ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುಭವ ಕಾರ್ತಿಕ್ ಕೈ ಹಿಡಿಯಿತು’

ಒತ್ತಡ ಮೆಟ್ಟಿ ನಿಲ್ಲುವ ಕಲೆ ವಿಕೆಟ್ ದಿನೇಶ್‌ಗೆ ಕರಗತ ಎಂದ ನಾಯಕ ಕೊಹ್ಲಿ
Last Updated 15 ಮೇ 2019, 20:00 IST
ಅಕ್ಷರ ಗಾತ್ರ

ಮುಂಬೈ (ರಾಯಿಟರ್ಸ್): ಒತ್ತಡ ಮೆಟ್ಟಿ ನಿಲ್ಲುವ ಸಾಮರ್ಥ್ಯ ಮತ್ತು ಅನುಭವ, ದಿನೇಶ್ ಕಾರ್ತಿಕ್ ಅವರನ್ನು ವಿಶ್ವಕಪ್‌ ಟೂರ್ನಿಗೆ ಆಯ್ಕೆ ಮಾಡಲು ಕಾರಣ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು.

ವಿಶ್ವಕಪ್‌ ಟೂರ್ನಿಗಾಗಿ ಆಯ್ಕೆ ಮಾಡಿದ ತಂಡದಲ್ಲಿ ಯುವ ಆಟಗಾರ ರಿಷಭ್ ಪಂತ್‌ ಬದಲಿಗೆ ಕಾರ್ತಿಕ್‌ ಅವರನ್ನು ಕರೆಸಿಕೊಂಡಿದ್ದಕ್ಕೆ ಟೀಕೆಗಳು ಕೇಳಿಬಂದಿದ್ದವು. ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕೀಪಿಂಗ್‌ಗೆ ಮೊದಲ ಆಯ್ಕೆಯಾಗಿದ್ದರೆ, ಎರಡನೇ ವಿಕೆಟ್ ಕೀಪರ್ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗಿತ್ತು.

ತಂಡಗಳಲ್ಲಿ ಬದಲಾವಣೆಗಳನ್ನು ಮಾಡಲು ಮೇ 23ರ ವರೆಗೆ ಅವಕಾಶವಿದೆ. ಆದರೆ ಯಾವುದೇ ಕಾರಣಕ್ಕೂ ಭಾರತ ತಂಡದಲ್ಲಿ ಇನ್ನು ಬದಲಾವಣೆ ಆಗಲಾರದು ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ.

ಇಂಗ್ಲಿಷ್ ಪತ್ರಿಕೆಯೊಂದಿಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಂಡದ ಆಯ್ಕೆ ಬಗ್ಗೆ ಮಾತನಾಡಿದ ಕೊಹ್ಲಿ ‘ದಿನೇಶ್ ಕಾರ್ತಿಕ್ ಒತ್ತಡದ ಸಂದರ್ಭದಲ್ಲಿ ತಾಳ್ಮೆಯಿಂದ ಆಡಿದ ಉದಾಹರಣೆಗಳು ಇವೆ. ಆಯ್ಕೆ ಸಮಿತಿಯು ಈ ಅಂಶಕ್ಕೆ ಒತ್ತು ನೀಡಿತ್ತು. ವಿಶ್ವಕಪ್‌ನಲ್ಲೂ ಮಹೇಂದ್ರ ಸಿಂಗ್ ಧೋನಿಗೆ ಆಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾದರೆ ಕಾರ್ತಿಕ್ ಉತ್ತಮವಾಗಿ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿಭಾಯಿಸಬಲ್ಲರು’ ಎಂದರು.

2004ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನೇಶ್ ಕಾರ್ತಿಕ್ ಈ ವರೆಗೆ 91 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಆರಂಭಿಸಿದ ಪಂತ್‌ ಈ ವರೆಗೆ ಕೇವಲ ಐದು ಪಂದ್ಯಗಳನ್ನು ಆಡಿದ್ದಾರೆ. 26 ಟೆಸ್ಟ್ ಪಂದ್ಯಗಳನ್ನೂ ಆಡಿರುವ ಕಾರ್ತಿಕ್ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಮರ್ಥರು.

ರವಿಶಾಸ್ತ್ರಿ ಮಾತನಾಡಿ, ‘ಸಾಕಷ್ಟು ಸಮರ್ಥ ಆಟಗಾರರು ಇದ್ದಾರೆ. ಅವರಲ್ಲಿ 15 ಮಂದಿಯನ್ನು ಆಯ್ಕೆ ಮಾಡುವುದು ಕಷ್ಟದ ಕಾರ್ಯ’ ಎಂದು ಹೇಳಿದರು.

ಹಾರ್ದಿಕ್‌ಗೆ ಸಾಟಿ ಯಾರೂ ಇಲ್ಲ: ಸೆಹ್ವಾಗ್

ನವದೆಹಲಿ (ಪಿಟಿಐ): ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಸಾಟಿಯಾಗುವ ಆಟಗಾರ ಇಲ್ಲ ಎಂದು ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು.

ಮಹಿಳೆಯರ ಬಗ್ಗೆ ಆಕ್ಷೇ‍ಪಾರ್ಹ ಹೇಳಿಕೆಗಳನ್ನು ನೀಡಿದ ಕಾರಣ ನಿಷೇಧಕ್ಕೆ ಒಳಗಾಗಿದ್ದ ಪಾಂಡ್ಯ ‘ಶಿಕ್ಷೆ’ ಮುಗಿಸಿ ಬಂದು ಐಪಿಎಲ್‌ ಟೂರ್ನಿಯಲ್ಲಿ ಅಮೋಘ ಆಟ ಆಡಿದ್ದರು. 15 ಪಂದ್ಯಗಳಲ್ಲಿ 402 ರನ್‌ ಕಲೆ ಹಾಕಿದ್ದ ಅವರು ಬೌಲಿಂಗ್‌ನಲ್ಲೂ ಮಿಂಚಿದ್ದರು. ತಂಡ ದಾಖಲೆಯ ನಾಲ್ಕನೇ ಪ್ರಶಸ್ತಿ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

‘ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಸಮನಾದ ಸಾಮರ್ಥ್ಯ ಹೊಂದಿರುವವರು ಬೇರೆ ಯಾರೂ ಇಲ್ಲ’ ಎಂದು ಸೆಹ್ವಾಗ್ ಹೇಳಿದರು.

ಇನ್ನೊಬ್ಬ ವೇಗಿ ಬೇಕಾಗಿತ್ತು: ಗಂಭೀರ್

ಮುಂಬೈ (ಪಿಟಿಐ): ಭಾರತ ತಂಡಕ್ಕೆ ಇನ್ನೊಬ್ಬ ಸಮರ್ಥ ವೇಗದ ಬೌಲರ್‌ ಅಗತ್ಯವಿದೆ ಎಂದು ಗೌತಮ್ ಗಂಭೀರ್ ಹೇಳಿದರು.

‘ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ಸರಿಯಾದ ಬೆಂಬಲ ಬೇಕಾಗಿದೆ. ಮಧ್ಯಮ ವೇಗದ ಬೌಲಿಂಗ್ ಮಾಡಬಲ್ಲಿ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ವಿಜಯ ಶಂಕರ್ ತಂಡದಲ್ಲಿ ಇದ್ದಾರೆ. ಆದರೆ ಅವರು ಬೌಲಿಂಗ್ ವಿಭಾಗಕ್ಕೆ ಬಲ ತುಂಬಬಲ್ಲರು ಎಂದು ಹೇಳಲು ಸಾಧ್ಯವಿಲ್ಲ’ ಎಂದು ಗಂಭೀರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT