ಯುಡಿಆರ್‌ಎಸ್‌ನಿಂದ ಆಟಗಾರರ ನಡವಳಿಕೆ ಸುಧಾರಣೆ: ಮೈಕ್ ಬ್ರೆಯರ್ಲಿ

7
ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಅಭಿಮತ

ಯುಡಿಆರ್‌ಎಸ್‌ನಿಂದ ಆಟಗಾರರ ನಡವಳಿಕೆ ಸುಧಾರಣೆ: ಮೈಕ್ ಬ್ರೆಯರ್ಲಿ

Published:
Updated:
Deccan Herald

ಬೆಂಗಳೂರು: ಕ್ರಿಕೆಟ್‌ನಲ್ಲಿ ಅಂಪೈರ್ ತೀರ್ಪು ಮರುಪರಿಶೀಲನೆ ವ್ಯವಸ್ಥೆ (ಯುಡಿಆರ್‌ಎಸ್) ಜಾರಿಗೆ ಬಂದ ಆಟಗಾರರ ನಡವಳಿಕೆಯಲ್ಲಿ ಬಹಳಷ್ಟು ಉತ್ತಮ ಬದಲಾವಣೆಗಳಾಗಿವೆ ಎಂದು ಇಂಗ್ಲೆಂಡ್‌ನ ಹಿರಿಯ ಕ್ರಿಕೆಟಿಗ ಮೈಕ್  ಬ್ರೇರ್‌ಲಿ ಅಭಿಪ್ರಾಯಪಟ್ಟರು.

ಶನಿವಾರ ಸಂಜೆ ದೊಮ್ಮಲೂರಿನ ಟೆರಿ ಸಭಾಂಗಣದಲ್ಲಿ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ (ಬಿಐಸಿ) ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಕ್ರಿಕೆಟ್ ಕುರಿತು ಮಾತನಾಡಿದರು.

‘ಇಂದಿನ ಕ್ರಿಕೆಟ್‌ ಜಂಟಲ್‌ಮನ್ ಗೇಮ್ ಆಗಿ ಉಳಿದಿದೆಯೇ? ಹಿಂದೆ ವಿಶ್ವನಾಥ್ (ಜಿಆರ್‌ವಿ) ಟೇಲರ್ (ಬಾಬ್) ಅವರನ್ನು ಮರಳಿ ಕ್ರೀಸ್‌ಗೆ ಮರಳಿ ಕರೆಸಿದ್ದಂತಹ ಘಟನೆಗಳು ಈಗ ಕಾಣುತ್ತಿಲ್ಲವಲ್ಲ‘ ಎಂದು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

‘ಆಂಪೈರ್ ನೀಡಿದ ತೀರ್ಪುಗಳನ್ನು ಮರುಪರಿಶೀಲನೆ ಮಾಡುವ ಸೌಲಭ್ಯ ಈಗ ಇದೆ. ಇದರಿಂದಾಗಿ ಆಟಗಾರರು ಸಭ್ಯತೆಯ ಎಲ್ಲೆ ಮೀರುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಡಿಆರ್‌ಎಸ್‌ ಬಂದಿರುವುದು ಒಳ್ಳೆಯದಾಗಿದೆ’ ಎಂದರು.

ಡಿಆರ್‌ಎಸ್‌ ನಿಖರತೆಯ ಕುರಿತು ಪ್ರತಿಕ್ರಿಯಿಸಿದ ಅವರು, ‘ಜೀವನದಲ್ಲಿ ಎಲ್ಲವೂ ಪರಿಪೂರ್ಣವಾಗಿರುವುದಿಲ್ಲ’ ಎಂದರು. ಸಭೆ ನಗೆಗಡಲಲ್ಲಿ ತೇಲಿತು.

ಸಂವಾದದಲ್ಲಿ ಹಾಜರಿದ್ದ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರು ಮೈಕ್ ಮಾತನ್ನು ಸಮರ್ಥಿಸಿದರು.

‘ತಟಸ್ಥ ಅಂಪೈರ್ ನೇಮಕ ನಿಯಮ ಬರುವ ಮುನ್ನ ಹಲವು ಅಂಪೈರ್‌ಗಳು ತಮ್ಮ ದೇಶದ ತಂಡಗಳ ಪರ ತೀರ್ಪುಗಳನ್ನು ನೀಡಿದ್ದ ಆರೋಪಗಳು ಬಹಳಷ್ಟು ಕೇಳಿಬಂದಿದ್ದವು. 1979ರ ಟೆಸ್ಟ್‌ನಲ್ಲಿ ಸುನಿಲ್ ಗಾವಸ್ಕರ್ ದ್ವಿಶತಕ ಹೊಡೆದಿದ್ದರು.  ಪಂದ್ಯದ ನಂತರ ಅವರು ಆಂಪೈರ್ ಡೇವಿಡ್ ಕಾನ್ಸ್‌ಟೆಂಟ್‌ ಅವರು ಇಂಗ್ಲೆಂಡ್‌ಗೆ ಕಾನ್ಸ್‌ಟೆಂಟ್‌ (ಪರ) ಆಗಿದ್ದಾರೆ ಎಂದಿದ್ದರು. 1995ರಲ್ಲಿ ಬೆಂಗಳೂರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದಿದ್ದ ಟೆಸ್ಟ್‌ನಲ್ಲಿ ಮಾರ್ಟಿನ್ ಕ್ರೊವ್ ಅವರು ಅನಿಲ್ ಕುಂಬ್ಳೆ ಎಸೆತದಲ್ಲಿ ಔಟಾಗಿದ್ದರು. ಚೆಂಡು ಲೆಗ್‌ಸ್ಟಂಪ್‌ನಿಂದ ಹೊರಗೆ ಸಾಗಿತ್ತು. ಭಾರತದ ಅಂಪೈರ್ ಔಟ್ ಕೊಟ್ಟಿದ್ದರು. ಈಗ ಡಿಆರ್‌ಎಸ್‌ ಬಂದಿರುವುದರಿಂದ ಮರುಪರಿಶೀಲನೆ ಮನವಿ ಸಲ್ಲಿಸಲು ಆಟಗಾರರಿಗೆ ಅವಕಾಶ ಇದೆ. ಆದ್ದರಿಂದ ಒಳ್ಳೆಯದೇ ಆಗಿದೆ. ತಟಸ್ಥ ಅಂಪೈರಿಂಗ್ ಆರಂಭವಾದ ನಂತರ ಮತ್ತು ಮೊದಲು ಎಲ್‌ಬಿಡಬ್ಲ್ಯು ತೀರ್ಪುಗಳ  ಅಂಕಿ ಅಂಶಗಳ ಸಮೀಕ್ಷೆ ಮಾಡಬಹುದು’ ಎಂದು ಗುಹಾ ಹೇಳಿದರು.

ಮೈಕ್ ಅವರು ಬರೆದ ‘ಆನ್ ಕ್ರಿಕೆಟ್’ ಪುಸ್ತಕದ ಕೆಲವು ಅಧ್ಯಾಯಗಳಲ್ಲಿರುವ ವಿಷಯಗಳ ಕುರಿತು ಕ್ರೀಡಾ ಲೇಖಕ ಸುರೇಶ್ ಮೆನನ್ ಅವರು ಮೈಕ್ ಜೊತೆಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಅವರು ಇಂಗ್ಲೆಂಡ್ ಮತ್ತು ಭಾರತ ಕ್ರಿಕೆಟ್‌ನ ಹಲವು ಸ್ವಾರಸ್ಯಕರ ಘಟನೆಗಳ ಮೆಲುಕು ಹಾಕಿದರು. ಹಿರಿಯ ಕ್ರಿಕೆಟಿಗ ಎರ್ರಪಳ್ಳಿ ಪ್ರಸನ್ನ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !