ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asia Cup: ಫಾರೂಕಿ ದಾಳಿಗೆ ಶ್ರೀಲಂಕಾ ಸುಸ್ತು- 105 ರನ್‌ಗೆ ಆಲೌಟ್

ಏಷ್ಯಾಕಪ್ ಟಿ20 ಕ್ರಿಕೆಟ್: ಅಫ್ಗನ್ ಬೌಲರ್‌ಗಳ ಶಿಸ್ತಿನ ದಾಳಿ
Last Updated 27 ಆಗಸ್ಟ್ 2022, 16:47 IST
ಅಕ್ಷರ ಗಾತ್ರ

ದುಬೈ: ಅಫ್ಗಾನಿಸ್ತಾನದ ಎಡಗೈ ವೇಗಿ ಫಜಲ್ ಹಕ್ ಫಾರೂಕಿ ಅಮೋಘ ಬೌಲಿಂಗ್‌ ಮುಂದೆ ಅನುಭವಿ ಶ್ರೀಲಂಕಾ ತಂಡವು ಅಲ್ಪಮೊತ್ತಕ್ಕೆ ಕುಸಿಯಿತು.

ಶನಿವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾದ ಏಷ್ಯಾ ಕಪ್ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ಅಫ್ಗನ್ ತಂಡದ ಶಿಸ್ತಿನ ದಾಳಿಯ ಮುಂದೆ ಶ್ರೀಲಂಕಾ 19.4 ಓವರ್‌ಗಳಲ್ಲಿ 105 ರನ್‌ ಗಳಿಸಿ ಆಲೌಟ್ ಆಯಿತು.

ಟಾಸ್ ಗೆದ್ದ ಅಫ್ಗಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಓವರ್‌ನಲ್ಲಿ ಫಾರೂಕಿ ಎರಡು ವಿಕೆಟ್‌ ಕಿತ್ತು ತಮ್ಮ ನಾಯಕ ನಿರ್ಧಾರ ಸಮರ್ಥಿಸಿಕೊಂಡರು. ಐದನೇ ಎಸೆತದಲ್ಲಿ ಕುಶಾಲ ಮೆಂಡಿಸ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರೆ, ಆರನೇ ಎಸೆತದಲ್ಲಿ ಅಸಲಂಕಾ ಔಟಾದರು.

ನಂತರದ ಓವರ್‌ನಲ್ಲಿ ನವೀನ್ ಉಲ್ ಹಕ್ ಕೂಡ ಲಂಕೆಗೆ ಪೆಟ್ಟುಕೊಟ್ಟರು. ಪಥುಮ್ ನಿಸಾಂಕಾ ವಿಕೆಟ್ ಪಡೆದು ಸಂಭ್ರಮಿಸಿದರು. ಕೇವಲ ಐದು ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡ ಶ್ರೀಲಂಕಾ ಕಳೆಗುಂದಿತು.

ಗುಣತಿಲಕ (17;17ಎ, 4X3) ಹಾಗೂ ರಾಜಪಕ್ಸ (38; 29ಎ, 4X5) ಇನಿಂಗ್ಸ್‌ಗೆ ಬಲ ತುಂಬಲು ಪ್ರಯತ್ನಿಸಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 44 ರನ್‌ ಸೇರಿಸಿದರು. ಆದರೆ ಎಂಟನೇ ಓವರ್‌ನಲ್ಲಿ ಗುಣತಿಲಕ ವಿಕೆಟ್ ಗಳಿಸಿದ ಮುಜೀಬ್ ಜೊತೆಯಾಟವನ್ನು ಮುರಿದರು.

ಎರಡು ಓವರ್‌ಗಳ ನಂತರ ವಣಿಂದು ಹಸರಂಗಾ ವಿಕೆಟ್ ಕೂಡ ಮುಜೀಬ್ ಪಾಲಾಯಿತು. ಸ್ವಲ್ಪ ಭರವಸೆ ಮೂಡಿಸಿದ್ದ ರಾಜಪಕ್ಸ ರನೌಟ್ ಆದರು. ಇದರಿಂದಾಗಿ ತಂಡವು ನೂರರ ಗಡಿ ದಾಟುವುದೇ ಅನುಮನವಾಗಿತ್ತು. ಈ ಹಂತದಲ್ಲಿ ಒಂದಿಷ್ಟು ಉತ್ತಮ ಹೊಡೆತಗಳ ಆಟವಾಡಿದ ಕರುಣಾರತ್ನೆ (31; 38ಎ, 4X3, 6X1) ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 19.4 ಓವರ್‌ಗಳಲ್ಲಿ 105 (ರಾಜಪಕ್ಸ 38, ಕರುಣಾರತ್ನೆ 31, ಗುಣತಿಲಕ 17, ಫಜಲ್‌ ಹಕ್ ಫಾರೂಕಿ 11ಕ್ಕೆ3, ಮುಜೀಬ್ 24ಕ್ಕೆ2, ಮೊಹಮ್ಮದ್ ನಬಿ 14ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT