ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರಲ್ಲಿ ಸದಾ ಆತ್ಮವಿಶ್ವಾಸ ತುಂಬುವ ಧೋನಿ: ಬ್ರಾವೊ

Last Updated 27 ಆಗಸ್ಟ್ 2020, 11:46 IST
ಅಕ್ಷರ ಗಾತ್ರ

ಚೆನ್ನೈ: ಪಂದ್ಯದ ಯಾವುದೇ ಹಂತದಲ್ಲಿಯೂ ಒತ್ತಡವನ್ನು ತಾವೇ ನುಂಗಿಕೊಂಡು ಉಳಿದ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸುವ ಕಲೆಗಾರಿಕೆ ಮಹೇಂದ್ರಸಿಂಗ್ ಧೋನಿಗೆ ಸಿದ್ಧಿಸಿದೆ. ಅದೇ ಅವರ ಯಶಸ್ಸಿನ ಗುಟ್ಟು ಎಂದು ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಆಡುವ ವಿಂಡೀಸ್ ಆಟಗಾರ ಡ್ವೇನ್ ಬ್ರಾವೊ ಹೇಳಿದ್ದಾರೆ.

ಈಚೆಗೆ ಧೋನಿಯವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಸೆ 19 ರಿಂದ ಯುಎಇಯಲ್ಲಿ ನಡೆಯಲಿರುವ ಐಪಿಎಲ್‌ನಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಕಳೆದ ಹಲವು ವರ್ಷಗಳಿಂದ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಬ್ರಾವೊ ಆಡುತ್ತಿದ್ದಾರೆ. ಬುಧವಾರ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದ ಪಂದ್ಯದಲ್ಲಿ ವಿಕೆಟ್ ಪಡೆದ ಅವರು ಟಿ20 ಮಾದರಿಯಲ್ಲಿ 500 ವಿಕೆಟ್‌ಗಳನ್ನು ಗಳಿಸಿದ ಮೊದಲ ಬೌಲರ್ ದಾಖಲೆ ಬರೆದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಅಭಿಮಾನಿಗಳು ಮತ್ತು ಸ್ನೇಹಿತರಾಗಿ ಧೋನಿ ಇನ್ನಷ್ಟು ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡಬೇಕು ಎಂಬ ಆಸೆ ಇರುವುದು ಸಹಜ. ಆದರೆ, ಧೋನಿಯವರೆಗೆ ತಮ್ಮದೇ ಆದ ಯೋಜನೆ ಇರಬಹುದು. ಆದ್ದರಿಂದ ಅವರ ನಿರ್ಧಾರ ಸೂಕ್ತವೇ ಎನ್ನಬಹುದು. ಅಷ್ಟಕ್ಕೂ ಎಲ್ಲ ಆಟಗಾರರೂ ಒಂದಿಲ್ಲ ಒಂದು ದಿನ ವಿದಾಯ ಹೇಳಲೇಕು ಎನ್ನುವುದು ಸತ್ಯ'ಎಂದರು.

'ಮುಂದಿನ ಸವಾಲುಗಳಿಗೆ ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿದ್ದೇನೆ. ಸಿಪಿಎಲ್‌ನಲ್ಲಿ ಆಡುತ್ತಿರುವುದರಿಂದ ಆತ್ಮವಿಶ್ವಾಸ ಮರಳಿದೆ. ಇಲ್ಲಿ ಆಡುತ್ತಿರುವುದರಿಂದ ಪಂದ್ಯಗಳಿಗೆ ಫಿಟ್ ಆಗಿದ್ದೇನೆ ಎಂದು ಅರ್ಥ'ಎಂದು 36 ವರ್ಷದ ಬ್ರಾವೊ ಹೇಳಿದ್ದಾರೆ.

'ಹೊಸ ನಿಯಮಗಳು ಬಂದಿವೆ. ಅದು ಇವತ್ತಿನ ಅವಶ್ಯಕತೆ. ನಮ್ಮ ಸುರಕ್ಷತೆಗಾಗಿಯೇ ನಿಯಮಗಳು ಇರುತ್ತವೆ. ಹೊಸ ನಿಯಮಗಳಿಗೆ ಬೇಗನೆ ಹೊಂದಿಕೊಳ್ಳುವುದು ಉತ್ತಮ ಕ್ರಿಕೆಟಿಗರ ಲಕ್ಷಣ'ಎಂದಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿಯೂ ಬ್ರಾವೊ ಕಣಕ್ಕಿಳಿಯಲಿದ್ದಾರೆ. ಸಿಪಿಎಲ್‌ನಲ್ಲಿ ಅವರು ಟ್ರಿಂಬಾಗೊ ನೈಟ್ ರೈಡರ್ಸ್ ತಂಡದಲ್ಲಿ ಆಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT