ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಡದಲ್ಲಿ ಸಾಂಘಿಕ ಹೋರಾಟಕ್ಕೆ ದ್ರಾವಿಡ್ ಒತ್ತು ನೀಡಲಿದ್ದಾರೆ: ಕೆ.ಎಲ್. ರಾಹುಲ್

Last Updated 16 ನವೆಂಬರ್ 2021, 7:52 IST
ಅಕ್ಷರ ಗಾತ್ರ

ಜೈಪುರ: ಟೀಮ್ ಇಂಡಿಯಾಕ್ಕೆ ಹೊಸದಾಗಿ ನೇಮಕಗೊಂಡಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು, ವೈಯಕ್ತಿಕ ಗುರಿ ಸಾಧನೆಗಿಂತ ತಂಡದ ಸಾಂಘಿಕ ಹೋರಾಟಕ್ಕೆ ಹೆಚ್ಚು ಗಮನ ಹರಿಸುವಂತಹ ಸಂಸ್ಕೃತಿಯನ್ನು ತರಲಿದ್ದಾರೆ ಎಂದು ಭಾರತ ಟಿ–20 ತಂಡದ ಉಪ ನಾಯಕ ಕೆ.ಎಲ್. ರಾಹುಲ್ ಹೇಳಿದ್ದಾರೆ.

ಹೊಸ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ನೇತೃತ್ವದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಹೊಸ ಶಕೆ ಆರಂಭಿಸಲಿದೆ.

ಬುಧವಾರದಿಂದ ನ್ಯೂಜಿಲೆಂಡ್ ವಿರುದ್ಧ ಆರಂಭವಾಗಲಿರುವ ಮೊದಲ ಟಿ–20 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ಇಂಡಿಯಾ–ಎ ತಂಡದಲ್ಲಿ ದ್ರಾವಿಡ್ ಜೊತೆಗಿನ ಅನುಭವ ಮತ್ತು ಕೋಚ್ ಆಗಿ ಅವರು ಭಾರತ ತಂಡಕ್ಕೆ ಹೇಗೆ ನೆರವಾಗಲಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರಿಸಿದರು.

‘ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾಗ ಕೆಲ ಪಂದ್ಯಗಳು ಇಂಡಿಯಾ–ಎ ಪರ ಆಡಿದ್ಧೇನೆ. ಇಲ್ಲಿಗೆ ಅಭ್ಯಾಸಕ್ಕೆ ಬರುವ ಮುನ್ನ ಅವರ ಜೊತೆ ಒಂದು ಸಣ್ಣ ಮಾತುಕತೆ ನಡೆಸಿದ್ದೇವೆ. ಒಂದು ಉತ್ತಮ ತಂಡದ ವಾತಾವರಣ ನಿರ್ಮಿಸುವುದು ಮತ್ತು ಒಬ್ಬ ವ್ಯಕ್ತಿ, ಕ್ರಿಕೆಟ್ ಆಟಗಾರರಾಗಿ ಅತ್ಯುತ್ತಮ ಪ್ರದರ್ಶನಕ್ಕೆ ಅಣಿಗೊಳಿಸುವುದು ಅವರ ಉದ್ಧೇಶವಾಗಿದೆ’ಎಂದು ಅವರು ಹೇಳಿದರು.

‘ಅವರು(ರಾಹುಲ್ ದ್ರಾವಿಡ್) ಟೀಮ್‌ ಇಂಡಿಯಾದಲ್ಲಿದ್ದಾಗ ಯಾವಾಗಲೂ ತಂಡದ ಒಬ್ಬ ಸದಸ್ಯರಾಗಿರುತ್ತಿದ್ದರು. ವೈಯಕ್ತಿಕ ಗುರಿಸಾಧನೆಗಿಂತ ತಂಡದ ಸಾಂಘಿಕ ಹೋರಾಟ ಮುಖ್ಯವೆಂಬ ವಾತಾವರಣವನ್ನು ಇಲ್ಲಿಯೂ ತರಲು ಅವರು ಪ್ರಯತ್ನಿಸುತ್ತಿದ್ದಾರೆ’ಎಂದು ಕೆ.ಎಲ್. ರಾಹುಲ್ ಹೇಳಿದರು.

'ತುಂಬಾ ವರ್ಷಗಳಿಂದ ನಾನು ಅವರನ್ನು ಬಲ್ಲೆ. ಯುವಕನಾಗಿ ಸಹಜವಾಗಿಯೇ ಅವರಂತೆ ಆಟವನ್ನು ಕಲಿಯಲು ಪ್ರಯತ್ನಿಸಿದ್ದೆ. ಹಾಗಾಗಿ, ಆಟವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಅವರ ಜೊತೆ ಮಾತನಾಡಿದಾಗ ಬ್ಯಾಟಿಂಗ್ ಕೌಶಲ್ಯ ಮತ್ತಷ್ಟು ಸುಧಾರಿಸಿತು. ಅವರು ತುಂಬಾ ಸೌಜನ್ಯದ ವ್ಯಕ್ತಿಯಾಗಿದ್ದು, ಕರ್ನಾಟಕ ತಂಡದಲ್ಲಿದ್ದ ನಮ್ಮೆಲ್ಲರಿಗೂ ನೆರವಾಗಿದ್ದಾರೆ’ಎಂದು ರಾಹುಲ್ ಹೇಳಿದರು.

‘ಹಾಗಾಗಿ, ನಮ್ಮೆಲ್ಲರಿಗೂ ಉತ್ತಮ ಕ್ರಿಕೆಟಿಗರಾಗಿ ನಮ್ಮನ್ನು ನಾವು ರೂಪಿಸಿಕೊಳ್ಳಲು, ಕ್ರಿಕೆಟ್ ಅನ್ನು ಮತ್ತಷ್ಟು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಅವರ ಕ್ರಿಕೆಟ್ ಬಗೆಗಿನ ದೃಷ್ಟಿಕೋನವನ್ನು ಅರಿಯಲು ಒಂದು ಉತ್ತಮ ಅವಕಾಶ ಮತ್ತು ಸಮಯವಾಗಿದೆ’ಎಂದು ರಾಹುಲ್ ಹೇಳಿದ್ದಾರೆ.

‘ನಾವೆಲ್ಲರೂ ಒಟ್ಟಿಗೆ ಕುಳಿತು ಟೀಮ್ ಇಂಡಿಯಾ ಯಶಸ್ಸಿನತ್ತ ಸಾಗಲು ಬೇಕಾದ ಸಾಂಘಿಕ ಯೋಜನೆ ರೋಪಿಸಬೇಕಿದೆ. ಮುಂದಿನ ಕೆಲ ದಿನಗಳಲ್ಲಿ ಅದು ಆಗಲಿದೆ’ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT