ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗೆ ದಕ್ಷಿಣ– ಪಶ್ಚಿಮ ವಲಯ ಪೈಪೋಟಿ

ದುಲೀಪ್‌ ಟ್ರೋಫಿ: ಸೆಮಿಯಲ್ಲಿ ದಕ್ಷಿಣ ವಲಯಕ್ಕೆ 645 ರನ್‌ ಗೆಲುವು
Last Updated 18 ಸೆಪ್ಟೆಂಬರ್ 2022, 12:47 IST
ಅಕ್ಷರ ಗಾತ್ರ

ಸೇಲಂ, ತಮಿಳುನಾಡು: ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ ತಂಡಗಳು ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ್ದು, ಪ್ರಶಸ್ತಿಗೆ ಪೈಪೋಟಿ ನಡೆಸಲಿವೆ.

ಸೇಲಂನಲ್ಲಿ ಭಾನುವಾರ ಕೊನೆಗೊಂಡ ಸೆಮಿಫೈನಲ್‌ನಲ್ಲಿ ಹನುಮ ವಿಹಾರಿ ನೇತೃತ್ವದ ದಕ್ಷಿಣ ವಲಯ ತಂಡ, ಉತ್ತರ ವಲಯ ವಿರುದ್ಧ 645 ರನ್‌ಗಳ ಜಯ ಪಡೆಯಿತು. ದೇಸಿ ಕ್ರಿಕೆಟ್‌ನ ಪ್ರಥಮ ದರ್ಜೆ ಪಂದ್ಯವೊಂದರಲ್ಲಿ ದಾಖಲಾದ ಅತಿದೊಡ್ಡ ಗೆಲುವುಗಳಲ್ಲಿ ಇದೂ ಒಂದು.

ಅಂತಿಮ ದಿನ 4 ವಿಕೆಟ್‌ಗೆ 316 ರನ್‌ ಗಳಿಸಿ ಎರಡನೇ ಇನಿಂಗ್ಸ್‌ ಡಿಕ್ಲೇರ್ಡ್‌ ಮಾಡಿದ ದಕ್ಷಿಣ ವಲಯ, ಎದುರಾಳಿಗಳ ಗೆಲುವಿಗೆ 740 ರನ್‌ಗಳ ಗುರಿ ನೀಡಿತು. ಗುರಿ ಬೆನ್ನಟ್ಟಿದ ಉತ್ತರ ವಲಯ 94 ರನ್‌ಗಳಿಗೆ ಆಲೌಟಾಯಿತು.

ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ ಪಡೆದಿದ್ದ ಆರ್‌.ಸಾಯಿ ಕಿಶೋರ್‌ (28ಕ್ಕೆ 3) ಎರಡನೇ ಇನಿಂಗ್ಸ್‌ನಲ್ಲೂ ಕೈಚಳಕ ತೋರಿ ಪಂದ್ಯದಲ್ಲಿ ಒಟ್ಟಾರೆ 98 ರನ್‌ಗಳಿಗೆ 10 ವಿಕೆಟ್‌ ಸಾಧನೆ ಮಾಡಿದರು. ಉತ್ತರ ವಲಯ ತಂಡದ ಯಶ್‌ ಧೂಲ್‌ (59) ಮತ್ತು ಮನನ್‌ ವೊಹ್ರಾ (11) ಮಾತ್ರ ಎರಡಂಕಿಯ ಮೊತ್ತ ಗಳಿಸಿದರು.

ಪಶ್ಚಿಮ ವಲಯ ಜಯಭೇರಿ: ಕೊಯಮತ್ತೂರಿನಲ್ಲಿ ನಡೆದ ಇನ್ನೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಪಶ್ಚಿಮ ವಲಯ, 279 ರನ್‌ಗಳಿಂದ ಕೇಂದ್ರ ವಲಯ ತಂಡವನ್ನು ಮಣಿಸಿತು.

ಗೆಲುವಿಗೆ 501 ರನ್‌ಗಳ ಗುರಿ ಪಡೆದಿದ್ದ ಕೇಂದ್ರ ವಲಯ, 57.1 ಓವರ್‌ಗಳಲ್ಲಿ 221 ರನ್‌ಗಳಿಗೆ ಆಲೌಟಾಯಿತು. 72 ರನ್‌ಗಳಿಗೆ 5 ವಿಕೆಟ್‌ ಪಡೆದ ಶಮ್ಸ್‌ ಮುಲಾನಿ ಅವರು ಪಶ್ಚಿಮ ವಲಯದ ಗೆಲುವಿನ ಹಾದಿ ಸುಗಮಗೊಳಿಸಿದರು.

ದುಲೀಪ್‌ ಟ್ರೋಫಿ ಫೈನಲ್‌ ಪಂದ್ಯ ಸೆ.21 ರಿಂದ 25ರ ವರೆಗೆ ಕೊಯಮತ್ತೂರಿನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ದಕ್ಷಿಣ ವಲಯ 8 ವಿಕೆಟ್‌ಗೆ 630 ಡಿಕ್ಲೇರ್ಡ್. ಉತ್ತರ ವಲಯ 67 ಓವರ್‌ಗಳಲ್ಲಿ 207. ಎರಡನೇ ಇನಿಂಗ್ಸ್‌: ದಕ್ಷಿಣ ವಲಯ 65 ಓವರ್‌ಗಳಲ್ಲಿ 4 ವಿಕೆಟ್‌ಗೆ 316 ಡಿಕ್ಲೇರ್ಡ್‌ (ಮಯಂಕ್‌ ಅಗರವಾಲ್‌ 64, ರವಿ ತೇಜ ಔಟಾಗದೆ 104, ಮನೀಷ್‌ ಪಾಂಡೆ 26, ಪುಲಕಿತ್‌ ನಾರಂಗ್‌ 102ಕ್ಕೆ 2) ಉತ್ತರ ವಲಯ 30.4 ಓವರ್‌ಗಳಲ್ಲಿ 94 (ಯಶ್‌ ಧೂಲ್‌ 59, ಆರ್‌.ಸಾಯಿ ಕಿಶೋರ್‌ 28ಕ್ಕೆ 3, ತನಯ್‌ ತ್ಯಾಗರಾಜನ್‌ 12ಕ್ಕೆ 3, ಕೆ.ಗೌತಮ್‌ 50ಕ್ಕೆ 3) ಫಲಿತಾಂಶ: ದಕ್ಷಿಣ ವಲಯಕ್ಕೆ 645 ರನ್‌ ಗೆಲುವು

ಕೊಯಮತ್ತೂರಿನ ಪಂದ್ಯ: ಮೊದಲ ಇನಿಂಗ್ಸ್‌: ಪಶ್ಚಿಮ ವಲಯ: 257. ಕೇಂದ್ರ ವಲಯ: 128. ಎರಡನೇ ಇನಿಂಗ್ಸ್‌: ಪಶ್ಚಿಮ ವಲಯ 371. ಕೇಂದ್ರ ವಲಯ 57.1 ಓವರ್‌ಗಳಲ್ಲಿ 221 (ರಿಂಕು ಸಿಂಗ್‌ 65, ಕುಮಾರ ಕಾರ್ತಿಕೇಯ 39, ಶಮ್ಸ್‌ ಮುಲಾನಿ 72ಕ್ಕೆ 5, ಚಿಂತನ್‌ ಗಜ 49ಕ್ಕೆ 3) ಫಲಿತಾಂಶ: ಪಶ್ಚಿಮ ವಲಯಕ್ಕೆ 279 ರನ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT