ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡವಾಗಿ ಪದಾರ್ಪಣೆ ಮಾಡಿದ್ದು ಸಾಧನೆಯ ಹಸಿವನ್ನು ಹೆಚ್ಚಿಸಿದೆ: ಸೂರ್ಯಕುಮಾರ್ ಯಾದವ್

Last Updated 8 ಜನವರಿ 2023, 18:14 IST
ಅಕ್ಷರ ಗಾತ್ರ

ರಾಜ್‌ಕೋಟ್: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ತಡವಾಗಿ ಪದಾರ್ಪಣೆ ಮಾಡಿದ್ದು ನನ್ನನ್ನು ಮತ್ತಷ್ಟು ಬಲಿಷ್ಠನನ್ನಾಗಿಸಿದ್ದು, ಸಾಧನೆಯ ಹಸಿವನ್ನು ಹೆಚ್ಚಿಸಿದೆ ಎಂದು ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧ ಶನಿವಾರ (ಜನವರಿ 7) ರಾತ್ರಿ ನಡೆದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಸೂರ್ಯ, ಭಾರತ ತಂಡವು ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯನ್ನು ಗೆಲ್ಲುವಲ್ಲಿ ನೆರವಾದರು.

ಮುಂಬೈನಲ್ಲಿ ಜನವರಿ 3ರಂದು ನಡೆದ ಮೊದಲ ಪಂದ್ಯವನ್ನು ಎರಡು ರನ್ ಅಂತರದಿಂದ ಗೆದ್ದಿದ್ದ ಭಾರತ, ಪುಣೆಯಲ್ಲಿ ಜನವರಿ 5ರಂದು ನಡೆದ ಎರಡನೇ ಪಂದ್ಯದಲ್ಲಿ 16 ರನ್ ಅಂತರದ ಸೋಲು ಅನುಭವಿಸಿತ್ತು. ಹೀಗಾಗಿ ಅಂತಿಮ ಪಂದ್ಯವು ನಿರ್ಣಾಯಕವಾಗಿತ್ತು.

ರಾಜ್‌ಕೋಟ್‌ನಲ್ಲಿ ನಡೆದ ಕೊನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 228 ರನ್ ಕಲೆಹಾಕಿತ್ತು. ಕೇವಲ 51 ಎಸೆತಗಳನ್ನು ಎದುರಿಸಿದ್ದ ಸೂರ್ಯ 7 ಬೌಂಡರಿ ಮತ್ತು 9 ಸಿಕ್ಸರ್ ಸಹಿತ 112 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಅವರ ಬ್ಯಾಟ್‌ನಿಂದ ಬಂದ ಮೂರನೇ ಶತಕ. ಉಳಿದೆರಡು ಶತಕಗಳನ್ನು ಕಳೆದ ವರ್ಷ ನ್ಯೂಜಿಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧ ಗಳಿಸಿದ್ದರು.

ಬೃಹತ್‌ ಗುರಿ ಬೆನ್ನತ್ತಿದ ಲಂಕಾ ತಂಡವು 137 ರನ್‌ ಗಳಿಸಿ 16.4 ಓವರ್‌ಗಳಲ್ಲೇ ಆಲೌಟಾಯಿತು. ಹೀಗಾಗಿ ಭಾರತ ತಂಡ ಪಂದ್ಯವನ್ನು 91 ರನ್‌ಗಳಿಂದ ಗೆದ್ದು, ಸರಣಿಯನ್ನು 2–1ರ ಅಂತರದಿಂದ ಜಯಿಸಿತು.

ದ್ರಾವಿಡ್‌–ಸೂರ್ಯ ಮಾತುಕತೆ
ಪಂದ್ಯದ ಬಳಿಕ ಬಿಸಿಸಿಐ ಟಿವಿ ಆಯೋಜಿಸಿದ್ದ ಮಾತುಕತೆಯಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ಸೂರ್ಯ ಜೊತೆ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದಕ್ಕೆ ದೀರ್ಘ ಸಮಯ ಕಾಯಬೇಕಾದದ್ದು ನಿಮ್ಮ ಆಟದ ಮೌಲ್ಯವನ್ನು ಹೆಚ್ಚಿಸಿತೇ ಎಂದು ದ್ರಾವಿಡ್‌ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸೂರ್ಯ, 'ಇದು (ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ತಡವಾಗಿ ಪದಾರ್ಪಣೆ ಮಾಡಿದ್ದು) ನನ್ನಲ್ಲಿನ ಹಸಿವನ್ನು ಮತ್ತಷ್ಟು ಹೆಚ್ಚಿಸಿದೆ. ಅಂದರೆ, ದೇಶಿ ಕ್ರಿಕೆಟ್‌ನಲ್ಲಿ ನನ್ನ ರಾಜ್ಯದ ತಂಡದ ಪರ ಆಡುವುದನ್ನು ಆನಂದಿಸಿದ್ದೇನೆ. ಉತ್ತಮ ಪ್ರದರ್ಶನ ತೋರಲು ಪ್ರಯತ್ನಿಸಿದ್ದೇನೆ. ಅಲ್ಲಿಯೂ ಖುಷಿಯಿಂದ ಬ್ಯಾಟಿಂಗ್‌ ನಡೆಸಿದ್ದೇನೆ' ಎಂದಿದ್ದಾರೆ.

ಮುಂದುವರಿದು, 'ಹೌದು ಕಳೆದ ಕೆಲವು ವರ್ಷಗಳ ಕಾಯುವಿಕೆಯು ಸವಾಲಿನದ್ದಾಗಿತ್ತು. ಅಂತಹ ಸಂದರ್ಭಗಳಲ್ಲಿ, ಸವಾಲು ಇರುವುದರಿಂದಲೇ ನಾನಿನ್ನೂ ಕ್ರಿಕೆಟ್ ಆಡುತ್ತಿರುವುದು. ಇದನ್ನು ಆನಂದಿಸಬೇಕು ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಆಟದ ಬಗೆಗಿನ ಒಲವು ನನ್ನನ್ನು ಮುನ್ನಡೆಸುತ್ತಿದೆ' ಎಂದು ಹೇಳಿಕೊಂಡಿದ್ದಾರೆ.

32 ವರ್ಷದ ಸೂರ್ಯಕುಮಾರ್‌ ಯಾದವ್‌ ಅಂತರರಾಷ್ಟ್ರೀಯ ಏಕದಿನ ಹಾಗೂ ಟಿ20 ಕ್ರಿಕೆಟ್‌ಗೆ 2021ರಲ್ಲಿ ಪದಾರ್ಪಣೆ ಮಾಡಿದರು. ಇದುವರೆಗೆ 16 ಏಕದಿನ ಪಂದ್ಯಗಳಲ್ಲಿ ಆಡಿರುವ ಅವರು 15 ಇನಿಂಗ್ಸ್‌ಗಳಿಂದ 384 ರನ್ ಗಳಿಸಿದ್ದಾರೆ.

ಐಸಿಸಿಯ ಟಿ20 ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಸೂರ್ಯ, 45 ಪಂದ್ಯಗಳ 43 ಇನಿಂಗ್ಸ್‌ಗಳಿಂದ 1,578 ರನ್‌ ಗಳಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ 180ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸುವ ಅವರು, 46.41ರ ಸರಾಸರಿಯಲ್ಲಿ ರನ್‌ ಕಲೆಹಾಕಿದ್ದಾರೆ.

843 ಎಸೆತ; 1,500 ರನ್
ಟಿ20 ಕ್ರಿಕೆಟ್‌ನಲ್ಲಿ ಅತಿಕಡಿಮೆ ಎಸೆತಗಳಲ್ಲಿ 1,500 ರನ್‌ ಪೂರೈಸಿದ ವಿಶೇಷ ದಾಖಲೆಗೆ ಸೂರ್ಯಕುಮಾರ್‌ ಯಾದವ್‌ ಭಾಜನರಾದರು. ಅವರು ಕೇವಲ 843 ಎಸೆತಗಳಲ್ಲಿ ಒಂದೂವರೆ ಸಾವಿರ ರನ್‌ಗಳ ಗಡಿ ದಾಟಿದ್ದಾರೆ. ಯಾವುದೇ ಬ್ಯಾಟರ್‌ ಕೂಡಾ ಇಷ್ಟು ಕಡಿಮೆ ಎಸೆತಗಳಲ್ಲಿ 1,500 ರನ್‌ಗಳ ಗಡಿ ದಾಟಿಲ್ಲ.

ಅತಿಕಡಿಮೆ ಇನಿಂಗ್ಸ್‌ಗಳಲ್ಲಿ 1,500 ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT