ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕನೇ ಟೆಸ್ಟ್: ಭಾರತದ ವೇಗಿಗಳ ದಾಳಿಗೆ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ತತ್ತರ

ಭೋಜನ ವಿರಾಮದ ವೇಳೆ 57 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆತಿಥೇಯರು
Last Updated 30 ಆಗಸ್ಟ್ 2018, 12:17 IST
ಅಕ್ಷರ ಗಾತ್ರ

ಸೌಥಾಂಪ್ಟನ್‌: ಭಾರತದ ವೇಗದ ಬೌಲಿಂಗ್ ಜೋಡಿ ಜಸ್‌ಪ್ರೀತ್ ಬೂಮ್ರಾ ಮತ್ತು ಇಶಾಂತ್ ಶರ್ಮಾ ಅವರ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌ ಇಲ್ಲಿ ಗುರುವಾರ ಆರಂಭಗೊಂಡ ನಾಲ್ಕನೇ ಟೆಸ್ಟ್‌ನ ಭೋಜನ ವಿರಾಮದ ವೇಳೆ 57 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಮೂರನೇ ಪಂದ್ಯದಲ್ಲಿ ಭಾರಿ ಅಂತರದಿಂದ ಸೋತಿರುವ ಆತಿಥೇಯರು ಇಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಬೂಮ್ರಾ, ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಮೊದಲ ಅವಧಿಯಲ್ಲಿ ಎದುರಾಳಿಗಳನ್ನು ಕಂಗೆಡಿಸಿದರು.

ಮೊದಲ ಓವರ್‌ನಲ್ಲಿ ಬೂಮ್ರಾ ಕೇವಲ ಒಂದು ರನ್ ನೀಡಿದರು. ಇಶಾಂತ್ ಶರ್ಮಾ ಹಾಕಿದ ಎರಡನೇ ಓವರ್‌ ಮೇಡನ್ ಆಯಿತು. ಮೂರನೇ ಓವರ್‌ನಲ್ಲಿ ಬೂಮ್ರಾ ಮ್ಯಾಜಿಕ್‌ ಮಾಡಿದರು. ಲೆಗ್ ಸ್ಟಂಪ್‌ ಲೈನ್‌ನಲ್ಲಿದ್ದ ಚೆಂಡು ಪುಟಿದು ಜೆನಿಂಗ್ಸ್ ಅವರ ಕಾಲಿಗೆ ಬಡಿಯಿತು. ಚೆಂಡಿನ ಗತಿಯನ್ನು ಅಂದಾಜಿಸುವಲ್ಲಿ ಸಂಪೂರ್ಣ ವಿಫಲರಾದ ಜೆನಿಂಗ್ಸ್‌ ಎಲ್‌ಬಿಡಬ್ಲ್ಯು ಆಗಿ ಮರಳಿದರು.

ಶರ್ಮಾ ಹಾಕಿದ ನಾಲ್ಕನೇ ಓವರ್‌ ಕೂಡ ಮೇಡನ್ ಆಯಿತು. ಐದನೇ ಓವರ್‌ನಲ್ಲಿ ಬೂಮ್ರಾ ಅವರ ಎಲ್‌ಬಿಡಬ್ಲ್ಯು ಬಲೆಯಲ್ಲಿ ಕುಕ್ ಸಿಲುಕಿದ್ದರು. ಆದರೆ ಅದು ನೋ ಬಾಲ್ ಆಗಿತ್ತು!

ಆರನೇ ಓವರ್‌ನ ಐದನೇ ಎಸೆತವನ್ನು ಬೌಂಡರಿಗೆ ಅಟ್ಟಿದ ಕುಕ್‌, ವೇಗದಲ್ಲಿ ಇನಿಂಗ್ಸ್ ಗಳಿಸಲು ಯತ್ನಿಸಿದರು. ಆದರೆ ಮುಂದಿನ ಓವರ್‌ನಲ್ಲಿ ನಾಯಕ ಜೋ ರೂಟ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಇಶಾಂತ್ ಶರ್ಮಾ ತಿರುಗೇಟು ನೀಡಿದರು. ಬೂಮ್ರಾ ಮತ್ತು ಶರ್ಮಾ ನಂತರವೂ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.

ಕುಕ್ ಜೊತೆಗೂಡಿದ ಜಾನಿ ಬೇಸ್ಟೊ ನಿಧಾನಗತಿಯಲ್ಲಿ ರನ್‌ ಸೇರಿಸಲು ಶ್ರಮಿಸಿದರು. ಆದರೆ 13ನೇ ಓವರ್‌ನ ಕೊನೆಯ ಎಸೆತದಲ್ಲಿ ಆತಿಥೇಯರಿಗೆ ಬೂಮ್ರಾ ಮತ್ತೊಂದು ಆಘಾತ ನೀಡಿದರು. ನೇರ ಎಸೆತವನ್ನು ಬ್ಯಾಕ್‌ಫೂಟ್‌ನಲ್ಲಿ ಆಡಲು ಶ್ರಮಿಸಿದ ಬೇಸ್ಟೊ, ವಿಕೆಟ್‌ ಕೀಪರ್‌ ರಿಷಭ್ ಪಂತ್‌ಗೆ ಕ್ಯಾಚ್ ನೀಡಿ ಮರಳಿದರು.

14ನೇ ಓವರ್‌ನಲ್ಲಿ ಚೆಂಡನ್ನು ಹಾರ್ದಿಕ್ ಪಾಂಡ್ಯ ಅವರ ಕೈಗೆ ನೀಡಿದ ನಾಯಕ ಕೊಹ್ಲಿ ಫಲ ಕಂಡರು. ಮೊದಲ ಎರಡು ಓವರ್‌ಗಳಲ್ಲಿ ಐದು ರನ್ ನೀಡಿದ ಪಾಂಡ್ಯ ತಮ್ಮ ಮೂರನೇ ಓವರ್‌ನಲ್ಲಿ ಅಪಾಯಕಾರಿ ಕುಕ್ ವಿಕೆಟ್ ಪಡೆದು ಇನಿಂಗ್ಸ್‌ಗೆ ಮತ್ತೊಂದು ತಿರುವು ನೀಡಿದರು. ಇನ್ನೊಂದು ತುದಿಯಲ್ಲಿ ಮೊಹಮ್ಮದ್ ಶಮಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. 23ನೇ ಓವರ್‌ನಲ್ಲಿ ಶಮಿ ಅವರಿಗೆ ಜೋಸ್ ಬಟ್ಲರ್ ವಿಕೆಟ್ ಪಡೆಯುವ ಅವಕಾಶ ಲಭಿಸಿತ್ತು. ಆದರೆ ಆದರೆ ರಿಷಭ್ ಪಂತ್ ಕ್ಯಾಚ್ ಕೈಚೆಲ್ಲಿದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 24 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 57 (ಅಲಸ್ಟೇರ್ ಕುಕ್‌ 17, ಬೆನ್ ಸ್ಟೋಕ್ಸ್‌ ಔಟಾಗದೆ 12, ಜೋಸ್ ಬಟ್ಲರ್‌ ಔಟಾಗದೆ 13; ಜಸ್‌ಪ್ರೀತ್ ಬೂಮ್ರಾ 21ಕ್ಕೆ2, ಇಶಾಂತ್ ಶರ್ಮಾ 7ಕ್ಕೆ1, ಹಾರ್ದಿಕ್‌ ಪಾಂಡ್ಯ 16ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT