ಸೋಮವಾರ, ಸೆಪ್ಟೆಂಬರ್ 23, 2019
24 °C
ಅಂಕಿತ್‌ ಬಾವ್ನೆ ಶತಕ, ಇಂಡಿಯಾ ರೆಡ್‌ ಮುನ್ನಡೆ

ದುಲೀಪ್‌ ಟ್ರೋಫಿ ಕ್ರಿಕೆಟ್: ಆವೇಶ್‌ಖಾನ್‌ ಬೌಲಿಂಗ್‌ ವೈಭವ

Published:
Updated:
Prajavani

ಬೆಂಗಳೂರು: ಆವೇಶ್‌ ಖಾನ್‌ (58ಕ್ಕೆ 4) ಬೌಲಿಂಗ್‌ ಪರಾಕ್ರಮದ ಎದುರು ಅಂಕಿತ್‌ ಬಾವ್ನೆ ಗಳಿಸಿದ ಶತಕ (ಔಟಾಗದೆ 121, 254 ಎಸೆತ, 14 ಬೌಂಡರಿ) ವ್ಯರ್ಥವಾಯಿತು. ದುಲೀಪ್‌ ಟ್ರೋಫಿ ಪಂದ್ಯದ ಮೂರನೇ ದಿನವಾದ ಭಾನುವಾರ ಇಂಡಿಯಾ ಬ್ಲೂ ತಂಡ ಮೊದಲ ಇನಿಂಗ್ಸ್‌ನಲ್ಲಿ 255 ರನ್‌ ಗಳಿಸಿ ಆಲ್‌ ಔಟ್‌ ಆಯಿತು.

ಆ ಮೂಲಕ ಇಂಡಿಯಾ ರೆಡ್‌ ತಂಡ 30 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತು.

ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಡಿಯಾ ರೆಡ್‌ ತಂಡ 2 ವಿಕೆಟ್‌ಗೆ 93 ರನ್‌ ಗಳಿಸಿದೆ. ಇದರೊಂದಿಗೆ ಒಟ್ಟು 123 ರನ್‌ಗಳ ಮುನ್ನಡೆ ಗಳಿಸಿದೆ.

ಪಂದ್ಯದ ಎರಡನೇ ದಿನವಾದ ಶನಿವಾರ 3 ವಿಕೆಟ್‌ಗೆ 74ರನ್‌ಗಳಿಂದ ಬ್ಯಾಟಿಂಗ್‌ ಮುಂದುವರಿಸಿದ ಬ್ಲೂ ತಂಡಕ್ಕೆ ಮಧ್ಯಮ ವೇಗಿಗಳಾದ ಆವೇಶ್‌ ಖಾನ್‌ (58ಕ್ಕೆ4), ಜೈದೇವ್‌ ಉನದ್ಕತ್‌ (52ಕ್ಕೆ 3) ಹಾಗೂ ಸ್ಪಿನ್ನರ್‌ ಅಕ್ಷಯ್‌ ವಾಖರೆ (32ಕ್ಕೆ 3) ಆಘಾತ ನೀಡಿದರು. ಒಂದು ಹಂತದಲ್ಲಿ 193 ರನ್‌ 3 ವಿಕೆಟ್‌ ಕಳೆದುಕೊಂಡಿದ್ದ ಬ್ಲೂ ತಂಡ 208 ರನ್‌ ಆಗುವಷ್ಟರಲ್ಲಿ 8 ವಿಕೆಟ್‌ ಕೈಚೆಲ್ಲಿತ್ತು.

ಅಂಕಿತ್‌ ಬಾವ್ನೆ ಹಾಗೂ ಅನ್ಮೋಲ್‌ಪ್ರೀತ್‌ ಸಿಂಗ್‌ (56) ನಾಲ್ಕನೇ ವಿಕೆಟ್‌ಗೆ 129 ರನ್‌ ಪೇರಿಸಿದರು. 

ಎರಡನೇ ಇನಿಂಗ್ಸ್ ಆರಂಭಿಸಿದ ರೆಡ್‌ ತಂಡಕ್ಕೆ ದಿವೇಶ್‌ ಪಠಾಣಿಯಾ ಆರಂಭಿಕ ಆಘಾತ ನೀಡಿದರು. ನಾಯಕ ಪ್ರಿಯಾಂಕ್‌ ಪಾಂಚಾಲ್‌ (9) ಅವರನ್ನು ಔಟ್‌ ಮಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ತಪ್ಪಿಸಿಕೊಂಡಿದ್ದ ಕನ್ನಡಿಗ ಕರುಣ್‌ ನಾಯರ್‌ (ಔಟಾಗದೆ 43, 55 ಎಸೆತ, 7 ಬೌಂಡರಿ) ಹಾಗೂ ಶತಕವೀರ ಕಲ್ಸಿ (ಔಟಾಗದೆ 21) ಕ್ರೀಸ್‌ನಲ್ಲಿದ್ದಾರೆ.

ಅಭಿಮನ್ಯು ಈಶ್ವರನ್‌ (18) ಅವರು ಜಲಜ್‌ ಸಕ್ಸೇನಾ ಅವರಿಗೆ ವಿಕೆಟ್‌ ಒಪ್ಪಿಸಿದರು.

ಸಂಕ್ಷಿಪ್ತ ಸ್ಕೋರು: ಇಂಡಿಯಾ ರೆಡ್‌ ಮೊದಲ ಇನಿಂಗ್ಸ್: 124 ಓವರ್‌ಗಳಲ್ಲಿ 285 (ಅಂಕಿತ್‌ ಕಲ್ಸಿ 105, ಕರುಣ್‌ ನಾಯರ್‌ 99; ದಿವೇಶ್‌ ಪಠಾಣಿಯಾ 55ಕ್ಕೆ 4). ಇಂಡಿಯಾ ಬ್ಲೂ ಮೊದಲ ಇನಿಂಗ್ಸ್: 83.2 ಓವರ್‌ಗಳಲ್ಲಿ 255 (ಅಂಕಿತ್ ಬಾವ್ನೆ ಔಟಾಗದೆ 121, ಅನ್ಮೋಲ್‌ಪ್ರೀತ್‌ ಸಿಂಗ್‌ 56, ಋತುರಾಜ್‌ ಗಾಯಕವಾಡ 37; ಆವೇಶ್‌ ಖಾನ್‌ 58ಕ್ಕೆ 4, ಜೈದೇವ್‌ ಉನದ್ಕತ್‌ 52ಕ್ಕೆ 3, ಅಕ್ಷಯ್‌ ವಾಖರೆ 32ಕ್ಕೆ 3).

ಇಂಡಿಯಾ ರೆಡ್‌ ಎರಡನೇ ಇನಿಂಗ್ಸ್: 22 ಓವರ್‌ಗಳಲ್ಲಿ 2 ವಿಕೆಟ್‌ಗೆ 93 (ಕರುಣ್‌ ನಾಯರ್‌ ಔಟಾಗದೆ 43, ಅಂಕಿತ್‌ ಕಲ್ಸಿ ಔಟಾಗದೆ 21)

Post Comments (+)