ಶ್ರೀಲಂಕಾ ಎದುರಿನ ಮೂರನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯ: ವಿಂಡೀಸ್‌ಗೆ ಡೌರಿಚ್‌ ಆಸರೆ

7
ಶ್ರೀಲಂಕಾ ಎದುರಿನ ಮೂರನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯ

ಶ್ರೀಲಂಕಾ ಎದುರಿನ ಮೂರನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯ: ವಿಂಡೀಸ್‌ಗೆ ಡೌರಿಚ್‌ ಆಸರೆ

Published:
Updated:
ವೆಸ್ಟ್‌ ಇಂಡೀಸ್‌ ತಂಡದ ಡೆವೊನ್ ಸ್ಮಿತ್‌ (ಬಲತುದಿ) ಔಟಾದಾಗ ಶ್ರೀಲಂಕಾ ಆಟಗಾರರು ಸಂಭ್ರಮಿಸಿದರು ಎಎಫ್‌ಪಿ ಚಿತ್ರ

ಬ್ರಿಜ್‌ಟೌನ್‌: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೆಸ್ಟ್‌ ಇಂಡೀಸ್‌ ತಂಡಕ್ಕೆ ವಿಕೆಟ್‌ ಕೀಪರ್‌ ಶೇನ್‌ ಡೌರಿಚ್‌ (ಬ್ಯಾಟಿಂಗ್‌ 60; 101ಎ, 8ಬೌಂ) ಆಸರೆಯಾದರು.

ಡೌರಿಚ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ವಿಂಡೀಸ್‌ ತಂಡ ಶ್ರೀಲಂಕಾ ಎದುರಿನ ಮೂರನೇ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಸಾಧಾರಣ ಮೊತ್ತ ಕಲೆಹಾಕಿದೆ.

ಕೆನ್ಸಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ ಜೇಸನ್‌ ಹೋಲ್ಡರ್‌ ಬಳಗ ಮೊದಲ ಇನಿಂಗ್ಸ್‌ನಲ್ಲಿ 46.3 ಓವರ್‌ಗಳಲ್ಲಿ 5 ವಿಕೆಟ್‌ಗೆ 132ರನ್‌ ಕಲೆಹಾಕಿದೆ.

ಬ್ಯಾಟಿಂಗ್‌ ಆರಂಭಿಸಿದ ಆತಿಥೇಯರಿಗೆ ಮೊದಲ ಓವರ್‌ನಲ್ಲಿ ಸುರಂಗ ಲಕ್ಮಲ್‌ ಆಘಾತ ನೀಡಿದರು. ಆರನೇ ಎಸೆತದಲ್ಲಿ ಅವರು ಡೆವೊನ್‌ ಸ್ಮಿತ್‌ಗೆ (2) ಪೆವಿಲಿಯನ್‌ ಹಾದಿ ತೋರಿಸಿದರು. ಐದನೇ ಓವರ್‌ನಲ್ಲೂ ಲಕ್ಮಲ್‌ ಮೋಡಿ ಮಾಡಿದರು. ಮೂರನೇ ಎಸೆತದಲ್ಲಿ ಅವರು ಕ್ರೆಗ್‌ ಬ್ರಾಥ್‌ವೈಟ್‌ (2) ಅವರನ್ನು ಔಟ್‌ ಮಾಡಿದರು. ಮರು ಓವರ್‌ನಲ್ಲಿ ಲಾಹಿರು ಕುಮಾರ, ಕೀರನ್‌ ಪೋವೆಲ್‌ (4) ವಿಕೆಟ್‌ ಉರುಳಿಸಿ ಸಿಂಹಳೀಯ ನಾಡಿನ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ರಾಸ್ಟನ್‌ ಚೇಸ್‌ (14) ಮತ್ತು ಶಾಯ್‌ ಹೋಪ್‌ (11) ಕೂಡಾ ವಿಕೆಟ್‌ ನೀಡಲು ಅವಸರಿಸಿದರು. ಇವರು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದಾಗ ತಂಡದ ಖಾತೆಯಲ್ಲಿ 53ರನ್‌ಗಳಿದ್ದವು. ಹೀಗಾಗಿ ಹೋಲ್ಡರ್‌ ಪಡೆ 100ರ ಗಡಿ ದಾಟುವುದೇ ಅನುಮಾನ ಎನಿಸಿತ್ತು.

ಈ ಹಂತದಲ್ಲಿ ಡೌರಿಚ್‌ ಮತ್ತು ಹೋಲ್ಡರ್‌ (ಬ್ಯಾಟಿಂಗ್‌ 33; 70ಎ, 6ಬೌಂ) ಲಂಕಾ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿ ಕಳೆಗುಂದಿದ್ದ ಆತಿಥೇಯರ ಇನಿಂಗ್ಸ್‌ಗೆ ರಂಗು ತುಂಬಿದರು. ಈ ಜೋಡಿ ಮುರಿಯದ ಆರನೇ ವಿಕೆಟ್‌ ಜೊತೆಯಾಟದಲ್ಲಿ 79 ರನ್‌ ಕಲೆಹಾಕಿ ತಂಡದ ಮೇಲೆ ಆವರಿಸಿದ್ದ ಆತಂಕದ ಕಾರ್ಮೋಡವನ್ನು ದೂರ ಸರಿಸಿತು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌, ಪ್ರಥಮ ಇನಿಂಗ್ಸ್‌, 46.3 ಓವರ್‌ಗಳಲ್ಲಿ 5 ವಿಕೆಟ್‌ಗೆ 132 (ಶಾಯ್‌ ಹೋಪ್‌ 11, ರಾಸ್ಟನ್‌ ಚೇಸ್‌ 14, ಶೇನ್‌ ಡೌರಿಚ್‌ ಬ್ಯಾಟಿಂಗ್‌ 60, ಜೇಸನ್ ಹೋಲ್ಡರ್‌ ಬ್ಯಾಟಿಂಗ್‌ 33; ಸುರಂಗ ಲಕ್ಮಲ್‌ 42ಕ್ಕೆ2, ಲಾಹಿರು ಕುಮಾರ 40ಕ್ಕೆ1, ಕಸುನ್‌ ರಜಿತಾ 36ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !