ಶ್ರೇಯಸ್‌–ರೋಹಿತ್ ಮುಖಾಮುಖಿ

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಡೆಲ್ಲಿ ಕ್ಯಾಪಿಟಲ್ಸ್‌–ಮುಂಬೈ ಇಂಡಿಯನ್ಸ್‌ ಹಣಾಹಣಿ; ಪಂತ್ ಮೇಲೆ ಎಲ್ಲರ ಕಣ್ಣು

ಶ್ರೇಯಸ್‌–ರೋಹಿತ್ ಮುಖಾಮುಖಿ

Published:
Updated:

ನವದೆಹಲಿ: ಹ್ಯಾಟ್ರಿಕ್ ಗೆಲುವಿನೊಂದಿಗೆ ಭರವಸೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುರುವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೆಣಸಲಿದೆ.

ಫಿರೋಜ್ ಕೋಟ್ಲಾ ಅಂಗಣದಲ್ಲಿ ನಡೆಯಲಿರುವ ಪಂದ್ಯ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್‌ ಅವರಿಗೆ ಸವಾಲಿನದ್ದಾಗಲಿದೆ. ಇಬ್ಬರೂ ಮುಂಬೈಯವರು ಆಗಿರುವುದು ವಿಶೇಷ.

ವಿಶ್ವಕಪ್‌ಗಾಗಿ ಆಯ್ಕೆ ಮಾಡಿರುವ ತಂಡದಲ್ಲಿ ಸ್ಥಾನ ಗಳಿಸಲು ವಿಫಲರಾಗಿರುವ ರಿಷಭ್ ಪಂತ್‌ ಈ ಪಂದ್ಯದಲ್ಲಿ ಯಾವ ರೀತಿ ಆಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಎರಡೂ ತಂಡಗಳು ತಲಾ ಎಂಟು ಪಂದ್ಯಗಳನ್ನು ಆಡಿದ್ದು ಐದರಲ್ಲಿ ಗೆದ್ದಿವೆ. ಉತ್ತಮ ರನ್ ರೇಟ್ ಆಧಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪಾಯಿಂಟ್ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್‌ಗಿಂತ ಮೇಲೆ ಇದೆ. ಮೊದಲ ಸುತ್ತಿನ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 37 ರನ್‌ಗಳಿಂದ ಮುಂಬೈ ಸೋತಿತ್ತು. ಅದು ತಂಡದ ಮೊದಲ ಪಂದ್ಯವೂ ಆಗಿತ್ತು. ನಂತರ ತಂಡ ಏಳು–ಬೀಳುಗಳನ್ನು ಕಂಡಿದೆ. ಆರ್‌ಸಿಬಿಯನ್ನು ಮಣಿಸಿದ ನಂತರ ಡೆಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದಿದೆ.

ಕೋಚ್ ರಿಕಿ ಪಾಂಟಿಂಗ್‌ ಮತ್ತು ಸಲಹೆಗಾರ ಸೌರವ್ ಗಂಗೂಲಿ ಅವರ ನಿರ್ದೇಶನದಲ್ಲಿ ಡೆಲ್ಲಿ ತಂಡ ಪಂದ್ಯದಿಂದ ಪಂದ್ಯಕ್ಕೆ ಸಾಮರ್ಥ್ಯ ವೃದ್ಧಿಸುತ್ತ ಸಾಗುತ್ತಿದೆ.

ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಮತ್ತು ಕ್ರಿಸ್ ಮಾರಿಸ್‌ ಜೋಡಿ ತಂಡದ ಬೌಲಿಂಗ್‌ ವಿಭಾಗದ ಬಲಿಷ್ಠ ಶಕ್ತಿಯಾಗಿ ಬೆಳೆದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಕಳೆದ ಪಂದ್ಯದಲ್ಲಿ ಇವರಿಬ್ಬರು ಏಳು ವಿಕೆಟ್‌ಗಳನ್ನು ಹಂಚಿಕೊಂಡಿದ್ದರು. ಎದುರಾಳಿಗಳನ್ನು 116 ರನ್‌ಗಳಿಗೆ ನಿಯಂತ್ರಿಸಿ ತಂಡಕ್ಕೆ ಜಯ ತಂದುಕೊಡಲು ಇವರಿಬ್ಬರಿಗೆ ಸಾಧ್ಯವಾಗಿತ್ತು. ಕಳೆದ ಎರಡು ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್‌ನ ಕೀಮೊ ಪೌಲ್‌ ಕೂಡ ಕ್ಯಾಪಿಟಲ್ಸ್‌ ಬೌಲಿಂಗ್‌ಗೆ ಬಲ ತುಂಬಿದ್ದಾರೆ.

ಶ್ರೇಯಸ್ ಅಯ್ಯರ್ ಒಳಗೊಂಡಂತೆ ಬ್ಯಾಟ್ಸ್‌ಮನ್‌ಗಳು ಕೂಡ ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಿದ್ದಾರೆ. ಕೆಲವು ಪಂದ್ಯಗಳಲ್ಲಿ ನಿರಾಸೆ ಕಂಡಿದ್ದ ಶಿಖರ್‌ ಧವನ್ ಈಗ ಲಯಕ್ಕೆ ಮರಳಿರುವುದು ತಂಡಕ್ಕೆ ಸಂತಸ ತಂದಿದೆ. 

ಮಾಲಿಂಗ, ಪಾಂಡ್ಯ ಮೇಲೆ ನಿರೀಕ್ಷೆ: ಉತ್ತಮ ಸಾಮರ್ಥ್ಯ ತೋರುತ್ತಿರುವ ಮಧ್ಯಮ ವೇಗಿ ಲಸಿತ್ ಮಾಲಿಂಗ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಮೇಲೆ ಮುಂಬೈ ತಂಡ ಮತ್ತೆ ನಿರೀಕ್ಷೆಯ ಭಾರ ಇರಿಸಿದೆ. ಪಾಂಡ್ಯ ಕಳೆದ ಪಂದ್ಯದಲ್ಲಿ ಆರ್‌ಸಿಬಿ ಎದುರು 16 ಎಸೆತಗಳಲ್ಲಿ 37 ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಲಸಿತ್ ಮಾಲಿಂಗ ನಾಲ್ಕು ವಿಕೆಟ್ ಕಬಳಿಸಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದ್ದರು.

ಪಿಚ್‌ ಮೇಲೆ ಗಮನ: ಕೋಟ್ಲಾ ಪಿಚ್‌ ಮತ್ತೊಮ್ಮೆ ಕುತೂಹಲದ ಕೇಂದ್ರವಾಗಲಿದೆ. ಇದು ಅತ್ಯಂತ ಕೆಟ್ಟ ಪಿಚ್ ಎಂದು ತಂಡ ಸೋತಿದ್ದ ಸಂದರ್ಭದಲ್ಲಿ ರಿಕಿ ಪಾಂಟಿಂಗ್ ಅವರೇ ಟೀಕಿಸಿದ್ದರು. ಹೀಗಾಗಿ ಇಲ್ಲಿ ಆತಿಥೇಯ ತಂಡ ಯಾವ ರೀತಿ ಆಡಲಿದೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಕೆಕೆಆರ್ ಎದುರು ಸೂಪರ್ ಓವರ್‌ನಲ್ಲಿ ಗೆದ್ದ ಪಂದ್ಯ ಹೊರತುಪಡಿಸಿದರೆ ಉಳಿದ ಎರಡು ಪಂದ್ಯಗಳಲ್ಲೂ ಇಲ್ಲಿ ಹೆಚ್ಚು ಮೊತ್ತ ಗಳಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !