ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ತಂತ್ರಗಳಿಗೆ ಟೀಕೆಗಳ ಬಿಸಿ

ನಿಧಾನಗತಿಯ ಬ್ಯಾಟಿಂಗ್ ಮಾಡಿದ ನಾಯಕನ ವಿರುದ್ಧ ಟೀಕೆ; ಡು ಪ್ಲೆಸಿ ಆಟಕ್ಕೆ ಶ್ಲಾಘನೆ
Last Updated 23 ಸೆಪ್ಟೆಂಬರ್ 2020, 14:18 IST
ಅಕ್ಷರ ಗಾತ್ರ

ದುಬೈ: ರಾಜಸ್ಥಾನ್ ರಾಯಲ್ಸ್ ಎದುರು ಮಂಗಳವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅನುಸರಿಸಿದ ತಂತ್ರಗಳಿಗೆ ಬುಧವಾರ ಟೀಕೆಗಳು ಎದುರಾಗಿವೆ.

ಟಾಸ್ ಗೆದ್ದ ಧೋನಿ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ಆರಂಭಿಕ ಆಟಗಾರ, ನಾಯಕ ಸ್ಟೀವ್ ಸ್ಮಿತ್ ಮತ್ತು ಮೂರನೇ ಕ್ರಮಾಂಕದ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಶೈಲಿಯ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ ಏಳು ವಿಕೆಟ್‌ಗಳಿಗೆ 216 ರನ್ ಗಳಿಸಿತ್ತು.

ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 200 ರನ್ ಕಲೆ ಹಾಕಿತ್ತು. ಮೊದಲ ವಿಕೆಟ್‌ಗೆ ಮುರಳಿ ವಿಜಯ್ (21) ಮತ್ತು ಶೇನ್‌ ವಾಟ್ಸನ್ (33) 56 ರನ್ ಸೇರಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಫಾಫ್ ಡು ಪ್ಲೆಸಿ (72; 37 ಎಸೆತ, 7 ಸಿಕ್ಸರ್, 1 ಬೌಂಡರಿ) 19ನೇ ಓವರ್‌ನ ಐದನೇ ಎಸೆತದ ವರೆಗೆ ಕ್ರೀಸ್‌ನಲ್ಲಿದ್ದು ತಂಡಕ್ಕೆ ಜಯ ತಂದುಕೊಡುವ ಭರವಸೆ ಮೂಡಿಸಿದ್ದರು. ಅವರ ಏಕಾಂಗಿ ಹೋರಾಟಕ್ಕೆ ಫಲ ಸಿಗಲಿಲ್ಲ. ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಕೇದಾರ್ ಜಾಧವ್ 16 ಎಸೆತಗಳಲ್ಲಿ 22 ರನ್‌ ಗಳಿಸಿದರು. ಕೊನೆಯ ಓವರ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಮೂರು ಸಿಕ್ಸರ್ ಸಿಡಿಸಿದರು. ಆದರೆ ಅಷ್ಟರಲ್ಲಿ ಕಾಲ ಮಿಂಚಿಹೋಗಿತ್ತು; ತಂಡ ಸೋತಿತು.

200ಕ್ಕೂ ಹೆಚ್ಚು ಮೊತ್ತದ ಗುರಿ ಬೆನ್ನಟ್ಟುವಾಗ ಯುವ ಆಟಗಾರ ಸ್ಯಾಮ್ ಕರನ್ ಮತ್ತು ಐಪಿಎಲ್‌ನಲ್ಲಿ ಪದಾರ್ಪಣೆ ಪಂದ್ಯ ಆಡಿದ ಋತುರಾಜ್ ಗಾಯಕವಾಡ್ ಅವರನ್ನು ತಮಗಿಂತ ಮೊದಲು ಬ್ಯಾಟಿಂಗ್‌ಗೆ ಕಳುಹಿಸಿದ್ದು ಸರಿಯಲ್ಲ ಎಂಬ ಅಭಿಪ್ರಾಯ ಕ್ರಿಕೆಟ್ ಪಂಡಿತರದು. ಅವರ ನಿಧಾನಗತಿಯ ಬ್ಯಾಟಿಂಗ್ ಬಗ್ಗೆಯೂ ಟೀಕೆಗಳು ಕೇಳಿಬಂದಿ‌ವೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಧೋನಿ17 ಎಸೆತಗಳಲ್ಲಿ 29 ರನ್ ಗಳಿಸಿದ್ದರು. ಒಂದೆಡೆ ಪ್ಲೆಸಿ ಬೀಸು ಹೊಡೆತಗಳ ಮೂಲಕ ತಂಡವನ್ನು ಗೆಲ್ಲಿಸಲು ಪ್ರಯತ್ನಿಸುತ್ತಿದ್ದಾಗಲೂ ಧೋನಿ ಒಂಟಿ ರನ್‌ಗಳ ಮೊರೆಹೋಗಿದ್ದರು. ಮೊದಲು ಎದುರಿಸಿದ 13 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿದ್ದರು!

‘ಇದನ್ನು ನಾಯಕತ್ವ ಎಂದು ಹೇಳಲಾಗದು. 217 ರನ್‌ಗಳ ಮೊತ್ತದ ಗುರಿ ಬೆನ್ನತ್ತಿದಾಗ ಸ್ವತಃ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದದ್ದು ಸರಿಯಲ್ಲ. ಫಾಫ್ ಡು ಪ್ಲೆಸಿ ಹೋರಾಟ ನಡೆಸಿ ತಂಡದ ಗೆಲುವಿಗೆ ಶ್ರಮಿಸಿದರು. ಅವರು ನಿಜವಾದ ಯೋಧನಂತೆ ಕಂಡುಬಂದರು. ಕೊನೆಯ ಓವರ್‌ನಲ್ಲಿ ಧೋನಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ನಿಜ. ಆದರೆ ಅದರಿಂದ ಏನು ಉಪಯೋಗ? ಅಷ್ಟರಲ್ಲಿ ಎಲ್ಲವೂ ಮುಗಿದು ಹೋಗಿತ್ತಲ್ಲ...’ ಎಂದು ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದರು.

ಕ್ವಾರಂಟೈನ್ ಅನುಕೂಲ ಆಗಲಿಲ್ಲ: ಧೋನಿ

2019ರ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಹೊರಬಿದ್ದ ಭಾರತ ತಂಡದಲ್ಲಿ ಕೊನೆಯದಾಗಿ ಆಡಿದ್ದ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ರಾಜಸ್ಥಾನ ರಾಯಲ್ಸ್ ಎದುರಿನ ಸೋಲಿನ ನಂತರ ಮಾತನಾಡಿದ ಅವರು ‘ಯುಎಇಯಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಗಾದ ಕಾರಣ ಹೆಚ್ಚು ಬ್ಯಾಟಿಂಗ್ ಅಭ್ಯಾಸ ಮಾಡಲು ಅವಕಾಶ ಸಿಗಲಿಲ್ಲ. ಕ್ವಾರಂಟೈನ್ ಅನುಕೂಲಕರವಾಗಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ವಿಭಿನ್ನ ಪ್ರಯೋಗಗಳನ್ನು ಮಾಡಿದೆ. ಇದರ ಭಾಗವಾಗಿ ಸ್ಯಾಮ್ ಕರನ್ ಅವರಿಗೆ ಅವಕಾಶ ಕೊಟ್ಟೆ. ಇಂಥ ಪ್ರಯೋಗಗಳು ಮುಂದೆಯೂ ತಂಡಕ್ಕೆ ಪ್ರಯೋಜನ ಉಂಟುಮಾಡುವುದಿಲ್ಲ ಎಂದಾದರೆ ಹಿಂದಿನ ತಂತ್ರಗಳಿಗೇ ಮೊರೆಹೋಗಬೇಕಾಗುತ್ತದೆ’ ಎಂದು ಅವರು ಹೇಳಿದರು.

ಪಂದ್ಯದಲ್ಲಿ ವಾರ್ಮ್‌ ಅಪ್‌ ಬೇಡ...!

ಧೋನಿ ಅವರನ್ನು ಸಮರ್ಥಿಸಿಕೊಂಡಿರುವ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ‘ಅವರು ಕೊನೆಯ ಹಂತದಲ್ಲಿ ಪಂದ್ಯಕ್ಕೆ ತಿರುವು ನೀಡಬಲ್ಲ ಸಾಮರ್ಥ್ಯ ಇರುವ ಆಟಗಾರ’ ಎಂದು ಹೇಳಿದರು. ಆದರೆ ಈ ಹೇಳಿಕೆಗೆ ನೆಟ್ಟಿಗರಿಂದ ತೀವ್ರ ವಿರೋಧವೂ ವ್ಯಕ್ತವಾಗಿದೆ.

‘ಮುಂದಿನ ಬಾರಿ ಧೋನಿ ಪಂದ್ಯಕ್ಕೆ ಮೊದಲೇ ವಾರ್ಮ್ ಮಾಡಿಕೊಂಡು ಬರಬೇಕು. ಪಂದ್ಯದಲ್ಲಿ ಅಭ್ಯಾಸ ಮಾಡುವುದು ಸರಿಯಲ್ಲ’ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

ಕೆಲವರು ಧೋನಿ ಪರವಾಗಿಯೂ ‘ಬ್ಯಾಟಿಂಗ್‌’ ಮಾಡಿದ್ದಾರೆ. ಅವರು ಸಿಡಿಸಿದ ಮೂರು ಭರ್ಜರಿ ಸಿಕ್ಸರ್‌ಗಳನ್ನು ಕೊಂಡಾಡಿದ್ದಾರೆ. ಈ ಪೈಕಿ ಒಂದು ಸಿಕ್ಸರ್‌ನಲ್ಲಿ ಚೆಂಡು ಕ್ರೀಡಾಂಗಣದ ಹೊರಗೆ ರಸ್ತೆಗೆ ಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT