ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭದಲ್ಲಿ ಧೋನಿ ಬೌಲರ್‌ಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದ್ದರು: ಇರ್ಫಾನ್

ಹಿರಿಯ ಆಟಗಾರನ ಕುರಿತು ಮಾತನಾಡಿದ ಇರ್ಫಾನ್‌ ಪಠಾಣ್‌
Last Updated 28 ಜೂನ್ 2020, 11:25 IST
ಅಕ್ಷರ ಗಾತ್ರ

ನವದೆಹಲಿ: ಮಹೇಂದ್ರ ಸಿಂಗ್‌ ಧೋನಿ ಅವರು ಭಾರತ ತಂಡದ ನಾಯಕತ್ವದ ವಹಿಸಿದ ಆರಂಭದಲ್ಲಿ (2007) ಬೌಲರ್‌ಗಳ ಮೇಲೆ ನಿಯಂತ್ರಣ ಸಾಧಿಸಲು ಬಯಸುತ್ತಿದ್ದರು. ಆದರೆ 2013ರ ವೇಳೆಗೆ ‘ಶಾಂತ ಸ್ವಭಾವದ ನಾಯಕ’ ಇಮೇಜ್‌ ಬೆಳೆಸಿಕೊಂಡಿದ್ದ ಅವರು, ಬೌಲರ್‌ಗಳ ಮೇಲೆ ನಂಬಿಕೆ ಹೊಂದಿದ್ದರು....

- ಹೀಗೆಂದು ಹೇಳಿದವರು ಹಿರಿಯ ಬೌಲರ್‌ ಇರ್ಫಾನ್‌ ಪಠಾಣ್‌. ಧೋನಿ ನಾಯಕತ್ವದಲ್ಲಿ ಭಾರತ ತಂಡ 2007ರ ಟ್ವೆಂಟಿ–20 ವಿಶ್ವಕಪ್‌ ಗೆದ್ದಾದ ಇರ್ಫಾನ್‌ ತಂಡದಲ್ಲಿದ್ದರು. 2013ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲೂ ಅವರು ತಂಡದಲ್ಲಿ ಆಡಿದ್ದರು.

ಧೋನಿ ತಮ್ಮ ನಾಯಕತ್ವದಲ್ಲಿ ಕಾಲಕಾಲಕ್ಕೆ ತಂದುಕೊಂಡ ಮಾರ್ಪಾಡುಗಳ ಬಗ್ಗೆ 35 ವರ್ಷದ ಇರ್ಫಾನ್‌ ಅವರು ‘ಸ್ಟಾರ್‌ ಸ್ಪೋರ್ಟ್ಸ್‌’ ವಾಹಿನಿಯ ಕ್ರಿಕೆಟ್‌ ಕನೆಕ್ಟೆಡ್‌ ಕಾರ್ಯಕ್ರಮದಲ್ಲಿ ನೆನಪು ಹಂಚಿಕೊಂಡಿದ್ದಾರೆ. ಇರ್ಫಾನ್‌ ಈ ವರ್ಷದ ಆರಂಭದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

‘2007ರಲ್ಲಿ ಮೊದಲ ಬಾರಿ ತಂಡವನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿ ತಮ್ಮ ಮೇಲಿದೆ ಎಂದು ಗೊತ್ತಾದಾಗ ಅವರು ರೋಮಾಂಚಿತರಾಗಿದ್ದರು’ ಎಂದರು.

2007 ಹಾಗೂ 2013ರ ಚಾಂಪಿಯನ್ಸ್‌ ಟ್ರೋಫಿ ವೇಳೆ ತಂಡದ ಸಭೆಗಳು ಕೇವಲ ಐದು ನಿಮಿಷಕ್ಕೆ ಸೀಮಿತಗೊಂಡಿದ್ದವು’ ಎಂದು ಇರ್ಫಾನ್‌ ಹೇಳಿದರು.

‘ನಾಯಕನಾಗಿದ್ದ ಆರಂಭದಲ್ಲಿ ಅವರು ಲವಲವಿಕೆಯಿಂದ ವಿಕೆಟ್‌ಕೀಪಿಂಗ್‌ ಜಾಗದಿಂದ ಬೌಲರ್‌ ಎಂಡ್‌ ಕಡೆಗೆ ಓಡುತ್ತಿದ್ದರು. ಬೌಲರ್‌ಗಳನ್ನು ನಿಯಂತ್ರಿಸಲು ಯತ್ನಿಸುತ್ತಿದ್ದರು. ಆದರೆ 2013ರ ವೇಳೆಗೆ ಬೌಲರ್‌ಗಳ ಮೇಲೆ ವಿಶ್ವಾಸ ಬೆಳೆಸಿಕೊಂಡಿದ್ದರು. ಅವರು ಶಾಂತಚಿತ್ತರಾಗಿದ್ದು, ತಮ್ಮ ಮೇಲೆ ನಿಯಂತ್ರಣ ಇಟ್ಟುಕೊಂಡಿದ್ದರು’ ಎಂದು ಇರ್ಫಾನ್‌ ಹೇಳಿದರು.

ಕಳೆದ ವರ್ಷ ಭಾರತ ತಂಡ ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತ ಬಳಿಕ ಧೋನಿ ಯಾವುದೇ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ.

2007ರಿಂದ 2016ರವರೆಗೆ ಸೀಮಿತ ಓವರ್‌ಗಳ ತಂಡದ ನಾಯಕತ್ವವನ್ನು ಧೋನಿ ವಹಿಸಿದ್ದರು. 2008ರಿಂದ 2014ರವರೆಗೆ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ ಎಲ್ಲ ಟ್ರೋಫಿಗಳನ್ನು ಗೆದ್ದುಕೊಂಡ ಏಕೈಕ ನಾಯಕ ಎಂಬ ಹಿರಿಮೆ ಅವರದ್ದು.

ಅವರ ನಾಯಕತ್ವದಲ್ಲಿ ಭಾರತ ತಂಡ, 2007ರ ಟ್ವೆಂಟಿ–20 ವಿಶ್ವಕಪ್‌, 2010 ಹಾಗೂ 2016ರ ಏಷ್ಯಾಕಪ್‌, 2011ರ ಏಕದಿನ ವಿಶ್ವಕಪ್‌ ಮತ್ತು 2013ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಚಾಂಪಿಯನ್‌ ಆಗಿತ್ತು.

‘2013ರಿಂದ ಧೋನಿ ಅವರು ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ಸ್ಪಿನ್ನರ್‌ಗಳನ್ನು ದಾಳಿಗಿಳಿಸುವ ಯೋಜನೆ ಆರಂಭಿಸಿದರು’ ಎಂದೂ ಇರ್ಫಾನ್‌ ಹೇಳಿದ್ದಾರೆ.

‘2007 ರಿಂದ 2013ರ ಮಧ್ಯದಲ್ಲಿ ಅವರು ನಿಧಾನಗತಿಯ ಮತ್ತು ಸ್ಪಿನ್‌ ಬೌಲರ್‌ಗಳ ಮೇಲೆ ವಿಶ್ವಾಸ ಹೊಂದುವ ಅನುಭವ ಪಡೆದರು. ಚಾಂಪಿಯನ್ಸ್‌ ಟ್ರೋಫಿ ಸಮಯದಲ್ಲಿ ನಿರ್ಣಾಯಕ ಗಳಿಗೆಯಲ್ಲಿ ಸ್ಪಿನ್ನರ್‌ಗಳನ್ನು ಹೇಗೆ ಬಳಸಬೇಕೆಂಬ ಬಗ್ಗೆ ಧೋನಿ ಸ್ಪಷ್ಟ ಅರಿವನ್ನು ಹೊಂದಿದ್ದರು’ ಎಂದು ಪಠಾಣ್‌ ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT