ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಭ ತಂತ್ರಗಳಿಗೆ ಮೊರೆಹೋಗಬೇಡಿ: ಕೊಹ್ಲಿ

Last Updated 23 ಫೆಬ್ರುವರಿ 2019, 20:33 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಆಟಗಾರರು ಸುಲಭವಾಗಿ ಸಾಧನೆ ಮಾಡುವ ತಂತ್ರಗಳಿಗೆ ಬಲಿಯಾಗಬಾರದು.ಐಪಿಎಲ್‌ ಟೂರ್ನಿ ಇಂಥ ಕೆಟ್ಟ ಚಾಳಿ ಬೆಳೆಯಲು ಕಾರಣವಾಗಬಾರದು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಸಲಹೆ ನೀಡಿದರು.

‘ಐಪಿಎಲ್‌ ಪಂದ್ಯಗಳು ಏಕದಿನ ಕ್ರಿಕೆಟ್‌ನ ತಂತ್ರಗಳಿಗೆ ಮಾರಕವಾಗಬಾರದು. ಒತ್ತಡವನ್ನು ನಿಭಾಯಿಸಿಕೊಂಡು ಆಡಲು ಆದ್ಯತೆ ನೀಡಬೇಕು. ಯಾವುದೇ ತಂಡ ಉತ್ತಮ ಲಯದಲ್ಲಿದ್ದರೆ ಆ ತಂಡದಲ್ಲಿರುವ, ವಿಶ್ವಕಪ್‌ನಲ್ಲಿ ಆಡುವ ಆಟಗಾರರು ವಿಶ್ರಾಂತಿ ಪಡೆಯಲು ಮುಂದಾಗಬೇಕು’ ಎಂದು ಅವರು ನುಡಿದರು.

ಹೆಚ್ಚು ಏಕದಿನ ಪಂದ್ಯಗಳಿಗೆ ಆದ್ಯತೆ: ವಿಶ್ವಕಪ್ ಕ್ರಿಕೆಟ್ ಟೂರ್ನಿಗೂ ಮೊದಲು ಹೆಚ್ಚು ಏಕದಿನ ಪಂದ್ಯಗಳನ್ನು ಆಡಲು ತಂಡ ಬಯಸುತ್ತಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು.

‘ಆಸ್ಟ್ರೇಲಿಯಾ ಎದುರು ಎರಡು ಟ್ವೆಂಟಿ–20 ಪಂದ್ಯಗಳು ಮತ್ತು ಐದು ಏಕದಿನ ಪಂದ್ಯಗಳಿಗಿಂತ ಏಳು ಏಕದಿನ ಪಂದ್ಯಗಳನ್ನು ಆಡಿದ್ದರೆ ಚೆನ್ನಾಗಿತ್ತು. ಹಾಗಾಗಿದ್ದರೆ ವಿಶ್ವಕಪ್ ಸಿದ್ಧತೆ ಇನ್ನಷ್ಟು ಅರ್ಥ ಪಡೆದುಕೊಳ್ಳುತ್ತಿತ್ತು. ಆದರೂ ನಾವು ನಿರಾಶರಾಗಿಲ್ಲ. ಟ್ವೆಂಟಿ–20 ಪಂದ್ಯಗಳನ್ನು ಕೂಡ ವಿಶ್ವಕಪ್‌ನ ಸಿದ್ಧತೆಯ ಭಾಗವಾಗಿಯೇ ಕಾಣಲಿದ್ದೇವೆ’ ಎಂದು ಕೊಹ್ಲಿ ಹೇಳಿದರು.

ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಆಯೋಜನೆಯಾಗಿರುವ ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯ ಜೂನ್ ಐದರಂದು ಸೌತಾಂಪ್ಟನ್‌ನಲ್ಲಿ ನಡೆಯಲಿದೆ.

‘ಸದ್ಯ ಭಾರತ ತಂಡ ಸಮತೋಲನದಿಂದ ಕೂಡಿದೆ. ಯಾವುದೇ ವಿಭಾಗದ ಬಗ್ಗೆ ಆತಂಕ ಇಲ್ಲ. ತಂಡದಲ್ಲಿದ್ದ ಸಮಸ್ಯೆಗಳೆಲ್ಲವನ್ನೂ ಪರಿಹರಿಸಲಾಗಿದೆ’ ಎಂದು ಅವರು ವಿವರಿಸಿದರು.

ಸರ್ಕಾರದ ನಿರ್ಧಾರಕ್ಕೆ ಬದ್ಧ
ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯ ಆಡುವುದರ ಬಗ್ಗೆ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಭಾರತ ತಂಡ ಬದ್ಧವಾಗಿರಲಿದೆ ಎಂದು ವಿರಾಟ್ ಕೊಹ್ಲಿ ತಿಳಿಸಿದರು.

ಪುಲ್ವಾಮಾದಲ್ಲಿ ನಡೆದ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಪಾಕ್ ವಿರುದ್ಧ ಪಂದ್ಯ ಆಡಬಾರದು ಎಂಬ ಒತ್ತಡ ಎಲ್ಲ ಕಡೆಯಿಂದ ಕೇಳಿಬಂದಿತ್ತು.

‘ದೇಶ ಏನನ್ನು ಬಯಸುತ್ತದೆ ಮತ್ತು ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಮುಖ್ಯ. ಅದಕ್ಕೆ ತಕ್ಕಂತೆ ನಾವು ನಡೆದುಕೊಳ್ಳುತ್ತೇವೆ’ ಎಂದು ಕೊಹ್ಲಿ ಹೇಳಿದರು. ಇದೇ ನಿಲುವನ್ನು ತಾಳಿರುವುದಾಗಿ ಕೋಚ್ ರವಿಶಾಸ್ತ್ರಿ ಕೂಡ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT