ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಬಂದ ಮೇಲೆ ದೇಶದಲ್ಲಿ ಬೆಲೆ ಏರಿಕೆ, ಜನರ ಬದುಕು ದುಸ್ತರ: ಸೋನಿಯಾ ಗಾಂಧಿ

Last Updated 8 ಮೇ 2018, 11:35 IST
ಅಕ್ಷರ ಗಾತ್ರ

ವಿಜಯಪುರ: ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಬೆಲೆ ಏರಿಕೆ ಉಂಟಾಗಿದ್ದು, ಜನರ ಬದುಕು ದುಸ್ತರವಾಗಿದೆ ಎಂದು ಸೋನಿಯಾ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದರು.

ವಿಜಯಪುರ ಸಂತರು, ಮಹಾಪುರುಷರು ಜನಿಸಿದ ಪುಣ್ಯ ಭೂಮಿ, ಇಲ್ಲಿ ಸಾಂಸ್ಕೃತಿಕ ಸಂಗಮ ಇದೆ. ಒಬ್ಬರಿಗೊಬ್ಬರು ಹೊಂದಿಕೊಂಡು ಬದುಕುವುದು ಇಲ್ಲಿನ ಸಾಮಾನ್ಯ ಸಂಗತಿ. ಇದು ದೇಶಕ್ಕೇ ಮಾದರಿ. ತುಂಬಾ ಖುಷಿಯಿಂದ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಸೋನಿಯಾ ಗಾಂಧಿ ತಿಳಿಸಿದರು.

ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಜಯಪುರದಲ್ಲಿ ನಾವು ಏನು ಮಾಡಿದ್ದೇವೆ ಅನ್ನೋದಕ್ಕೆ ನೀವೇ ಸಾಕ್ಷಿ. ಕೇಂದ್ರದಲ್ಲಿ ಮೋದಿ ಅವರು ಹೇಗೆ ಸರ್ಕಾರ ನಡೆಸುತ್ತಿದ್ದಾರೆ ಅನ್ನೋದು ನಿಮಗೆಲ್ಲ ಗೊತ್ತೆ ಇದೇ?  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾಜದ ಎಲ್ಲರ ಕಲ್ಯಾಣಕ್ಕೆ ಯೋಜನೆಗಳನ್ನು ಜಾರಿ ಮಾಡಿದೆ. ನಮ್ಮ ಸರ್ಕಾರ ಒಂದೆಡೆ ಕರ್ನಾಟಕವನ್ನು ದೇಶದ ನಂ.1 ರಾಜ್ಯ ಮಾಡಿದೆ. ಇನ್ನೊಂದೆಡೆ ಬಡವರಿಗಾಗಿ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರ ಭಾಗ್ಯದಂಥ ಯೋಜನೆಗಳ ಮೂಲಕ ಬಡವರ ಕಲ್ಯಾಣವನ್ನು ರಾಜ್ಯ ಸರ್ಕಾರ ಮಾಡಿದೆ ಎಂದರು.

ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಎಲ್ಲ ಬಡವರೂ ಊಟ ಮಾಡಬಹುದು. ಇದನ್ನು ಕಾಂಗ್ರೆಸ್ ವಿರೋಧಿಗಳು ವಿರೋಧಿಸುತ್ತಿದ್ದಾರೆ. ನಾವು ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಿದಾಗಲೂ ಬಿಜೆಪಿ ಮತ್ತು ನರೇಂದ್ರ ಮೋದಿ ಅದನ್ನು ವಿರೋಧಿಸಿದ್ದರು. ರಾಜ್ಯದ ರೈತರು ಸತತ ಬರಗಾಲ ಎದುರಿಸುತ್ತಿದ್ದಾರೆ. ಕಳೆದ ಸಲ ಬರದ ತೀವ್ರತೆಯಿಂದ ಜನರು ಕಷ್ಟಪಟ್ಟರು. ಜನರ ಕಷ್ಟ ಅರಿತ ಮುಖ್ಯಮಂತ್ರಿ, ಮೋದಿ ಅವರ ಸಮಯ ಕೇಳಿದ್ದರು ಆದರೆ ಮೋದಿ ಮುಖ್ಯಮಂತ್ರಿಗೆ ಸಮಯ ಕೊಡಲಿಲ್ಲ. ಮಾನ್ಯ ಮೋದಿ ಅವರು ನೀವು ಕೇವಲ ನಮ್ಮ ಮುಖ್ಯಮಂತ್ರಿಗೆ ಮಾತ್ರವಲ್ಲ, ಇಡೀ ಕರ್ನಾಟಕ ರಾಜ್ಯಕ್ಕೇ ಅವಮಾನ ಮಾಡಿದಿರಿ ಎಂದು ಸೋನಿಯಾ ಗಾಂಧಿ ಅವರು ಪ್ರಧಾನಿಯವರನ್ನು ತರಾಟೆಗೆ ತೆಗೆದುಕೊಂಡರು.

ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೆ ಮೋದಿ ಸರ್ಕಾರ ಸಾವಿರಾರು ಖರ್ಚು ಮಾಡಿತು. ಆದರೆ ಕರ್ನಾಟಕಕ್ಕೆ ನಯಾಪೈಸೆ ಕೊಡಲಿಲ್ಲ. ಮೋದಿ ಅವರೇ ಇದೇನಾ ನಿಮ್ಮ ಸಬ್‌ಕಾ ಸಾತ್, ಸಬ್‌ ಕಾ ವಿಕಾಸ್ ? ನಮ್ಮ ಸಿದ್ದರಾಮಯ್ಯನವರು ರೈತರಿಗಾಗಿ ಸ್ವಂತ ಬಲದ ಯೋಜನೆ ರೂಪಿಸಿದರು. ಇವತ್ತು ಕರ್ನಾಟಕವು ಹಣ್ಣು ಮತ್ತು ಮಸಾಲೆ ಪದಾರ್ಥ ರಫ್ತು ಮಾಡುವ ಮುಖ್ಯ ರಾಜ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಳು ಮಾಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ಮೋದಿ ಸರ್ಕಾರ ಕಾಂಗ್ರೆಸ್ ಮುಕ್ತ ಭಾರತದ ಮಾತು ಆಡ್ತಿದೆ, ಮೋದಿಜಿ, ಕಾಂಗ್ರೆಸ್ ಮುಕ್ತ ಭಾರತದ ವಿಚಾರ ಅಂತಿರಲ್ಲ, ನಿಮ್ಮ ಕಥೆ ಏನಾಗ್ತಿದೆ ಅಂತ ಮೊದಲು ತಿಳಿದುಕೊಳ್ಳಿ ಎಂದರು.

ಮೋದಿ ಅವರು ಒಳ್ಳೇ ಮಾತುಗಾರರಿದ್ದಾರೆ. ಆದರೆ ಈ ಮಾತುಗಳಿಂದ ದೇಶದ ಅಭಿವೃದ್ಧಿ ಆಗುತ್ತಾ? ಜನರಿಗೆ ಒಳ್ಳೇದಾಗುತ್ತಾ? ಕೇವಲ ಭಾಷಣಗಳಿಂದ ಏನಾಗುತ್ತೆ ಮೋದಿಜಿ? ಮೋದಿಜಿ, ಜನರಿಗೆ ಅನ್ನ, ನೀರು, ವಸತಿ ಬೇಕು. ಯುವಜನರಿಗೆ ಉದ್ಯೋಗ ಬೇಕು. ಹಳ್ಳಿಗಳಿಗೆ ಆಸ್ಪತ್ರೆ ಸೇವೆ ಬೇಕು. ನಿಮ್ಮ ಬಣ್ಣದ ಮಾತುಗಳಿಂದ ಇದೆಲ್ಲಾ ಸಾಧ್ಯವೇ? ನಮ್ಮ ದೇಶದಲ್ಲಿ ಹಿಂದೆಂದೂ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿರಲಿಲ್ಲ. ಜನರ ಬದುಕು ದುಸ್ತರವಾಗಿದೆ. ಪೆಟ್ರೊಲಿಯಂ ಉತ್ಪನ್ನಗಳ ಬೆಲೆ ಒಂದೇ ಸಮನೆ ಜಾಸ್ತಿ ಆಗ್ತಿದೆ, ಮೋದಿಜಿ ನೀವು ಕೇವಲ ಮಾತಾಡ್ತೀರಿ. ನಿಮಗೆ ಜನರ ನಿಜವಾದ ಸಮಸ್ಯೆಗಳ ಬಗ್ಗೆ ಗೊತ್ತಿದೆಯೇ? ಮಹಿಳೆಯರು, ಬಾಲಕಿಯರು, ದಲಿತರ ಸುರಕ್ಷೆಗೆ ಮೋದಿಜಿ ನಾಲ್ಕು ವರ್ಷಗಳಲ್ಲಿ ಏನು ಮಾಡಿದ್ದೀರಿ? ರೈತರಿಗಾಗಿ ಏನು ಮಾಡಿದಿರಿ? ಎಂದು ಪ್ರಶ್ನೆ ಮಾಡಿದರು.

ಅಧಿಕಾರಕ್ಕೆ ಬಂದು ನಾಲ್ಕುವರ್ಷಗಳಾದರೂ ಲೋಕಪಾಲ್ ಏಕೆ ಜಾರಿ ಮಾಡಲಿಲ್ಲ? ಭ್ರಷ್ಟಾಚಾರ ಕಡಿಮೆ ಮಾಡಲು ಏನು ಮಾಡಿದ್ದೀರಿ? ವಿಜಯಪುರ ಬಸವತತ್ವದ ಕೇಂದ್ರ. ಜನರನ್ನು ಬೆಸೆಯುತ್ತದೆ. ಒಂದು ಕಡೆಗೆ ತರುತ್ತೆ. ಮೋದಿಜಿ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ತಿದ್ದಾರೆ. ಬಿಜೆಪಿಯ ಇಂಥ ಚುನಾವಣೆ ತಂತ್ರಗಳು ಯಶಸ್ವಿಯಾಗಲು ನಾವು ಬಿಡಲ್ಲ ಎಂದರು.

ಕಾಂಗ್ರೆಸ್‌ಗೆ ಮತ್ತೊಮ್ಮೆ ಆಶೀರ್ವಾದ ಮಾಡುವ ಮೂಲಕ ಬಿಜೆಪಿಯ ಕುತಂತ್ರಗಳಿಗೆ, ಬಸವತತ್ವ ವಿರೋಧಿಗಳಿಗೆ ಉತ್ತರ ಹೇಳಿ. ದೂರದಿಂದ ಬಂದ ಎಲ್ಲರಿಗೂ ಧನ್ಯವಾದ. ಎಲ್ಲ ವರ್ಗದವರನ್ನು ಜೊತೆಗೆ ಕರೆದುಕೊಂಡು ಹೋಗಿ, ಅಭಿವೃದ್ಧಿಯತ್ತ ಮುನ್ನಡೆಯೋಣ ಎನ್ನುತ್ತ
ಜೈಹಿಂದ್, ಜೈ ಕರ್ನಾಟಕ ಘೋಷಣೆಯೊಂದಿಗೆ ಭಾಷಣ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT