ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗದ ‘ನ್ಯಾಷನಲ್ ಐಕಾನ್’ ಆಗಿ ಸಚಿನ್ ತೆಂಡೂಲ್ಕರ್ ನೇಮಕಕ್ಕೆ ನಿರ್ಧಾರ

Published 22 ಆಗಸ್ಟ್ 2023, 10:10 IST
Last Updated 22 ಆಗಸ್ಟ್ 2023, 10:10 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಮತದಾರರನ್ನು ಉತ್ತೇಜಿಸುವ ದೃಷ್ಟಿಯಿಂದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಚುನಾವಣಾ ಆಯೋಗದ ‘ನ್ಯಾಷನಲ್ ಐಕಾನ್’ಆಗಿ ನೇಮಕ ಮಾಡಲು ನಿರ್ಧರಿಸಲಾಗಿದೆ.

ಈ ಕುರಿತ ಜ್ಞಾಪನಾ ಪತ್ರಕ್ಕೆ ಸಹಿ ಹಾಕುವ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ಚುನಾವಣಾ ಆಯೋಗದ ನಡುವೆ ನಾಳೆ(ಆಗಸ್ಟ್ 23) ಒಪ್ಪಂದ ಏರ್ಪಡಲಿದೆ. 3 ವರ್ಷಗಳ ಈ ಒಪ್ಪಂದದಡಿ ಸಚಿನ್ , ಮತದಾನದ ಕುರಿತಂತೆ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

‘ಮುಂಬರುವ 2024ರ ಲೋಕಸಭಾ ಚುನಾವಣೆ ಸೇರಿದಂತೆ ಮತದಾನ ಪ್ರಕ್ರಿಯೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಚಿನ್ ತೆಂಡೂಲ್ಕರ್ ಅವರು ಯುವಕರ ಮೇಲೆ ಹೊಂದಿರುವ ಅಪ್ರತಿಮ ಪ್ರಭಾವದ ಬಳಕೆಯ ಮಹತ್ವದ ಹೆಜ್ಜೆ ಇದಾಗಿದೆ’ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ನಗರಗಳ ಮತ್ತು ಯುವ ಮತದಾರರಲ್ಲಿ ಮತದಾನದ ಕುರಿತಾಗಿ ಇರುವ ನಿರಾಸಕ್ತಿಯನ್ನು ತೊಡೆದುಹಾಕುವ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸುವುದು ಈ ಒಪ್ಪಂದದ ಹಿಂದಿನ ಚುನಾವಣಾ ಆಯೋಗದ ಉದ್ದೇಶವಾಗಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತೇಜನಕ್ಕಾಗಿ ದೇಶದ ವಿವಿಧ ಕ್ಷೇತ್ರಗಳ ಹೆಸರಾಂತ ವ್ಯಕ್ತಿಗಳನ್ನು ನ್ಯಾಷನಲ್ ಐಕಾನ್ ಆಗಿ ಚುನಾವಣಾ ಆಯೋಗ ನೇಮಕ ಮಾಡಿಕೊಳ್ಳುತ್ತದೆ.

ಕಳೆದ ವರ್ಷ ನಟ ಪಂಕಜ್ ತ್ರಿಪಾಠಿ ಅವರನ್ನು ಆಯೋಗದ ನ್ಯಾಷನಲ್ ಐಕಾನ್ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. 2019ರ ಲೋಕಸಭಾ ಚುನಾವಣೆ ಸಂದರ್ಭ ಎಂ.ಎಸ್. ಧೋನಿ, ಅಮೀರ್ ಖಾನ್ ಮತ್ತು ಮೇರಿ ಕೋಮ್ ಅವರು ಚುನಾವಣಾ ಆಯೋಗದ ಐಕಾನ್ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT