗಳಲ್ಲಿ ಇವರಿಬ್ಬರು 32 ರನ್ ಸೇರಿಸಿದರು. ಆದರೆ ಒಂದು ರನ್ ಅಂತರದಲ್ಲಿ ಇಬ್ಬರೂ ಔಟಾದರು. ಇಸುರು ಉಡಾನ ಕೂಡ ಬೇಗನೇ ಮರಳಿದರು.

ಸ್ಕೋರ್ ವಿವರ

ರಾಯಲ್ ಚಾಲೆಂಜರ್ಸ್ ಬೆಂಗಳೂರು 7ಕ್ಕೆ 152 (20 ಓವರ್‌ಗಳಲ್ಲಿ)

ಜೋಶ್ ಫಿಲಿಪ್ ಸಿ ಪೃಥ್ವಿ ಶಾ ಬಿ ಕಗಿಸೊ ರಬಾಡ 12

ದೇವದತ್ತ ಪಡಿಕ್ಕಲ್ ಬಿ ಆ್ಯನ್ರಿಕ್ ನಾರ್ಕಿಯ 50

ವಿರಾಟ್ ಕೊಹ್ಲಿ ಸಿ ಮಾರ್ಕಸ್ ಸ್ಟೊಯಿನಿಸ್ ಬಿ ರವಿಚಂದ್ರನ್ ಅಶ್ವಿನ್ 29

ಎಬಿ ಡಿವಿಲಿಯರ್ಸ್ ರನ್‌ ಔಟ್ (ಅಜಿಂಕ್ಯ ರಹಾನೆ/ರಿಷಭ್ ಪಂತ್) 35

ಕ್ರಿಸ್ ಮೊರಿಸ್ ಸಿ ರಿಷಭ್ ಪಂತ್ ಬಿ ಆ್ಯನ್ರಿಕ್ ನಾರ್ಕಿಯ 00

ಶಿವಂ ದುಬೆ ಸಿ ಅಜಿಂಕ್ಯ ರಹಾನೆ ಬಿ ಕಗಿಸೊ ರಬಾಡ 17

ವಾಷಿಂಗ್ಟನ್ ಸುಂದರ್ ಔಟಾಗದೆ 00

ಇಸುರು ಉಡಾನ ಸಿ ಶ್ರೇಯಸ್ ಅಯ್ಯರ್ ಬಿ ಆ್ಯನ್ರಿಕ್ ನಾರ್ಕಿಯ 04

ಶಹಬಾಜ್ ಅಹಮ್ಮದ್ ಔಟಾಗದೆ 01

ಇತರೆ (ಬೈ 1, ವೈಡ್ 3) 04

ವಿಕೆಟ್ ಪತನ

1-25 (ಜೋಶ್ ಫಿಲಿಪ್, 4.1), 2-82 (ವಿರಾಟ್ ಕೊಹ್ಲಿ, 12.3), 3-112 (ದೇವದತ್ತ ಪಡಿಕ್ಕಲ್, 15.4), 4-112 (ಕ್ರಿಸ್ ಮೊರಿಸ್, 15.6),5-145 (ಶಿವಂ ದುಬೆ, 18.6),6-146 (ಎಬಿ ಡಿವಿಲಿಯರ್ಸ್‌, 19.2),7-150 (ಇಸುರು ಉಡಾನ, 19.4).

ಬೌಲಿಂಗ್

ಡ್ಯಾನಿಯಲ್ ಸ್ಯಾಮ್ಸ್ 4–0–40–0, ರವಿಚಂದ್ರನ್ ಅಶ್ವಿನ್ 4–0–18–1, ಆ್ಯನ್ರಿಕ್ ನಾರ್ಕಿಯ 4–0–33–3, ಕಗಿಸೊ ರಬಾಡ 4–0–30–2, ಅಕ್ಷರ್ ಪಟೇಲ್ 4–0–30–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT