ಬುಧವಾರ, ಆಗಸ್ಟ್ 21, 2019
22 °C

ದ್ರಾವಿಡ್‌ ದಾರಿ ಸುಗಮ

Published:
Updated:

ಮುಂಬೈ (‍ಪಿಟಿಐ): ‘ಹಿರಿಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರಾಗಿ ಕೆಲಸ ಮಾಡಲು ಯಾವುದೇ ಅಡ್ಡಿ ಇಲ್ಲ. ಅವರ ಪ್ರಕರಣ ಹಿತಾಸಕ್ತಿ ಸಂಘರ್ಷ ನಿಯಮದ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಸದಸ್ಯ ರವಿ ಥೋಗ್ಡೆ ಮಂಗಳವಾರ ತಿಳಿಸಿದ್ದಾರೆ.

‘ಬಿಸಿಸಿಐ ಒಂಬುಡ್ಸ್‌ಮನ್‌ ಡಿ.ಕೆ. ಜೈನ್‌ ಅವರು ನೀಡಿದ್ದ ನೋಟಿಸ್‌ಗೆ ದ್ರಾವಿಡ್‌ ಉತ್ತರಿಸಿದ್ದಾರೆ. ಜೈನ್‌ ಅವರು ಈ ಪ್ರಕರಣದ ವಿಚಾರಣೆ ನಡೆಸಬೇಕಿದೆ. ರಾಹುಲ್‌, ಹಿತಾಸಕ್ತಿ ಸಂಘರ್ಷ ನಿಯಮಕ್ಕೆ ಒಳಪಡುತ್ತಾರೆ ಎಂದು ಜೈನ್‌ ಹೇಳಿದರೆ, ಅವರಿಗೆ ನಾವು ಸೂಕ್ತ ವಿವರಣೆ ನೀಡುತ್ತೇವೆ’ ಎಂದು ಸಿಒಎ ಸಭೆಯ ಬಳಿಕ ಥೋಗ್ಡೆ ನುಡಿದಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಲೀಕತ್ವ ಹೊಂದಿರುವ ಇಂಡಿಯಾ ಸಿಮೆಂಟ್ಸ್‌ ಸಮೂಹದಲ್ಲಿ ದ್ರಾವಿಡ್‌ ಉಪಾಧ್ಯಕ್ಷರಾಗಿದ್ದಾರೆ. ಅವರು ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆಯ ಸದಸ್ಯ ಸಂಜೀವ್‌ ಗುಪ್ತಾ, ಒಂಬುಡ್ಸ್‌ಮನ್‌ಗೆ ದೂರು ನೀಡಿದ್ದರು.

‘ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳಿಗೆ ನಡೆಸಲು ಉದ್ದೇಶಿಸಿರುವ ಚುನಾವಣೆ ಮತ್ತು ಭಾರತ ತಂಡದ ಕೋಚ್‌ ನೇಮಕ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಅವರು ಹೇಳಿದ್ದಾರೆ.

Post Comments (+)