ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಪ್ರಶಸ್ತಿಯತ್ತ ಸಿಂಧು, ಸೈನಾ ಚಿತ್ತ

ಶ್ರೀಕಾಂತ್‌ ಆಕರ್ಷಣೆ
Last Updated 15 ಅಕ್ಟೋಬರ್ 2018, 13:35 IST
ಅಕ್ಷರ ಗಾತ್ರ

ಒಡೆನ್ಸ್‌, ಡೆನ್ಮಾರ್ಕ್‌: ಭಾರತದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಅವರು ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ.

ಮಂಗಳವಾರದಿಂದ ನಡೆಯುವ ಟೂರ್ನಿಯಲ್ಲಿ ಸಿಂಧು ಮೂರನೇ ಶ್ರೇಯಾಂಕ ಪಡೆದಿದ್ದಾರೆ. ಒಲಿಂ‍ಪಿಕ್ಸ್‌ನಲ್ಲಿ ಪದಕ ಗೆದ್ದ ಹಿರಿಮೆ ಹೊಂದಿರುವ ಭಾರತದ ಆಟಗಾರ್ತಿ ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಅಮೆರಿಕದ ಬಿಯೆವೆನ್‌ ಜಾಂಗ್‌ ವಿರುದ್ಧ ಸೆಣಸಲಿದ್ದಾರೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಸೈನಾಗೆ ಆರಂಭಿಕ ಸುತ್ತಿನಲ್ಲಿ ಹಾಂಕಾಂಗ್‌ನ ಚೆವುಂಗ್‌ ನಗಾನ್‌ ಯಿ ಸವಾಲು ಎದುರಾಗಲಿದೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್‌ ಭಾರತದ ಭರವಸೆಯಾಗಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನ ಹೊಂದಿರುವ ಶ್ರೀಕಾಂತ್‌, ಮೊದಲ ಸುತ್ತಿನ ಪೈಪೋಟಿಯಲ್ಲಿ ಡೆನ್ಮಾರ್ಕ್‌ನ ಹ್ಯಾನ್ಸ್‌ ಕ್ರಿಸ್ಟಿಯನ್‌ ಸೊಲ್‌ಬರ್ಗ್‌ ವಿಟ್ಟಿಂಗಸ್‌ ಎದುರು ಆಡಲಿದ್ದಾರೆ.

ಬಿ.ಸಾಯಿ ಪ್ರಣೀತ್‌, ಚೀನಾದ ಹುವಾಂಗ್‌ ಯುಕ್ಸಿಯಾಂಗ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.

ಸಮೀರ್‌ ವರ್ಮಾಗೆ ಮೊದಲ ಸುತ್ತಿನಲ್ಲೇ ಕಠಿಣ ಪೈಪೋಟಿ ಎದುರಾಗಿದೆ. ಸಮೀರ್‌, ಚೀನಾದ ಮೂರನೇ ಶ್ರೇಯಾಂಕದ ಆಟಗಾರ ಶಿ ಯೂಕಿ ಸವಾಲಿಗೆ ಎದೆಯೊಡ್ಡಬೇಕಿದೆ. ಎಚ್‌.ಎಸ್‌.ಪ್ರಣಯ್‌, ದಕ್ಷಿಣ ಕೊರಿಯಾದ ಸನ್‌ ವಾನ್‌ ಹೊ ವಿರುದ್ಧ ಸೆಣಸಲಿದ್ದಾರೆ.

ಆ್ಯಮ್‌ಸ್ಟರ್‌ಡ್ಯಾಂನಲ್ಲಿ ಪಾಸ್‌ಪೋರ್ಟ್‌ ಕಳೆದುಕೊಂಡಿದ್ದ ಪರುಪಳ್ಳಿ ಕಶ್ಯಪ್‌ ಟೂರ್ನಿಗೆ ಅಲಭ್ಯರಾಗಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ, ಪ್ರಶಸ್ತಿಯ ಕನವರಿಕೆಯಲ್ಲಿದ್ದಾರೆ. ಭಾರತದ ಜೋಡಿ ಮೊದಲ ಸುತ್ತಿನಲ್ಲಿ ಕಿಮ್‌ ಆಸ್ಟ್ರ‍ಪ್‌ ಮತ್ತು ಆ್ಯಂಡರ್ಸ್‌ ಸಾಕ್ರಪ್‌ ರಾಸ್ಮಸನ್‌ ವಿರುದ್ಧ ಆಡಲಿದೆ.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರಿಗೆ ಆರಂಭಿಕ ಸುತ್ತಿನಲ್ಲಿ ಅಮೆರಿಕದ ಏರಿಯಲ್‌ ಲೀ ಮತ್ತು ಸಿಡ್ನಿ ಲೀ, ಸವಾಲು ಎದುರಾಗಲಿದೆ.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಅವರು ದಕ್ಷಿಣ ಕೊರಿಯಾದ ಸಿಯೊ ಸೆವುಂಗ್‌ ಜೆ ಮತ್ತು ಚೆಯ್‌ ಯುಜಂಗ್‌ ಎದುರು ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT