ಮಂಗಳವಾರ, ಸೆಪ್ಟೆಂಬರ್ 21, 2021
25 °C

ವೆಸ್ಟ್ ಇಂಡೀಸ್‌ ಎದುರು ಬೆನ್ ಸ್ಟೋಕ್ಸ್‌ ಆಲ್‌ರೌಂಡ್ ಆಟ: ಇಂಗ್ಲೆಂಡ್‌ಗೆ ಗೆಲುವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಂಚೆಸ್ಟರ್: ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿ ಇಂಗ್ಲೆಂಡ್‌ಗೆ ಬೃಹತ್ ಮೊತ್ತ ಗಳಿಸಿಕೊಟ್ಟ ಬೆನ್ ಸ್ಟೋಕ್ಸ್ ಎರಡನೇ ಇನಿಂಗ್ಸ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಬೌಲಿಂಗ್‌ನಲ್ಲೂ ಮಿಂಚಿ ತಂಡಕ್ಕೆ ಭರ್ಜರಿ ಗೆಲುವು ದೊರಕಿಸಿಕೊಟ್ಟರು.

ಇಲ್ಲಿನ ಓಲ್ಡ್ ಟ್ರಾಫರ್ಡ್‌ನಲ್ಲಿ ಸೋಮವಾರ ಕೊನೆಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು 113 ರನ್‌ಗಳ ಜಯ ಸಾಧಿಸಿದರು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿದರು. ಕೊನೆಯ ದಿನ ಗೆಲುವಿಗಾಗಿ 312 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 198 ರನ್‌ಗಳಿಗೆ ಪತನಗೊಂಡಿತು.

ಮೊದಲ ಇನಿಂಗ್ಸ್‌ನಲ್ಲಿ 182 ರನ್‌ಗಳ ಮುನ್ನಡೆ ಗಳಿಸಿದ್ದ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ ಸ್ಟೋಕ್ಸ್‌ಗೆ ಬಡ್ತಿ ನೀಡಿತ್ತು. ಇನಿಂಗ್ಸ್ ಆರಂಭಿಸಿದ ಅವರು 57 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳೊಂದಿಗೆ ಅಜೇಯ 78 ರನ್‌ ಗಳಿಸಿದರು. ಬಳಿಕ ನಾಯಕ ಜೋ ರೂಟ್ ಇನಿಂಗ್ಸ್ ಡಿಕ್ಲೇರ್ ಮಾಡಿದರು.

ಸ್ಟುವರ್ಟ್ ಬ್ರಾಡ್ ವೆಸ್ಟ್ ಇಂಡೀಸ್‌ಗೆ ಆರಂಭದಲ್ಲಿ ಪೆಟ್ಟು ನೀಡಿದರು. ಜಾನ್ ಕ್ಯಾಂಬೆಲ್, ವಿಕೆಟ್‌ಕೀಪರ್ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿದರು. ಎಂಟನೇ ಓವರ್‌ನಲ್ಲಿ ಕ್ರೇಗ್ ಬ್ರಾಥ್‌ವೇಟ್ ವೇಗಿ ಕ್ರಿಸ್ ವೋಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಶಾಯ್ ಹೋಪ್ ಮತ್ತು ರಾಸ್ಟನ್ ಚೇಸ್ ಔಟಾದಾಗ ತಂಡದ ಮೊತ್ತ 37ಕ್ಕೆ4. ನಂತರ ಶಮಾರ ಬ್ರೂಕ್ಸ್ (62; 136 ಎಸೆತ, 2 ಸಿಕ್ಸರ್, 4 ಬೌಂಡರಿ) ಮತ್ತು ಮೊದಲ ಪಂದ್ಯದ ಹೀರೊ ಜರ್ಮೈನ್ ಬ್ಲ್ಯಾಕ್‌ವುಡ್ (55; 88 ಎ, 7 ಬೌಂಡರಿ) ಶತಕದ ಜೊತೆಯಾಟವಾಡಿ ಭರವಸೆ ತುಂಬಿದರು. ಚಹಾ ವಿರಾಮಕ್ಕೆ ಮುನ್ನ ಬ್ಲ್ಯಾಕ್‌ವುಡ್ ವಿಕೆಟ್ ಪತನಗೊಳ್ಳುವುದರೊಂದಿಗೆ ವಿಂಡೀಸ್‌ ಪಾಳಯ ಆತಂಕಗೊಂಡಿತು. ವಿರಾಮದ ನಂತರ ಇಂಗ್ಲೆಂಡ್ ಹಿಡಿತ ಬಿಗಿಗೊಳಿಸಿ ಗೆಲುವು ಒಲಿಸಿಕೊಂಡಿತು.

ಸಂಕ್ಷಿ‌ಪ್ತ ಸ್ಕೋರು: ಮೊದಲ ಇನಿಂಗ್ಸ್‌, ಇಂಗ್ಲೆಂಡ್‌: 9ಕ್ಕೆ 469 ಡಿಕ್ಲೇರ್‌; ವೆಸ್ಟ್ ಇಂಡೀಸ್‌: 287; ಎರಡನೇ ಇನಿಂಗ್ಸ್‌, ಇಂಗ್ಲೆಂಡ್‌:19 ಓವರ್‌ಗಳಲ್ಲಿ 3ಕ್ಕೆ 129 ಡಿಕ್ಲೇರ್ (ಬೆನ್ ಸ್ಟೋಕ್ಸ್ ಔಟಾಗದೆ 78, ಜೋ ರೂಟ್ 22, ಪಾಪ್ ಔಟಾಗದೆ 12; ಕೆಮರ್ ರೋಚ್ 37ಕ್ಕೆ2); ವೆಸ್ಟ್ ಇಂಡೀಸ್: 70.1 ಓವರ್‌ಗಳಲ್ಲಿ 198 (ಶಮ್ರಾ ಬ್ರೂಕ್ಸ್‌  62, ಜರ್ಮೈನ್ ಬ್ಲ್ಯಾಕ್‌ವುಡ್ 55, ಜೇಸನ್ ಹೋಲ್ಡರ್ 35; ಸ್ಟುವರ್ಟ್ ಬ್ರಾಡ್ 42ಕ್ಕೆ3, ಕ್ರಿಸ್ ವೋಕ್ಸ್ 34ಕ್ಕೆ2, ಸ್ಯಾಮ್ ಕರನ್ 30ಕ್ಕೆ1, ಡಾಮ್ ಬೆಸ್ 59ಕ್ಕೆ2, ಬೆನ್‌ ಸ್ಟೋಕ್ಸ್ 30ಕ್ಕೆ2).

ಫಲಿತಾಂಶ: ಇಂಗ್ಲೆಂಡ್‌ಗೆ 113 ರನ್‌ಗಳ ಜಯ; ಮೂರು ಪಂದ್ಯಗಳ ಸರಣಿ 1–1ರಲ್ಲಿ ಸಮ. ಮುಂದಿನ ಪಂದ್ಯ: ಜುಲೈ 24ರಿಂದ, ಮ್ಯಾಂಚೆಸ್ಟರ್‌ನಲ್ಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು