ಭಾನುವಾರ, ಡಿಸೆಂಬರ್ 15, 2019
21 °C

ಕ್ರಿಕೆಟ್ ‘ತೊಟ್ಟಿಲು’ ತೂಗುತಿರಲಿ...

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ದೀರ್ಘ ಮಾದರಿಯ ಕ್ರಿಕೆಟ್‌ ಜನಪ್ರಿಯತೆಯ ವೃದ್ಧಿಗಾಗಿ ಬಿಸಿಸಿಐ ಹಲವು ಕ್ರಮಗಳಿಗೆ ಮುಂದಾಗಿದೆ. ಅದೆಲ್ಲಕ್ಕೂ ತೊಟ್ಟಿಲಾಗಿರುವ ದೇಶಿ ಕ್ರಿಕೆಟ್‌ನಲ್ಲಿ ಏನು ಬದಲಾವಣೆಗಳ ಅಗತ್ಯವಿದೆ ಎಂಬ ಚಿಂತನೆಯೂ ಆರಂಭವಾಗಿದೆ. ಈ ವಾರಾಂತ್ಯದಲ್ಲಿ ರಣಜಿ ಋತು ಆರಂಭವಾಗಲಿದ್ದು ೀ ಹಿನ್ನೆಲೆಯಲ್ಲಿ ಮತ್ತಷ್ಟು ಯೋಚನೆ, ಯೋಜನೆಗಳು ಪ್ರಕಟವಾಗುವ ಸಾಧ್ಯತೆಗಳಿವೆ

ಟೆಸ್ಟ್ ಕ್ರಿಕೆಟ್ ಉಳಿಸಲು ಪಿಂಕ್ ಬಾಲ್ ಬಂತು..ಟ್ವೆಂಟಿ–20 ಮಾದರಿಯನ್ನು ಬೆಳೆಸಲು ಇಂಡಿಯನ್ ಪ್ರೀಮಿಯರ್ ಲೀಗ್ ಬಂತು..ಏಕದಿನ ಕ್ರಿಕೆಟ್‌ ಉಳಿವಿಗೆ ವಿಶ್ವಕಪ್ ಟೂರ್ನಿ ಸಾಕಾಯಿತು..

ಆದರೆ ಈ ಎಲ್ಲ ಮಾದರಿಗಳಿಗೂ ಆಟಗಾರರನ್ನು ಸಿದ್ಧಗೊಳಿಸಿ ಪೂರೈಸುವ ದೇಶಿ ಕ್ರಿಕೆಟ್‌ ಎಂಬ ತೊಟ್ಟಿಲನ್ನು ಉಳಿಸಲು ಏನು ಮಾಡಲಾಗುತ್ತಿದೆ?

ಇನ್ನು ಎಂಟು ದಿನ ಕಳೆದರೆ ಈ ಋತುವಿನ ‘ದೇಶಿ ಕ್ರಿಕೆಟ್‌ನ ರಾಜ’ ರಣಜಿ ಟ್ರೋಫಿ ಟೂರ್ನಿ ಆರಂಭವಾಗಲಿದೆ.  ಹೊಸ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಈ ಟೂರ್ನಿಯ ಸಂಭ್ರಮ ಗರಿಗೆದರುತ್ತಿದೆ. ಇದೇ ಹೊತ್ತಿನಲ್ಲಿ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ದೇಶಿ ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚಿಸಲು ಮತ್ತು ಈ ಟೂರ್ನಿಗಳನ್ನು ಮತ್ತಷ್ಟು ಉತ್ಕೃಷ್ಠಗೊಳಿಸಲು ಕೆಲವು ಸಲಹೆ ನೀಡಿದ್ದಾರೆ. ಅವು ಪ್ರಸ್ತುತವೂ ಆಗಿವೆ.

‘ದೇಶಿ ಕ್ರಿಕೆಟ್‌ನಲ್ಲಿ ಪ್ರಮುಖವಾದ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ತಂಡ ಸ್ಪೂರ್ತಿ ಮಾಯವಾಗಿದೆ.  ಆದ್ದರಿಂದ ಟೂರ್ನಿಯ ಮಾದರಿಯಲ್ಲಿ ಮರುಪರಿಷ್ಕರಣೆ ಅಗತ್ಯ’ ಎಂದು ಹೇಳಿದ್ದಾರೆ. ಅಲ್ಲದೇ ರಣಜಿ ಟೂರ್ನಿಯಲ್ಲಿ ಸೆಮಿಫೈನಲ್‌ ಸುತ್ತಿನ ಪರಿಷ್ಕರಣೆಗೂ ಅವರು ಸಲಹೆ ಕೊಟ್ಟಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ..

ಹೋದ ಫೆಬ್ರುವರಿಯಲ್ಲಿ ಇರಾನಿ ಟ್ರೋಫಿ ಮುಗಿದ ನಂತರ  ಹಿರಿಯ ಕ್ರಿಕೆಟಿಗ ಸಂದೀಪ್ ಪಾಟೀಲರು ದೇಶಿ ಕ್ರಿಕೆಟ್‌ ಉಳಿಸುವುದರ ಮಹತ್ವದ ಬಗ್ಗೆ ಹೇಳಿದ್ದರು. ಆ ಟೂರ್ನಿಯಲ್ಲಿ ವಿದರ್ಭದ ಹಿರಿಯ ಆಟಗಾರ ವಸೀಂ ಜಾಫರ್ ಮಿಂಚಿದ್ದರು. ಆದರೆ, ಬಹಳಷ್ಟು ಯುವ ಆಟಗಾರರು ಚುಟುಕು ಮಾದರಿ ಹೊಡೆತ ಪ್ರಯೋಗಿಸುವ ಭರದಲ್ಲಿ ವಿಕೆಟ್ ಚೆಲ್ಲಿದ್ದರು. ಈ ಹಿನ್ನೆಲೆಯಲ್ಲಿ ಸಂದೀಪ್ ದೇಶಿ ಕ್ರಿಕೆಟ್ ಸಬಲಗೊಳಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಸೌರವ್ ಗಂಗೂಲಿ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥರಾಗಿದ್ದರು. ಈಗ ಅವರೇ ಬಿಸಿಸಿಐ ಅಧ್ಯಕ್ಷರೂ ಆಗಿದ್ದಾರೆ.

‘ದೇಶಿ ಕ್ರಿಕೆಟ್‌ನಲ್ಲಿ ಆಡುವ ಆಟಗಾರರಿಗೆ ಗುತ್ತಿಗೆ ಪದ್ಧತಿ ಕಲ್ಪಿಸಬೇಕು. ರಾಷ್ಟ್ರೀಯ ತಂಡದಲ್ಲಿ ಆಡಿದ ಆಟಗಾರರಿಗೆ ನೀಡುತ್ತಿರುವ ಕಾಂಟ್ರ್ಯಾಕ್ಟ್ ಮತ್ತು ರ‍್ಯಾಂಕಿಂಗ್ ಮಾದದಿಯ ಸೌಲಭ್ಯಗಳನ್ನು ನೀಡಲು ಚಿಂತನೆ ನಡೆಸಲಾಗುತ್ತಿದೆ. ದೇಶಿ ಕ್ರಿಕೆಟ್‌ನಲ್ಲಿ ಆಡಿ ನಿವೃತ್ತರಾದವರಿಗೂ  ಆರ್ಥಿಕ ಸೌಲಭ್ಯ ನೀಡಲು ಯೋಜನೆ ರೂಪಿಸುತ್ತೇವೆ’ ಎಂದು ಹೋದ ತಿಂಗಳು ಸೌರವ್ ಗಂಗೂಲಿ ಹೇಳಿದ್ದರು.

ಇದು ಕೂಡ ಯುವ ಆಟಗಾರರಲ್ಲಿ ದೇಶಿ ಕ್ರಿಕೆಟ್‌ನತ್ತ ಆಸಕ್ತಿ ಬೆಳೆಸಲು ಯೋಚಿಸಿದ್ದೇ ಆಗಿದೆ. ಏಕೆಂದರೆ ಇವತ್ತು ಕ್ರಿಕೆಟ್  ಹವ್ಯಾಸಕ್ಕೆ ಸೀಮಿತವಾಗಿ ಉಳಿದಿಲ್ಲ. ಅದರಲ್ಲಿಯೇ ಭವಿಷ್ಯ ರೂಪಿಸಿಕೊಳ್ಳುವತ್ತ ಎಳೆಯ ಆಟಗಾರರು ಚಿತ್ತವಿಟ್ಟಿದ್ದಾರೆ. ಅವರ ಪಾಲಕರೂ ಕೂಡ ಅದನ್ನೇ ಬಯಸುತ್ತಾರೆ. ಆದ್ದರಿಂದ ಆದಾಯದ ಮೂಲವನ್ನು ಸೃಷ್ಟಿಸುವ ಕೆಲಸ ಕೆಳಹಂತದಿಂದಲೇ ಆರಂಭವಾದರೆ ಹೆಚ್ಚು ಹೆಚ್ಚು ಮಕ್ಕಳು ಬರುತ್ತಾರೆ ಎಂಬ ಭಾವನೆ ಇದೆ.

ಜನಾಕರ್ಷಣೆ ಹೆಚ್ಚಿಸುವ ಬಗೆ ಹೇಗೆ?
ದುಡ್ಡು, ಆದಾಯದ ಮೂಲಕ ಆಟಗಾರರನ್ನು ಸೆಳೆಯುವುದು ಒಂದು ಭಾಗ. ಆದರೆ ಕ್ರೀಡಾಂಗಣಗಳಲ್ಲಿ ನಡೆಯುವ ಪಂದ್ಯಗಳನ್ನು ನೋಡಲು ಜನರನ್ನು ಆಕರ್ಷಿಸುವತ್ತಲೂ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಇವತ್ತಿಗೂ ರಣಜಿ ಪಂದ್ಯಗಳನ್ನು ಋತುವಿನಿಡೀ ಫಾಲೋ ಮಾಡುವ ಜನರಿದ್ದಾರೆ. ಮೈದಾನಕ್ಕೆ ಹೋಗಿ ಕುಳಿತು ನೋಡುವ ಆಸಕ್ತರೂ ಇದ್ದಾರೆ. ಆದರೂ ಸೌಲಭ್ಯಗಳ ಕೊರತೆಯಿಂದ ಅವರೂ ಮನಸ್ಸು ಮಾಡುತ್ತಿಲ್ಲ.

‘ಸ್ಕೋರ್ ಬೋರ್ಡ್ ಸ್ಪಷ್ಟವಾಗಿ ಕಾಣುವಂತಿರಬೇಕು. ಪಂದ್ಯದ  ಮಾಹಿತಿಗಳು ಸಿಗುವಂತಾಗಬೇಕು.  ಆಗ ನೋಡುವುದಕ್ಕೆ ಆಸಕ್ತಿ ಮೂಡುತ್ತದೆ. ಉಳಿದಂತೆ ಕ್ಯಾಂಟಿನ್ ಸೌಲಭ್ಯ ಸೇರಿದಂತೆ ಎಲ್ಲವೂ ಇಲ್ಲಿದೆ’ ಎಂದು ಕ್ರಿಕೆಟ್ ಅಭಿಮಾನಿ ಎಚ್‌.ಎನ್. ನಾರಾಯಣ್ ಹೇಳುತ್ತಾರೆ. ವಿಧಾನಸೌಧದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಹಲವು ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಣಜಿ, ವಿಜಯ್ ಹಜಾರೆ, ದುಲೀಪ್ ಟ್ರೋಫಿ ಪಂದ್ಯಗಳನ್ನು ನೋಡುವ ಹವ್ಯಾಸ ಅವರದ್ದು, ಇಂದಿಗೂ ಉತ್ಸಾಹ ಕುಂದಿಲ್ಲ.

ಬೆಂಗಳೂರಿನಲ್ಲಿ ದೇಶಿ ಪಂದ್ಯಗಳನ್ನು ನೋಡುವವರ ಸಂಖ್ಯೆ ಕುಂದಿರುವ ಕಾರಣಕ್ಕೆ ಬಹುತೇಕ ಪಂದ್ಯಗಳನ್ನು ಈಗ ಗ್ರಾಮಾಂತರ ವಿಭಾಗಗಳಲ್ಲಿ ನಡೆಸಲಾಗುತ್ತಿದೆ.  ಬೇರೆ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಈ ಬಾರಿ ನಡೆಯಲಿರುವ ಟೂರ್ನಿಯಲ್ಲಿ ಕರ್ನಾಟಕದಲ್ಲಿ ನಡೆಯುವ ನಾಲ್ಕು ಲೀಗ್ ಪಂದ್ಯಗಳ ಪೈಕಿ ಮೂರು ಬೆಂಗಳೂರಿನಿಂದ ಹೊರಗೆ ನಡೆಯುತ್ತಿವೆ. ಆದರೂ ಟ್ವೆಂಟಿ–20ಯ ಥಳಕು, ಬೆಳಕಿಗೆ ಮಾರು ಹೋಗಿರುವ ಕ್ರಿಕೆಟ್‌ ಪ್ರೇಮಿಗಳನ್ನು ‘ಶ್ವೇತ ಕ್ರಿಕೆಟ್‌’ನತ್ತ ಮರಳಿ ಕರೆದುಕೊಂಡು ಬರುವುದು ಸವಾಲಿನ ಕೆಲಸವೇ ಆಗಿದೆ.

ಇದಕ್ಕೆ ಟೂರ್ನಿಯು ರೋಚಕವಾಗಿರುವಂತೆ ನೋಡಿಕೊಳ್ಳುವುದೊಂದೇ ದಾರಿ. ಅದಕ್ಕಾಗಿಯೇ ಆಯೋಜನೆಯ ಮಾದರಿಯಲ್ಲಿಯೇ ಕೆಲವು ಮಾರ್ಪಾಡುಗಳ ಅಗತ್ಯವನ್ನು ಸಚಿನ್ ತೆಂಡೂಲ್ಕರ್ ಹೇಳುತ್ತಾರೆ.

‘ರಣಜಿ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪುವ ನಾಲ್ಕು ತಂಡಗಳಿಗೆ ಇನ್ನೂ ಎರಡು ತಂಡಗಳನ್ನು ಸೇರಿಸಬೇಕು. ಆ ತಂಡಗಳಲ್ಲಿ;  ರಣಜಿ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಅರ್ಹತೆ ಗಳಿಸದ  ಆದರೆ ಗಮನಾರ್ಹ ಆಟವಾಡಿದ ತಂಡಗಳ ಆಯ್ದ ಆಟಗಾರರಿಗೆ ಅವಕಾಶ ನೀಡಬೇಕು. ಅಲ್ಲದೇ 19 ವರ್ಷದೊಳಗಿನ ಮತ್ತು 23 ವರ್ಷದೊಳಗಿನವರ ವಯೋಮಿತಿಯ ಟೂರ್ನಿಗಳಲ್ಲಿ ಉತ್ತಮವಾಗಿ ಆಡಿದವರನ್ನೂ ಆಯ್ಕೆ ಮಾಡಬೇಕು  ಈ ಮೂಲಕ ಜೂನಿಯರ್ ಆಟಗಾರರಿಗೂ ಅವಕಾಶ ಕೊಟ್ಟಂತಾಗುತ್ತದೆ’ ಎಂದು ಸಚಿನ್ ಸಲಹೆ ನೀಡಿದ್ದಾರೆ.

ದುಲೀಪ್ ಟ್ರೋಫಿಯ ಮರುಪರಿಷ್ಕರಣೆಗೆ ಅವರು ಹೆಚ್ಚು ಒತ್ತು ಕೊಟ್ಟಿದ್ದಾರೆ. ಈ ಟೂರ್ನಿಯು ರಣಜಿ ಟೂರ್ನಿಯ ನಂತರವೇ ನಡೆಯಬೇಕು ಎಂದು ಪ್ರತಿಪಾದಿಸುತ್ತಾರೆ. ಆದರೆ ಈ ಸಲ ದೇಶಿ ಋತುವಿನ ಆರಂಭದಲ್ಲಿಯೇ ದುಲೀಪ್ ಟ್ರೋಫಿ ಟೂರ್ನಿ ಮುಗಿದುಹೋಯಿತು. ಈಚೆ್ಗೆ ದೇವಧರ್ ಟ್ರೋಫಿ ಕೂಡ ಮುಕ್ತಾಯವಾಯಿತು. ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ  ಟಿ20 ಟೂರ್ನಿಗಳು ಮುಗಿದಿವೆ. ಉಳಿದಿರುವುದು ರಣಜಿ ಮತ್ತು ಇರಾನಿ ಮಾತ್ರ.

‘ದುಲೀಪ್ ಟ್ರೋಫಿ ಟೂರ್ನಿಯಲ್ಲಿ ತಂಡ ಸ್ಫೂರ್ತಿಯ ಕೊರತೆ ಕಾಣುತ್ತಿದೆ. ತಂಡಗಳ ರಚನೆಯಲ್ಲಿ ಮರುಪರಿಷ್ಕರಣೆ ಅಗತ್ಯ’ ಎಂದು ಸಚಿನ್ ಹೇಳಿದ್ದಾರೆ. 

ಇದೇ ಮಾತನ್ನು ಈಚೆಗೆ ವಿದರ್ಭ ತಂಡದ ಆಟಗಾರ ಫೈಜ್ ಫಜಲ್ ಕೂಡ ಹೇಳಿದ್ದರು. ಬೆಂಗಳೂರಿನಲ್ಲಿ ನಡೆದಿದ್ದ ದುಲೀಪ್ ಟ್ರೋಫಿ ಟೂರ್ನಿಯ ಸಂದರ್ಭದಲ್ಲಿ ಅವರು, ‘ತಂಡದೊಳಗೆ ಆಟಗಾರರು ಪರಸ್ಪರ ಹೊಂದಾಣಿಕೆ ಕೊರತೆ ಕಾಣುತ್ತಿದೆ. ಇದಕ್ಕೆ ಕಾರಣ ನಾವು ತಂಡಕ್ಕಾಗಿ ಆಡಬೇಕಾದ ಪರಿಸ್ಥಿತಿ ಇಲ್ಲ. ಏನಿದ್ದರೂ ವೈಯಕ್ತಿಕ ಸಾಮರ್ಥ್ಯ ಪ್ರದರ್ಶನಕ್ಕಷ್ಟೇ ಸೀಮಿತವಾಗುತ್ತಿದೆ. ಮೊದಲಾದರೆ ಅಂತರ ವಲಯ ಟೂರ್ನಿ ಇತ್ತು. ಆಗ ನಮ್ಮದೇ ಪ್ರಾದೇಶಿಕ ವಲಯದ ಆಟಗಾರರು ಇರುತ್ತಿದ್ದರು. ಆಗ ತಂಡದ ಆಟ ರಂಗೇರುತ್ತಿತ್ತು’ ಎಂದು ಸೂಚ್ಯವಾಗಿ ಹೇಳಿದ್ದರು. 


ಪವನ್ ದೇಶಪಾಂಡೆ ಹಾಗೂ ರೋನಿತ್ ಮೋರೆ

ಕಳೆದ ಎರಡು ವರ್ಷಗಳಿಂದ ಮೂರು ತಂಡಗಳಾದ ಇಂಡಿಯಾ ರೆಡ್, ಬ್ಯ್ಲೂ ಮತ್ತು ಗ್ರೀನ್ ದುಲೀಪ್ ಟ್ರೋಫಿಯಲ್ಲಿ ಆಡುತ್ತಿವೆ. ಎಲ್ಲ ವಲಯಗಳ ಆಟಗಾರರೂ ಈ ತಂಡಗಳಲ್ಲಿರುತ್ತಾರೆ. ಈ ಪದ್ಧತಿ ಹೋಗಬೇಕು ಎಂಬುದು ಬಹಳಷ್ಟು ಕ್ರಿಕೆಟಿಗರ ಒತ್ತಾಯವಾಗಿದೆ.

ಇದೀಗ ಬಿಸಿಸಿಐ ಚುಕ್ಕಾಣಿ ಹಿಡಿದಿರುವ ಗಂಗೂಲಿ ಬಳಗವು ಈ ಬದಲಾವಣೆಗೆ ಪ್ರಾಶಸ್ತ್ಯ ಕೊಡುವ ನಿರೀಕ್ಷೆ ಇದೆ. ಹಾಗೇನಾದರೂ ಆದರೆ, ಮುಂದಿನ ವರ್ಷದ ದೇಶಿ ಋತುವಿನಲ್ಲಿ ಬದಲಾವಣೆಯ ಗಾಳಿ ಬೀಸಬಹುದು. ಜನರ ಆಸಕ್ತಿಯೂ ಇತ್ತ ಹರಿಯಬಹುದು.

ಕ್ರೀಡಾಂಗಣಗಳಲ್ಲಿ ಕಾಮೆಂಟ್ರಿ ಬೇಕು
ಕ್ರಿಕೆಟ್ ಮತ್ತು ಕಾಮೆಂಟ್ರಿ (ವೀಕ್ಷಕ ವಿವರಣೆ) ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಇವತ್ತು ಕಾಮೆಂಟ್ರಿಯನ್ನು ಕೇವಲ ಟಿವಿ ಮತ್ತು ರೆಡಿಯೊದಲ್ಲಿ ಕೇಳುವಂತಾಗಿದೆ. ದೇಶಿ ಕ್ರಿಕೆಟ್‌ ಪಂದ್ಯಗಳು ನಡೆಯುವ ಕ್ರೀಡಾಂಗಣದಲ್ಲಿ ವೀಕ್ಷಕ ವಿವರಣೆಗೆ ವ್ಯವಸ್ಥೆ ಮಾಡಬೇಕು. ಇದರಿಂದ ಬಹಳಷ್ಟು ಜನರನ್ನು ಆಕರ್ಷಿಸಬಹುದು. ಅಲ್ಲದೇ ಸ್ಥಳೀಯ ಭಾಷೆಗಳಲ್ಲಿ ಕಾಮೆಂಟ್ರಿ ಮಾಡುವ ಕಲಾವಿದರು, ಆಸಕ್ತರಿಗೆ ಅವಕಾಶ ನೀಡಬಹುದು. ಇದರಿಂದ ಆಟ ಮತ್ತು ಜನರಿಬ್ಬರಿಗೂ ಅನುಕೂಲ. ಐಪಿಎಲ್, ಭಾರತ ತಂಡಗಳಲ್ಲಿ ಆಡಿದ ಎಷ್ಟೋ ಆಟಗಾರರು ತಮ್ಮ ರಾಜ್ಯದ ರಣಜಿ ತಂಡಗಳನ್ನು ಪ್ರತಿನಿಧಿಸುತ್ತಾರೆ. ಅವರು ಅಂಗಳಕ್ಕೆ ಇಳಿದಾಗ ಅವರ ಕುರಿತು ಮಾಹಿತಿ ನೀಡುವುದು, ತತ್‌ಕ್ಷಣದ ಸ್ಕೋರ್ ಮತ್ತಿತರ ಅಂಶಗಳನ್ನು ಕಾಮೆಂಟ್ರಿ ಮೂಲಕ ಕೊಡುವುದು ಪರಿಣಾಮಕಾರಿ ಈ ದಿಸೆಯಲ್ಲಿ ಪ್ರಯತ್ನ ಮಾಡಬಹುದು.
-ಸುಶೀಲ್ ದೋಶಿ, ಕ್ರಿಕೆಟ್‌ ವೀಕ್ಷಕ ವಿವರಣೆಕಾರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು