ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್: ಪಂತ್–ಕಾರ್ತಿಕ್ ಪೈಪೋಟಿ ಕುರಿತು ಗೌತಮ್ ಗಂಭೀರ್ ಹೇಳಿದ್ದೇನು?

Last Updated 18 ಸೆಪ್ಟೆಂಬರ್ 2022, 4:35 IST
ಅಕ್ಷರ ಗಾತ್ರ

ನವದೆಹಲಿ:ಮುಂಬರುವ ಟಿ20 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ವಿಕೆಟ್‌ ಕೀಪರ್‌–ಬ್ಯಾಟರ್‌ ಆಗಿ ಅವಕಾಶ ಗಿಟ್ಟಿಸಲು ರಿಷಭ್‌ ಪಂತ್‌ ಹಾಗೂ ದಿನೇಶ್‌ ಕಾರ್ತಿಕ್‌ ಪೈಪೋಟಿ ನಡೆಸುತ್ತಿದ್ದಾರೆ. ಈ ಇಬ್ಬರಲ್ಲಿ ಯಾರಿಗೆ ಅವಕಾಶ ಸಿಗಬೇಕು ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಕಳೆದ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಫಿನಿಷರ್‌ ಪಾತ್ರ ನಿಭಾಯಿಸಿದ್ದ ದಿನೇಶ್‌, ಆಯ್ಕೆಗಾರರ ಗಮನ ಸೆಳೆದು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಪಂತ್‌, ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್‌ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದಾರೆ. ಹೀಗಾಗಿ, ಚರ್ಚೆ ಆರಂಭವಾಗಿದೆ.

ಈ ಬೆಳವಣಿಗೆ ಕುರಿತಂತೆ ಮಾಜಿ ಕ್ರಿಕೆಟಿಗ ಹಾಗೂ ದೆಹಲಿ ಸಂಸದ ಗೌತಮ್‌ ಗಂಭೀರ್ ಮಾಧ್ಯಮದವರಿಗೆ ಪ್ರತಿಕ್ರಿಸಿದ್ದಾರೆ.

ಈ ಇಬ್ಬರೂ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಬೇಕೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಗಂಭೀರ್‌, 'ನೀವು ಹಾಗೆ ಮಾಡಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದರೆ, ಆರನೇ ಬೌಲರ್‌ಗೆ ಅವಕಾಶ ನೀಡಲಾಗದು. ಐವರು ಬೌಲರ್‌ಗಳೊಂದಿಗೆ ವಿಶ್ವಕಪ್‌ನಲ್ಲಿ ಆಡಲಾಗದು. ಬ್ಯಾಕಪ್‌ ಆಟಗಾರನನ್ನು ಹೊಂದಿರಬೇಕು. ಕೆ.ಎಲ್‌. ರಾಹುಲ್‌ ಅಥವಾ ಸೂರ್ಯಕುಮಾರ್‌ ಯಾದವ್‌ ಅವರಂತಹ ಯಾರಾದರೂ ಒಬ್ಬರನ್ನು ಕೈಬಿಟ್ಟು ರಿಷಭ್‌ ಪಂತ್‌ ಅವರೊಂದಿಗೆ ಇನಿಂಗ್ಸ್‌ ಆರಂಭಿಸಬೇಕಾಗುತ್ತದೆ. ಇಲ್ಲವಾದರೆ, ಈ (ಪಂತ್‌ ಮತ್ತು ಕಾರ್ತಿಕ್‌) ಇಬ್ಬರನ್ನೂ ಮಧ್ಯಮ ಕ್ರಮಾಂಕದಲ್ಲಿ ಆಡಿಸುವುದು ಸೂಕ್ತವಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಕೆಟ್‌ ಕೀಪರ್‌–ಬ್ಯಾಟರ್‌ ಆಗಿ ತಮ್ಮ ಮೊದಲ ಆಯ್ಕೆ ರಿಷಭ್‌ ಪಂತ್‌ ಎಂದಿರುವ ಗಂಭೀರ್‌, ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುವ ಆಸಕ್ತಿಯನ್ನು ದಿನೇಶ್‌ ಕಾರ್ತಿಕ್‌ ಈವರೆಗೆ ತೋರಿಲ್ಲ ಎಂದು ವಾದಿಸಿದ್ದಾರೆ.

'ನೀವು 10–12 ಎಸೆತಗಳನ್ನು ಎದುರಿಸುವುದಕ್ಕಾಗಿ ಟಿ20 ಆಟಗಾರನನ್ನು ಆಯ್ಕೆ ಮಾಡಬೇಡಿ ಎಂದು ನಾನು ಈ ಹಿಂದೆಯೂ ಹೇಳಿದ್ದೆ. ಅವರು ಪಂದ್ಯವನ್ನು ಗೆದ್ದು ಕೊಡಬಲ್ಲರು ಎಂಬುದಕ್ಕೆ ಯಾವುದೇ ಖಾತ್ರಿ ಇರುವುದಿಲ್ಲ. ದುರದೃಷ್ಟ ಎಂಬಂತೆ, ದಿನೇಶ್‌ ಕಾರ್ತಿಕ್‌ ಅಗ್ರ 5 ಕ್ರಮಾಂಕಗಳಲ್ಲಿ ಬ್ಯಾಟಿಂಗ್‌ ಮಾಡುವ ಆಸಕ್ತಿಯನ್ನೇ ತೋರಿಲ್ಲ. ನಿಮ್ಮ ವಿಕೆಟ್‌ ಕೀಪರ್‌ ಅಗ್ರ ಐದು ಕ್ರಮಾಂಕಗಳಲ್ಲಿ ಬ್ಯಾಟಿಂಗ್‌ ಮಾಡಲು ಸಮರ್ಥವಾಗಿರಬೇಕು. ರಿಷಭ್‌ ಪಂತ್ ಯಾವುದೇ ಕ್ರಮಾಂಕದಲ್ಲಿ ಆಡುವಷ್ಟು ಸಾಮರ್ಥ್ಯ ಹೊಂದಿದ್ದಾರೆ' ಎಂದು ಸಮರ್ಥಿಸಿಕೊಂಡಿದ್ದಾರೆ.

'ನನ್ನ ಆಯ್ಕೆಯ ಬ್ಯಾಟಿಂಗ್ ಕ್ರಮಾಂಕದಲ್ಲಿ ರಿಷಭ್‌ ಪಂತ್‌ ಅವರಿರುತ್ತಾರೆ. ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್‌ ಇರಬೇಕು ಎಂಬ ಕಲ್ಪನೆಯನ್ನು ನಾನು ನಂಬುವುದಿಲ್ಲ. ಅದರಲ್ಲೂ ಭಾರತದಂತಹ ತಂಡಕ್ಕೆ ಅದು ಮಾನದಂಡವಲ್ಲ. ಪಂದ್ಯ ಗೆದ್ದುಕೊಡಬಲ್ಲ ಸಾಮರ್ಥ್ಯ ಇದೆಯೇ ಎಂಬುದು ಮಾನದಂಡವಾಗಬೇಕು. ಅದು ರಿಷಭ್‌ ಪಂತ್‌ಗೆ ಇದೆ. ಹಾಗಾಗಿ, ಪಂತ್‌ ಅಗ್ರ ಐದರೊಳಗೆ ಬ್ಯಾಟಿಂಗ್‌ ಆರಂಭಿಸಬೇಕು. ಹಾರ್ದಿಕ್‌ ಪಾಂಡ್ಯ ಹಾಗೂ ಅಕ್ಷರ್‌ ಪಟೇಲ್‌ 6 ಮತ್ತು 7ನೇ ಕ್ರಮಾಂಕದಲ್ಲಿ ಆಡಲಿ. ಅಶ್ವಿನ್‌ ತಂಡದಲ್ಲಿ ಇರಬೇಕು ಎನಿಸಿದರೆ ಮೂವರು ವೇಗಿಗಳಿಗೂ ಮುನ್ನ 8ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಲಿ' ಎಂದು ವಿವರಿಸಿದ್ದಾರೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷ್‌ದೀಪ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು:ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯಿ, ದೀಪಕ್ ಚಾಹರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT