ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಡದ ಆಯ್ಕೆ ಪ್ರಶ್ನಾತೀತ: ಡಯಾನ

ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಫೈನಲ್‌ನಿಂದ ಮಿಥಾಲಿ ರಾಜ್ ಕೈಬಿಟ್ಟ ಪ್ರಕರಣ
Last Updated 26 ನವೆಂಬರ್ 2018, 19:45 IST
ಅಕ್ಷರ ಗಾತ್ರ

ನವದೆಹಲಿ: ‘ಯಾವುದೇ ಪಂದ್ಯದಲ್ಲಿ ಆಡುವ ತಂಡದ ಆಯ್ಕೆ ವಿಷಯ ಪ್ರಶ್ನಾತೀತ. ಆದ್ದರಿಂದ ಮಹಿಳೆಯರ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಫೈನಲ್‌ ಪಂದ್ಯದಿಂದ ಮಿಥಾಲಿ ರಾಜ್‌ ಅವರನ್ನು ಕೈಬಿಟ್ಟ ವಿಷಯದಲ್ಲಿ ಚರ್ಚೆ ಅನಗತ್ಯ’ ಎಂದು ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮತ್ತು ಆಡಳಿತಾಧಿಕಾರಿಗಳ ಸಮಿತಿ ಸದಸ್ಯೆ ಡಯಾನ ಎಡುಲ್ಜಿ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್‌ ಎದುರು ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ಮಿಥಾಲಿ ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಪಂದ್ಯದಲ್ಲಿ ಭಾರತ ಎಂಟು ವಿಕೆಟ್‌ಗಳಿಂದ ಸೋತು ಹೊರಬಿದ್ದಿತ್ತು. ಮಿಥಾಲಿ ಅವರನ್ನು ಹೊರಗಿಟ್ಟ ವಿಷಯ ನಂತರ ಚರ್ಚೆಗೆ ಗ್ರಾಸವಾಗಿತ್ತು.

‘ನಾಯಕಿ ಹರ್ಮ್‌ಪ್ರೀತ್ ಕೌರ್‌ ಮತ್ತು ಕೋಚ್‌ ರಮೇಶ್ ಪೊವಾರ್ ಒಳಗೊಂಡ ಆಡಳಿತ ಮಿಥಾಲಿ ಅವರನ್ನು ತಂಡದಿಂದ ಹೊರಗಿಟ್ಟದ್ದು ಚರ್ಚೆಯ ವಿಷಯವೇ ಅಲ್ಲ. ಅಂದು ಭಾರತದ ಪಾಲಿಗೆ ಕೆಟ್ಟ ದಿನವಾಗಿತ್ತು. ಆದ್ದರಿಂದ ತಂಡ ಸೋತಿತು. ಮಿಥಾಲಿ ಇಲ್ಲದೇ ತಂಡ ಗೆದ್ದಿದ್ದರೆ ಇಷ್ಟೆಲ್ಲ ಚರ್ಚೆ ನಡೆಯುತ್ತಿತ್ತೇ‘ ಎಂದು ಡಯಾನ ಪ್ರಶ್ನಿಸಿದ್ದಾರೆ.

‘ತಂಡದ ಆಯ್ಕೆಯ ಬಗ್ಗೆ ಪ್ರಶ್ನಿಸುವುದು ಸರಿಯಲ್ಲ. ಆಸ್ಟ್ರೇಲಿಯಾ ಎದುರಿನ ಪುರುಷರ ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಕೃಣಾಲ್‌ ಪಾಂಡ್ಯ ಅವರಿಗೆ ಮತ್ತೂ ಅವಕಾಶ ಕೊಡಲಾಯಿತು. ಕೊನೆಯ ಪಂದ್ಯದಲ್ಲಿ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವೆಲ್ಲ ಕ್ರಿಕೆಟ್‌ನಲ್ಲಿ ಸಾಮಾನ್ಯ. ಯಾರನ್ನು ಆಡಿಸಬೇಕು, ಯಾರು ಬೇಡ ಎಂಬುದನ್ನು ನಿರ್ಧರಿಸುವ ಹಕ್ಕು ತಂಡದ ಆಡಳಿತಕ್ಕೆ ಇದೆ’ ಎಂದು ಅವರು ವಿವರಿಸಿದರು.

ಈ ವಿಷಯಕ್ಕೆ ಸಂಬಂಧಿಸಿ ಹರ್ಮನ್‌ಪ್ರೀತ್ ಕೌರ್ ಮತ್ತು ಮಿಥಾಲಿ ರಾಜ್ ಜೊತೆ ಆಡಳಿತಾಧಿಕಾರಿಗಳ ಸಮಿತಿ ಚರ್ಚೆ ನಡೆಸಲಿದೆ ಎಂದು ಕೂಡ ಡಯಾನ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಹರ್ಮನ್‌ಪ್ರೀತ್‌ ಕೌರ್ ‘ನಾವು ಏನು ನಿರ್ಧಾರ ಕೈಗೊಂಡಿದ್ದೆವೋ ಅದೆಲ್ಲವೂ ತಂಡದ ಹಿತಕ್ಕಾಗಿ ಮಾತ್ರ’ ಎಂದಷ್ಟೇ ಹೇಳಿದ್ದಾರೆ.

ಟೂರ್ನಿಯಲ್ಲಿ ಐರ್ಲೆಂಡ್ ಮತ್ತು ಪಾಕಿಸ್ತಾನ ಎದುರಿನ ಪಂದ್ಯಗಳಲ್ಲಿ ಕ್ರಮವಾಗಿ 51 ಮತ್ತು 56 ರನ್‌ ಗಳಿಸಿದ್ದ ಮಿಥಾಲಿ ಮೊಣಕಾಲಿನ ನೋವಿನಿಂದಾಗಿ ಆಸ್ಟ್ರೇಲಿಯಾ ಎದುರಿನ ಗುಂಪು ಹಂತದ ಪಂದ್ಯದಲ್ಲಿ ಆಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT