ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ಬೆಂಬಲಕ್ಕೆ ನಿಂತ ಕ್ರೀಡಾ ಕ್ಷೇತ್ರ

ವಿಕೆಟ್‌ ಕೀಪಿಂಗ್ ಕೈಗವಸುಗಳ ಮೇಲೆ ಕಠಾರಿ ಮುದ್ರೆ ಹಾಕಿಕೊಂಡ ವಿವಾದ
Last Updated 7 ಜೂನ್ 2019, 20:01 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ನಾವೆಲ್ಲರೂ ಭಾರತವನ್ನು ಪ್ರೀತಿಸುತ್ತೇವೆ. ಮಹೇಂದ್ರ ಸಿಂಗ್ ಧೋನಿ ಕೂಡ ಅದನ್ನೇ ಮಾಡಿದ್ದಾರೆ. ನಮಗಾಗಿ ಬಲಿದಾನ ಮಾಡಿದ ಯೋಧರನ್ನು ಗೌರವಿಸುವುದು ನಮ್ಮ ಕರ್ತವ್ಯ. ಧೋನಿಯದ್ದು ದೇಶಭಕ್ತಿಯ ನಡೆಯಾಗಿದೆ. ರಾಷ್ಟ್ರೀಯತೆ ಅಲ್ಲ’ ಎಂದು ಕ್ರಿಕೆಟಿಗ ಸುರೇಶ್ ರೈನಾ ಹೇಳಿದ್ದಾರೆ.

ತಮ್ಮ ವಿಕೆಟ್‌ಕೀಪಿಂಗ್ ಕೈಗವಸುಗಳ ಮೇಲೆ ಕಠಾರಿ ಮುದ್ರೆಯನ್ನು ಹಾಕಿಕೊಂಡಿರುವ ಮಹೇಂದ್ರಸಿಂಗ್ ಧೋನಿ ಕುರಿತ ಪರ ವಿರೋಧ ಚರ್ಚೆಗಳು ನಡೆದಿವೆ. ಧೋನಿ ನಾಯಕರಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಆಡುವ ರೈನಾ ಟ್ವೀಟ್ ಮಾಡಿದ್ದಾರೆ.

‘ಎಂ.ಎಸ್. ಧೋನಿಯವರು ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಅವರ ಈ ನಡೆಯು ಪ್ರೇರಣಾದಾಯಕವಾಗಿದೆ. ಐಸಿಸಿಗೆ ಧೋನಿಯ ಕೈಗಸುಗಳಿಂದ ಏನು ತೊಂದರೆಯಾಗಿದೆ ತಿಳಿಯುತ್ತಿಲ್ಲ’ ಎಂದು ಹಿರಿಯ ಕ್ರಿಕೆಟಿಗ ಆರ್. ಪಿ. ಸಿಂಗ್ ಕೇಳಿದ್ದಾರೆ. ಈ ಸಂದರ್ಭದಲ್ಲಿ ಧೋನಿಯನ್ನು ಕ್ರಿಕೆಟಿಗರಲ್ಲದೇ ಬೇರೆ ಬೇರೆ ಕ್ಷೇತ್ರಗಳ ಆಟಗಾರರು ಬೆಂಬಲಿಸಿದ್ದಾರೆ.

‘ಕೈಗವಸಿನಿಂದ ಬ್ಯಾಜ್‌ ತೆಗೆಯುವಂತೆ ಒತ್ತಾಯಿಸುತ್ತಿರುವ ಐಸಿಸಿಯು ಭಾರತದ ಸೇನೆಯ ಬಲಿದಾನಗಳಿಗೆ ಅವಮಾನ ಮಾಡುತ್ತಿದೆ. ನಾವೆಲ್ಲ ದೇಶವಾಸಿಗಳು ಧೋನಿ ಜೊತೆಗೆ ಇದ್ದೇವೆ’ ಎಂದು ಒಲಿಂಪಿಯನ್ ಕುಸ್ತಿಪಟು ಯೋಗೇಶ್ವರ್ ದತ್ ಕೂಡ ಟ್ವೀಟ್ ಮಾಡಿದ್ದಾರೆ.

‘ಸಹೋದರ ಧೋನಿಯೊಂದಿಗೆ ಇಡೀ ಭಾರತವಿದೆ. ಮಹಿ ಅಣ್ಣನನ್ನು ನಾನೂ ಬೆಂಬಲಿಸುತ್ತೇನೆ. ಜೈ ಹಿಂದ್ ಜೈ ಭಾರತ್’’ ಎಂದು ಅಂತರರಾಷ್ಟ್ರೀಯ ಅಥ್ಲೀಟ್ ಹಿಮಾ ದಾಸ್ ಹೇಳಿದ್ದಾರೆ.

ಜೂನ್ 5ರಂದು ಸೌತಾಂಪ್ಟನ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆದಿದ್ದ ಪಂದ್ಯದಲ್ಲಿ ಧೋನಿ ಅವರು ಬ್ಯಾಟ್ಸ್‌ಮನ್ ಆ್ಯಂಡಿಲೆ ಪಿಶುವಾಯೊ ಅವರನ್ನು ಸ್ಟಂಪಿಂಗ್ ಮಾಡಿದ್ದಾಗ ಕ್ಯಾಮೆರಾ ಕಣ್ಣಿಗೆ ಕೈಗವಸು ಬಿದ್ದಿತ್ತು. ನಂತರ ಟಿವಿಯಲ್ಲಿ ಅದನ್ನು ಪದೇ ಪದೇ ತೋರಿಸಲಾಗಿತ್ತು. ಆಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾಗಿವೆ.

ಕೆಲವು ಅಭಿಮಾನಿಗಳು ಅದು ‘ಕಠಾರಿ ಮುದ್ರೆ’ ಸೇನೆಯ ಬಲಿದಾನದ ಬ್ಯಾಜ್ ಎಂದು ಟ್ವೀಟ್ ಮಾಡಿದ್ದರು. ಅದರಿಂದಾಗಿ ಧೋನಿಯವರ ಬಗ್ಗೆ ಮೆಚ್ಚುಗೆಯ ಮಹಾಪೂರ ಹರಿದಿತ್ತು. ಆದರೆ ಐಸಿಸಿಯ ಪೋಷಾಕು ಮತ್ತು ಲಾಂಛನ ಬಳಕೆ (ಜಿ 1) ನಿಯಮದ ಉಲ್ಲಂಘನೆಯ ಮಾತು ಕೂಡ ಕೇಳಿಬಂದಿತ್ತು.

ಮಿಲಿಟರಿ ಮುದ್ರೆ ಅಲ್ಲ: ವಿನೋದ್ ರಾಯ್

ಲಂಡನ್: ಮಹೇಂದ್ರಸಿಂಗ್ ಧೋನಿ ಕೈಗವಸಿನ ಮೇಲೆ ಇರುವ ಮುದ್ರೆಯು ಪ್ಯಾರಾಮಿಲಿಟರಿ ಪಡೆಯ ಕಠಾರಿ ಮುದ್ರೆಯಲ್ಲ. ಆದ್ದರಿಂದ ಐಸಿಸಿ ನಿಯಮದ ಉಲ್ಲಂಘನೆಯ ಮಾತೇ ಇಲ್ಲ ಎಂದು ಬಿಸಿಸಿಐನ ಕ್ರಿಕೆಟ್ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಹೇಳಿದ್ದಾರೆ.

‘ಐಸಿಸಿಯು ಕೈಗವಸು ತೆಗೆಯುವಂತೆ ಸೂಚನೆ ನೀಡಿಲ್ಲ. ಆದರೆ, ಮನವಿ ಮಾಡಿದೆ. ನಿಯಮದ ಪ್ರಕಾರ ರಾಜಕೀಯ ಪ್ರೇರಿತ, ಜನಾಂಗೀಯ ನಿಂದನೆ ಮತ್ತು ಧಾರ್ಮಿಕ ಭಾವನೆ ಕೆರಳಿಸುವಂತಹ ಸಂದೇಶಗಳನ್ನು ಮತ್ತು ಸಂಕೇತಗಳನ್ನು ಆಟಗಾರರು ಬಳಶುವಂತಿಲ್ಲ. ಈ ಮುದ್ರೆಯು ಈ ವ್ಯಾಪ್ತಿಯಲ್ಲಿ ಇಲ್ಲ’ ಎಂದು ರಾಯ್ ಸ್ಪಷ್ಟಪಡಿಸಿದ್ದಾರೆ.

2011ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದ ಧೋನಿ ಅವರಿಗೆ ಭಾರತೀಯ ಸೇನೆಯ ಪ್ಯಾರಾಶೂಟ್ ರೆಜಿಮೆಂಟ್‌ನ ಗೌರವ ಕರ್ನಲ್ ಹುದ್ದೆ ನೀಡಲಾಗಿತ್ತು. 2015ರಲ್ಲಿ ಧೋನಿ ಪ್ಯಾರಾಟ್ರೂಪ್‌ ತರಬೇತಿಯನ್ನು ಪೂರ್ಣಗೊಳಿಸಿದ್ದರು.

ಈ ಹಿಂದೆ ಕೆಲವು ಪ್ರಕರಣಗಳಲ್ಲಿ ಕೆಲವು ಆಟಗಾರರು ಶಿಕ್ಷೆ ಅನುಭವಿಸಿದ್ದರು. 2014ರಲ್ಲಿ ಇಂಗ್ಲೆಂಡ್ ತಂಡದ ಆಲ್‌ರೌಂಡರ್‌ ಮೋಯಿನ್ ಅಲಿ ಅವರು ಟೆಸ್ಟ್ ಪಂದ್ಯದಲ್ಲಿ ‘ಗಾಜಾ ರಕ್ಷಿಸಿ’ ಮತ್ತು ‘ಪ್ಯಾಲೆಸ್ಟೇನ್ ಮುಕ್ತಗೊಳಿಸಿ’ ಎಂಬ ಸಂದೇಶಗಳಿದ್ದ ಮಣಿಕಟ್ಟಿನ ಬ್ಯಾಂಡ್‌ ಧರಿಸಿದ್ದರು. ರಾಜಕೀಯ ಪ್ರೇರಿತ ಸಂದೇಶ ನೀಡಿದ್ದಾರೆಂಬ ಕಾರಣಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.

ಹೋದ ಮಾರ್ಚ್‌ನಲ್ಲಿ ಧೋನಿಯ ತವರೂರು ರಾಂಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಆರ್ಮಿ ಕ್ಯಾಪ್ ಧರಿಸಿದ್ದರು. ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಆ ಮೂಲಕ ಗೌರವ ಸಲ್ಲಿಸಿದ್ದರು. ಆಗಲೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಗೆ ದೂರು ನೀಡಿತ್ತು. ಆದರೆ, ಆಟಗಾರರು ಕ್ಯಾಪ್ ಧರಿಸಲು ಐಸಿಸಿಯಿಂದ ಅನುಮತಿ ಪಡೆದುಕೊಂಡಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು.

***

ಒಬ್ಬ ಆಟಗಾರ ನೀತಿ ಮತ್ತು ನಿಯಮಗಳಿಗೆ ಬದ್ಧನಾಗಿರಬೇಕು. ಒಂದೊಮ್ಮೆ ಧೋನಿಯ ಕೈಗವಸುಗಳ ಬ್ಯಾಜ್‌ ನಿಯಮಬಾಹಿರವಾಗಿದ್ದರೆ ಅದನ್ನು ತೆಗೆದುಹಾಕಬೇಕು
ಬೈಚುಂಗ್ ಭುಟಿಯಾ, ಹಿರಿಯ ಫುಟ್‌ಬಾಲ್ ಆಟಗಾರ

***

ಐಸಿಸಿ ನಿಯಮದ ಪ್ರಕಾರ ಧಾರ್ಮಿಕ, ವಾಣಿಜ್ಯೋದ್ದೇಶ ಮತ್ತು ಜನಾಂಗೀಯ ತಾರತಮ್ಯದ ಲಾಂಛನಗಳನ್ನು ಬಳಸುವಂತಿಲ್ಲ. ಧೋನಿ ಧರಿಸಿರುವ ಕೈಗವಸಿನ ಮೇಲಿರುವ ಮುದ್ರೆಯು ಇದ್ಯಾವುದೂ ಅಲ್ಲ. ಅದನ್ನೇ ಧರಿಸಿ ಆಡಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದೇವೆ
ವಿನೋದ್ ರಾಯ್, ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ

***

ಧೋನಿ ಸ್ವತಃ ಯೋಧರಾಗಿದ್ದಾರೆ. ಪ್ಯಾರಾಶೂಟ್ ರೆಜಿಮೆಂಟ್‌ನ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಸೇನೆಯ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿದ್ದಾರೆ. ಅವರು ಬಲಿದಾನದ ಬ್ಯಾಜ್‌ ಅನ್ನು ಪ್ರದರ್ಶಿಸಿರುವುದರಲ್ಲಿ ತಪ್ಪೇನೂ ಇಲ್ಲ. ಇದರಲ್ಲಿ ಯಾವ ರಾಜಕೀಯವೂ ಇಲ್ಲ.

ನಿವೃತ್ತ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT