ಭಾನುವಾರ, ಸೆಪ್ಟೆಂಬರ್ 15, 2019
27 °C

ಪಶ್ಚಾತ್ತಾಪ ಪಟ್ಟ ಬೆನ್‌ ಸ್ಟೋಕ್ಸ್

Published:
Updated:
Prajavani

ಲಂಡನ್‌: ವಿಶ್ವಕಪ್‌ ಫೈನಲ್‌ನ ಕೊನೆಯ ಓವರಿನಲ್ಲಿ ಇಂಗ್ಲೆಂಡ್‌ ಇನಿಂಗ್ಸ್‌ ವೇಳೆ ಬೆನ್‌ ಸ್ಟೋಕ್ಸ್‌ ಎರಡನೇ ರನ್‌ ಪೂರೈಸುತ್ತಿದ್ದಂತೆ, ಮಾರ್ಟಿನ್‌ ಗುಪ್ಟಿಲ್‌ ಎಸೆದ ಥ್ರೊ ಡೈವ್ ಮಾಡಿದ ಅವರ ಬ್ಯಾಟಿಗೆ ತಾಗಿ ಬೌಂಡರಿಗೆ ಧಾವಿಸಿತ್ತು. ಹೆಚ್ಚುವರಿ ನಾಲ್ಕು ಸೇರಿ ಒಟ್ಟು ಆರು ರನ್‌ ಬಂದಿದ್ದು ನ್ಯೂಜಿಲೆಂಡ್‌ ಪಾಲಿಗೆ ದುಬಾರಿಯಾಯಿತು. ನಂತರದ್ದೆಲ್ಲ ಇತಿಹಾಸ. ಅಜೇಯ 84 ರನ್‌ ಗಳಿಸಿದ ಸ್ಟೋಕ್ಸ್‌ ಹೀರೊ ಆದರು.

ಆದರೆ ಸ್ಟೋಕ್ಸ್‌ ಇದಕ್ಕಾಗಿ ಪಶ್ಚಾತ್ತಾಪವನ್ನೂ ಪ‍ಟ್ಟಿದ್ದಾರೆ. ತಮ್ಮ ಬ್ಯಾಟಿಗೆ ತಾಗಿ ಚೆಂಡು ಓವರ್‌ ಥ್ರೊ ಬೌಂಡರಿ ಆಗುತ್ತಿದ್ದಂತೆ ಸ್ಟೋಕ್ಸ್‌, ಕ್ಷಮೆಯಾಚನೆಯ ರೀತಿಯಲ್ಲಿ ಕೈ ಎತ್ತಿದ್ದರು. ‘ಈ ಘಟನೆಗಾಗಿ ಜೀವನಪರ್ಯಂತ ವಿಲಿಯಮ್ಸನ್‌ ಕ್ಷಮೆ ಯಾಚಿಸುವೆ’ ಎಂದು ಪಂದ್ಯದ ನಂತರ ಹೇಳಿದ್ದಾರೆ. ಅವರ ಹೇಳಿಕೆಯನ್ನು ನ್ಯೂಜಿಲೆಂಡ್‌ ಹೆರಾಲ್ಡ್‌ನ ವೆಬ್‌ಸೈಟ್‌ ವರದಿಯಲ್ಲಿ ಉಲ್ಲೇಖಿಸಿದೆ.

‘ಮಾತನಾಡಲು ಪದಗಳೇ ಬರುತ್ತಿಲ್ಲ. ಶ್ರಮಪಟ್ಟು ಫೈನಲ್‌ಗೆ ಬಂದಿದ್ದೆವು. ಚಾಂಪಿಯನ್‌ ಕೂಡ ಆದೆವು. ಇದೊಂದು ಅದ್ಭುತ ಅನುಭವ. ನ್ಯೂಜಿಲೆಂಡ್‌ ತಂಡದವರು ಸಭ್ಯರು. ಆದರೆ ಹೀಗೆಲ್ಲ ಆಗಬೇಕೆಂದು ಮೊದಲೇ ನಮ್ಮ ಅದೃಷ್ಟದಲ್ಲಿ ಬರೆದಿತ್ತೇನೊ’ ಎಂದಿದ್ದಾರೆ.

Post Comments (+)